ಮುಂಬೈ, ಸೆ. 5: ಡ್ಯಾನ್ಸ್ ತರಗತಿಗೆ ಹೋಗಲು ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ಪತಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ಅಡುಗೆ ಮಾಡುವ ಬದಲು ಪತ್ನಿ ಡ್ಯಾನ್ಸ್ ತರಗತಿಗೆ ಹಾಜರಾಗಲು ಮುಂದಾಗಿದ್ದಕ್ಕೆ ದಂಪತಿ ಮಧ್ಯೆ ವಾಗ್ವಾದ ನಡೆದಿದೆ. ಜಗಳ ಅತಿರೇಕಕ್ಕೆ ಹೋಗಿ ಪತಿಯು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ (Crime News). ಪರಿಣಾಮ 38 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ.
ಆರೋಪಿ ಪತಿಯನ್ನು ಬಂಧಿಸಿದ ಪೊಲೀಸರು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತಳನ್ನು ಯಾಮಿನಿ ಕೃಷ್ಣ ಲಾಲ್ ಯಾದವ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು 41 ವರ್ಷದ ಕೃಷ್ಣ ಲಾಲ್ ಯಾದವ್ ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.
ಕೃಷ್ಣ ಲಾಲ್ ಕೆಲಸದಿಂದ ಮನೆಗೆ ಹಿಂತಿರುಗಿದಾಗ ತನಗೆ ಮತ್ತು ಮಕ್ಕಳಿಗೂ ಅಡುಗೆ ತಯಾರಿಸುವಂತೆ ಯಾಮಿನಿಗೆ ಹೇಳಿದ್ದಾನೆ. ಆದರೆ, ಯಾಮಿನಿ ತಮ್ಮ ವಸತಿ ಸಂಘದಲ್ಲಿ ನೃತ್ಯ ತರಗತಿಗೆ ಹಾಜರಾಗಲು ತಯಾರಾಗುತ್ತಿದ್ದಳು. ಹೀಗಾಗಿ ಅಡುಗೆ ಮಾಡಲು ನಿರಾಕರಿಸಿದಳು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಸಾಲದ ಬಡ್ಡಿ ಪಾವತಿಸದ್ದಕ್ಕೆ ಯುವತಿಯನ್ನು ವಿವಸ್ತ್ರಗೊಳಿಸಿ ವಿಡಿಯೊ ರೆಕಾರ್ಡ್ ಮಾಡಿದ ಕಿಡಿಗೇಡಿಗಳು
ಆ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ಕೃಷ್ಣ ಲಾಲ್, ತಮ್ಮ ಇಬ್ಬರು ಮಕ್ಕಳ ಮುಂದೆಯೇ ಯಾಮಿನಿಯ ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ನಂತರ ಯಾಮಿನಿ ತನ್ನ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರವಾದ ನೋವು ಆಗುತ್ತಿರುವುದಾಗಿ ಹೇಳಿದ್ದಾಳೆ. ತನಗೆ ಪೇನ್ ಕಿಲ್ಲರ್ ಮಾತ್ರೆ ತರುವಂತೆ ಪತಿಯಲ್ಲಿ ಕೇಳಿಕೊಂಡಿದ್ದಾಳೆ. ಕೂಡಲೇ ಮೆಡಿಕಲ್ ಶಾಪ್‌ಗೆ ಕೃಷ್ಣ ಲಾಲ್ ತೆರಳಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಅದು ಮುಚ್ಚಲ್ಪಟ್ಟಿದ್ದರಿಂದ ಔಷಧ ಇಲ್ಲದೆ ಮನೆಗೆ ಹಿಂತಿರುಗಿದ್ದಾನೆ.
ಯಾಮಿನಿಯ ಸ್ಥಿತಿ ಹದಗೆಡುತ್ತಲೇ ಇತ್ತು. ಆಂತರಿಕವಾಗಿ ಗಂಭೀರವಾದ ಗಾಯಗಳಿಂದಾಗಿ ಆಕೆಯ ಹೊಟ್ಟೆ ಊದಿಕೊಳ್ಳಲು ಪ್ರಾರಂಭಿಸಿತು. ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಳು. ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಕುತ್ತಿಗೆ ಮೂಳೆ ಮುರಿತ ಮತ್ತು ಕರುಳಿಗೆ ತೀವ್ರ ಹಾನಿ ಸೇರಿದಂತೆ ಗಂಭೀರ ಗಾಯಗಳನ್ನು ಬಹಿರಂಗಪಡಿಸಿತು. ಸಹಜ ಸಾವು ಎಂದು ನಂಬಿದ್ದ ಯಾಮಿನಿಯ ಕುಟುಂಬ ಬಳಿಕ ಆಕೆಯ ಪತಿಯ ವಿರುದ್ಧ ಕೊಲೆ ಆರೋಪದ ದೂರು ದಾಖಲಿಸಿತು.
ಪ್ರಕರಣ ಸಂಬಂಧ ಆರೋಪಿ ಕೃಷ್ಣ ಲಾಲ್‌ನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.