ಬೆಂಗಳೂರು: ತಮ್ಮ ಉದ್ಯೋಗಿಗಳಿಗೆ ಕೆಲಸದ ಜೊತೆಯಲ್ಲೇ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ, ಪ್ರಮುಖ ಸ್ಟೀಲ್ ಕಂಪನಿ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ' ಮತ್ತು ಪ್ರತಿಷ್ಠಿತ 'ಬಿಟ್ಸ್ ಪಿಲಾನಿ' ಜೊತೆಯಾಗಿ ವಿಶೇಷ ಎಂಬಿಎ ಕೋರ್ಸ್ ಆರಂಭಿಸಿದ್ದವು. ಇದರ ಮೊದಲ ಬ್ಯಾಚ್‌ಗೆ ಪದವಿ ಪ್ರದಾನ ಗುರುವಾರ ನಡೆಯಿತು.
ಗುಜರಾತ್‌ನ ಹಜೀರಾದಲ್ಲಿರುವ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಪ್ಲಾಂಟ್‌ನಲ್ಲಿ ನಡೆದ ಈ ಅದ್ಧೂರಿ ಘಟಿಕೋತ್ಸವ ಸಮಾರಂಭದಲ್ಲಿ ಉದ್ಯೋಗಿಗಳಿಗೆ ಪದವಿ ಪತ್ರ ಗಳನ್ನು ವಿತರಿಸಲಾಯಿತು. ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಏನಿದು ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್?
ಉದ್ಯೋಗಿಗಳು ತಮ್ಮ ಕೆಲಸವನ್ನು ಬಿಡದೆಯೇ ಹೊಸ ಕೌಶಲ್ಯಗಳನ್ನು ಕಲಿಯಲು 'ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗ್ರಾಮ್' ಸಹಾಯ ಮಾಡುತ್ತದೆ. ಈಗಾಗಲೇ ಬಿಟ್ಸ್ ಪಿಲಾನಿ ಜೊತೆ ಸೇರಿ 'ಬಿ.ಟೆಕ್ ಪ್ರೊಸೆಸ್ ಎಂಜಿನಿಯರಿಂಗ್' ಕೋರ್ಸ್ ಅನ್ನು ಯಶಸ್ವಿಯಾಗಿ ನಡೆಸಿದ್ದ ಕಂಪನಿ, ಭವಿಷ್ಯದ ಲೀಡರ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ 'ಮ್ಯಾನು ಫ್ಯಾಕ್ಚರಿಂಗ್ ಮ್ಯಾನೇಜ್‌ಮೆಂಟ್ ಎಂಬಿಎ' ಕೋರ್ಸ್ ಅನ್ನು ಆರಂಭಿಸಿತ್ತು.
ಈ ಕೋರ್ಸ್‌ನ ವಿಶೇಷತೆ ಎಂದರೆ, ಇದು ಸಾಂಪ್ರದಾಯಿಕ ಎಂಬಿಎ ರೀತಿಯಲ್ಲಿ ಇಲ್ಲ. ಆಧುನಿಕ ಉಕ್ಕು ಉತ್ಪಾದನಾ ವಲಯದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿ ಸಲು, ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿತ್ತು. ಸಪ್ಲೈ ಚೈನ್ ಆಪ್ಟಿ ಮೈಸೇಶನ್, ಕಾರ್ಪೊರೇಟ್ ಹಣಕಾಸು ಮತ್ತು ನಾಯಕತ್ವದಂತಹ ಪ್ರಮುಖ ವಿಷಯಗಳ ಜೊತೆಗೆ ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ಮತ್ತು ಡೇಟಾ-ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ತರಬೇತಿ ನೀಡಲಾಗಿದೆ.
ಕಂಪನಿಗೆ ಏನು ಲಾಭ?
ಈ ಹೊಸ ತಂತ್ರಜ್ಞಾನ ಮತ್ತು ನಾಯಕತ್ವದ ಕೌಶಲ್ಯಗಳನ್ನು ಕಲಿತಿರುವ ಮೊದಲ ಬ್ಯಾಚ್‌ನ ಉದ್ಯೋಗಿಗಳು, ಈಗಾಗಲೇ ತಮ್ಮ ಕಲಿಕೆಯನ್ನು ಕಂಪನಿಯ ಕೆಲಸಗಳಲ್ಲಿ ಬಳಸುತ್ತಿದ್ದಾರೆ. ವಿಶೇಷವಾಗಿ ಸ್ಟೀಲ್ ಮೇಕಿಂಗ್ ಮತ್ತು ಡಿಜಿಟಲ್ ತಂತ್ರಜ್ಞಾನ ವಿಭಾಗ ಗಳಲ್ಲಿನ ಹಲವು ನೈಜ ಸಮಸ್ಯೆಗಳನ್ನು ಇವರು ಬಗೆಹರಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್, "ಒಂದೆಡೆ ವೃತ್ತಿಜೀವನದ ಜವಾಬ್ದಾರಿಗಳು, ಮತ್ತೊಂದೆಡೆ ಶೈಕ್ಷಣಿಕ ಉತ್ಕೃಷ್ಟತೆ... ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಯಶಸ್ವಿಯಾಗಿರುವ ಉದ್ಯೋಗಿಗಳಿಗೆ ಅಭಿನಂದನೆ ಗಳು. ನೀವೆಲ್ಲರೂ ನಿಮ್ಮ ಕಂಪನಿಗೆ ಹಾಗೂ ಸಮಾಜಕ್ಕೆ ಕೊಡುಗೆ ನೀಡಿ, 2047ರ 'ವಿಕಸಿತ್ ಭಾರತ್' ನಿರ್ಮಾಣಕ್ಕೆ ಸಹಕರಿಸಿ," ಎಂದು ಕರೆ ನೀಡಿದರು.
ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಅಶುತೋಷ್ ತೇಲಂಗ್ ಮಾತನಾಡಿ, "ನಮ್ಮ ಕಂಪನಿಯಲ್ಲಿ ನಿರಂತರ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬಿಸಿನೆಸ್ ಮತ್ತು ತಂತ್ರಜ್ಞಾನ ಎರಡನ್ನೂ ಅರ್ಥಮಾಡಿ ಕೊಳ್ಳಬಲ್ಲ ಭವಿಷ್ಯದ ನಾಯಕರನ್ನು ರೂಪಿಸುವುದು ನಮ್ಮ ಗುರಿ. ಬಿಟ್ಸ್ ಪಿಲಾನಿ ಜೊತೆಗಿನ ಈ ಸಹಯೋಗವು ಭಾರತದಲ್ಲಿ ವಿಶ್ವದರ್ಜೆಯ ಸ್ಟೀಲ್ ಉದ್ಯಮವನ್ನು ಕಟ್ಟುವ ನಮ್ಮ ಪ್ರಯಾಣಕ್ಕೆ ವೇಗ ನೀಡಲಿದೆ," ಎಂದರು.
ಬಿಟ್ಸ್ ಪಿಲಾನಿಯ ಆಫ್-ಕ್ಯಾಂಪಸ್ ಪ್ರೋಗ್ರಾಮ್ಸ್ ಉಪ ನಿರ್ದೇಶಕ ಪ್ರೊ.ಎಸ್.ಗುರು ನಾರಾಯಣನ್ ಪ್ರತಿಕ್ರಿಯಿಸಿ, "ಇಂದಿನ ಬದಲಾಗುತ್ತಿರುವ ಕೈಗಾರಿಕಾ ಕ್ಷೇತ್ರದಲ್ಲಿ ನಾಯಕತ್ವಕ್ಕೆ ಕೇವಲ ಸಾಂಪ್ರದಾಯಿಕ ಮ್ಯಾನೇಜ್‌ಮೆಂಟ್ ಕೌಶಲ್ಯಗಳಿದ್ದರೆ ಸಾಲದು. ತಂತ್ರಜ್ಞಾನ ಮತ್ತು ಸುಸ್ಥಿರ ಬೆಳವಣಿಗೆಯ ಅರಿವು ಇರಬೇಕು. ಈ ನಿಟ್ಟಿನಲ್ಲಿ ಆರ್ಸೆಲರ್ - ನಿಪ್ಪಾನ್ ಜೊತೆಗಿನ ನಮ್ಮ ಈ ಪಾಲುದಾರಿಕೆಯು 'ವರ್ಕ್-ಇಂಟಿಗ್ರೇಟೆಡ್ ಲರ್ನಿಂಗ್' ನೈಜ ಉದ್ದೇಶವನ್ನು ಸಾಬೀತುಪಡಿಸಿದೆ," ಎಂದು ಹರ್ಷ ವ್ಯಕ್ತಪಡಿಸಿದರು.