ಬೆಂಗಳೂರು: ಜಾತಿ ಸಮೀಕ್ಷೆ ಅವಧಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಾಲೆಗಳ ದಸರಾ ರಜೆಯನ್ನೂ (Dasara Holidays) ವಿಸ್ತರಣೆ ಮಾಡಿದೆ. ಈ ಮೂಲಕ ಮಂಗಳವಾರಕ್ಕೆ (ಅ.7) ಮುಕ್ತಾಯವಾಗಬೇಕಿದ್ದ ರಜೆ, ಅಕ್ಟೋಬರ್ 18ವರೆಗೂ ವಿಸ್ತರಣೆಯಾಗಿದೆ. ಶಿಕ್ಷಕರನ್ನು ಜಾತಿ ಸಮೀಕ್ಷೆಗೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ದಸರಾ ರಜೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ. ಸಮೀಕ್ಷೆ ಇವತ್ತು ಮುಗಿಯಬೇಕಿತ್ತು. ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ. ಕೊಪ್ಪಳ ಶೇ. 97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 67 ರಷ್ಟು ಆಗಿದೆ. ಹೀಗೆ ವ್ಯತ್ಯಾಸಗಳಿವೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚಿಸಿದ್ದಾರೆ. 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ ಒಂದು ಲಕ್ಷ ಅರವತ್ತು ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿದ್ದಾರೆ. ಈ ಮನವಿ ಪುರಸ್ಕರಿಸಿ ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ್ದೇವೆ. 8 working days ರಜೆ ಘೋಷಿಸಲಾಗಿದೆ. ಇದೇ 12ನೇ ತಾರೀಕಿನಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 6,700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿವೆ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚತುರ್ದಷಿ ಒಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ.
ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು ಎಂದರು.
ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವವರ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಏರಿಯಾದಲ್ಲಿ ತಡವಾಗಿ ಸಮೀಕ್ಷೆ ಶುರುವಾಗಿದೆ. ಚುನಾವಣಾ ಆಯೋಗದ ಕೆಲಸ ಮತ್ತು ಇತರೆ ತರಬೇತಿ ಇದ್ದಿದ್ದರಿಂದ ತಡವಾಗಿ ಶುರುವಾಗಿದೆ. ಆದ್ದರಿಂದ GBA ಏರಿಯಾದಲ್ಲಿ ಸಮೀಕ್ಷೆ ಪ್ರಮಾಣ ಕಡಿಮೆ ಇದೆ ಎಂದು ಸಿಎಂ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Caste Census: ಮುಗಿಯದ ಜಾತಿ ಗಣತಿ, ಶಿಕ್ಷಕರಿಗೆ ಬಿತ್ತು ಡಬಲ್ ಡ್ಯೂಟಿ
ಶಾಲೆಗಳು ಪುನರಾರಂಭ ಯಾವಾಗ?
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ದಸರಾ ರಜೆ ನೀಡಲಾಗಿತ್ತು. ಸದ್ಯ ಸರ್ಕಾರ ಅಕ್ಟೋಬರ್ 18 ವರೆಗೂ ರಜೆ ವಿಸ್ತರಣೆ ಮಾಡಿದೆ. ಅಕ್ಟೋಬರ್ 19 ಭಾನುವಾರವಾಗಿದ್ದು, ಅಕ್ಟೋಬರ್ 20 ಹಾಗೂ 22 ಕ್ಕೆ ದೀಪಾವಳಿ ರಜೆ ಇರುವುದರಿಂದ ಶಾಲೆಗಳು ಬಹುತೇಕ ಹಬ್ಬಗಳು ಮುಗಿದ ಬಳಿಕವೇ ಆರಂಭವಾಗಲಿವೆ.