ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಹಿಂದಿದೆ 15 ವರ್ಷಗಳ ಪರಿಶ್ರಮ

ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದರ ಹಿಂದೆ ಒಂದೆರಡು ವರ್ಷಗಳ ಶ್ರಮವಲ್ಲ ಬರೋಬ್ಬರಿ 15 ವರ್ಷಗಳ ಪರಿಶ್ರಮವಿದೆ. 2011ರಿಂದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಮತದಾರರ ಮೇಲೆ ಪರಿಣಾಮ ಬೀರಲು ಪ್ರಯತ್ನಿಸುತ್ತಿದ್ದು, ಅಂತಿಮವಾಗಿ ಮತದಾರ ಈಗ ಬಿಜೆಪಿ ಕೈ ಹಿಡಿದಿದ್ದಾರೆ.

ಸಂಗ್ರಹ ಚಿತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ (west bengal) ವಿಧಾನ ಸಭೆ ಚುನಾವಣೆಯಲ್ಲಿ (Assembly election) ಕೊನೆಗೂ ಬಿಜೆಪಿ (BJP) ತನ್ನ ವಿಜಯ ಪತಾಕೆಯನ್ನು ಹಾರಿಸಿದೆ. ಮೇಲ್ನೋಟಕ್ಕೆ ಇದು ಕಳೆದ ಐದು ವರ್ಷಗಳ ಪರಿಶ್ರಮ ಎಂದೆನಿಸಿದರೂ ಇದರ ಹಿಂದೆ 15 ವರ್ಷಗಳ ಹೋರಾಟವಿದೆ. 2011ರಿಂದಲೇ ಬಿಜೆಪಿ ಇಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿತ್ತು. ಸಾಕಷ್ಟು ಏರಿಳಿತಗಳನ್ನು ಎದುರಿಸಿ ಮತದ ಪ್ರಮಾಣವನ್ನು ಶೇಕಡಾ 4.06 ರಿಂದ ಶೇಕಡಾ 37.97ಕ್ಕೆ ಹೆಚ್ಚಿಸಿಕೊಂಡಿದೆ. ಇದು ರಾಜಕೀಯ ನಡೆಯ ಪರಿಣಾಮವಲ್ಲ ಬದಲಾಗಿ ಮತದಾರರ ವಿಶ್ವಾಸ ತೋರಿರುವುದರ ಪರಿಣಾಮವಾಗಿದೆ.

ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸೋಮವಾರ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. 293 ವಿಧಾನಸಭಾ ಕ್ಷೇತ್ರಗಳಲ್ಲಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಎಂದಿನಂತೆ ಈ ಬಾರಿಯೂ ಉತ್ತರ ಮತ್ತು ನೈಋತ್ಯ ಬಂಗಾಳದಲ್ಲಿ ಬಿಜೆಪಿ ತನ್ನ ಭದ್ರಕೋಟೆಗಳನ್ನು ಉಳಿಸಿಕೊಳ್ಳುವ ಜೊತೆಗೆ ಹಲವಾರು ಟಿಎಂಸಿ ಭದ್ರಕೋಟೆಗಳಿಗೆ ಲಗ್ಗೆ ಇಟ್ಟಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ಮತದಾನ ಈ ಬಾರಿ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು: ಪ್ರಧಾನಿ ನರೇಂದ್ರ ಮೋದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದನೆ

ಬಿಜೆಪಿ ಗೆಲುವಿನ ಹಾದಿ ಹೇಗಿತ್ತು ?

2011ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಒಟ್ಟು ಮತ ಕೇವಲ ಶೇ.4.06. ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಕೂಡ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಶೇಕಡಾ 38.93 ರಷ್ಟು ಮತಗಳಿಸಿ 184 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಗ ಎಡರಂಗ ಶೇಕಡಾ 40.69 ಮತಗಳನ್ನು ಗಳಿಸಿದ್ದರೂ ಕೂಡ ಅಧಿಕಾರವನ್ನು ಕಳೆದುಕೊಂಡಿತು. ಕಾಂಗ್ರೆಸ್ ಶೇಕಡಾ 9.09ರಷ್ಟು ಮತಗಳೊಂದಿಗೆ 42 ಸ್ಥಾನಗಳನ್ನು ಗೆದ್ದುಕೊಂಡಿತ್ತು.

2016ರ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಮತ ಶೇಕಡಾ 10.16ರಷ್ಟು ಮತಗಳಿಸಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಒಂದು ರೀತಿಯಲ್ಲಿ ಇದು ಭವಿಷ್ಯದಲ್ಲಿ ಬಲವಾದ ಪ್ರತಿಸ್ಪರ್ಧಿಯಾಗುವುದನ್ನು ಗುರುತಿಸಿತು.

2021ರ ಚುನಾವಣೆಯಲ್ಲಿ ಬಿಜೆಪಿ ಶೇಕಾಡ 37.97ರಷ್ಟು ಮತಗಳಿಸಿ ರಾಜ್ಯಾದ್ಯಂತ ಮತದಾರರ ಗಮನವನ್ನು ಸೆಳೆದಿತ್ತು. ಈ ಚುನಾವಣೆಯಲ್ಲಿ ಮುಖ್ಯವಾಗಿ ಭಗಬನ್‌ಪುರ, ರಣಘಾಟ್ ಉತ್ತರ ಪುರ್ಬಾ, ಶಾಂತಿಪುರ, ರಣಘಾಟ್ ಉತ್ತರ ಪಶ್ಚಿಮ್, ಬಾಗ್ದಾ, ಮೊಯ್ನಾ ಮತ್ತು ಪುರ್ಸುರಾ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣ ಹೆಚ್ಚಾಗಿತ್ತು. ಈಗ ಅದು ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡು ಸದನದಲ್ಲಿ 77 ಸ್ಥಾನಗಳನ್ನು ಗೆದ್ದಿತು.

ತೃಣಮೂಲ ಕಾಂಗ್ರೆಸ್‌ಗೆ ಈ ಚುನಾವಣೆ ಗೆಲುವನ್ನು ತಂದುಕೊಟ್ಟರೂ ಕೂಡ ಮತಗಳ ಪಾಲು ಬಿಜೆಪಿ ಖಾತೆಯಲ್ಲಿ ಹೆಚ್ಚುತ್ತಿರುವುದು ಕಂಡು ಬಂದಿತ್ತು. ಐದು ವರ್ಷಗಳ ಹಿಂದೆ ಇದ್ದ ಶೇಕಡಾ 10.16 ರಷ್ಟಿದ್ದ ಮತಗಳ ಪ್ರಮಾಣ ಈ ಬಾರಿ ಶೇಕಡಾ 37.97ಕ್ಕೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರಮುಖ ರಾಜಕೀಯ ಬದಲಾವಣೆಯನ್ನು ಸೂಚಿಸಿತ್ತು.

ಅಕ್ರಮ ನುಸುಳುವಿಕೆಗೆ ತಡೆ, ಬಾಂಗ್ಲಾ ಗಡಿಯಲ್ಲಿ ಬೇಲಿ ನಿರ್ಮಾಣ, ಸಿಎಎ ಜಾರಿ: ಬಿಜೆಪಿಯ ಆಡಳಿತದಲ್ಲಿ ಬದಲಾಗಲಿದೆ ಪಶ್ಚಿಮ ಬಂಗಾಳದ ಚಿತ್ರಣ

ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತಳ ಊರಲು 15 ವರ್ಷಗಳ ಹಿಂದೆಯೇ ಯೋಜನೆ ಹಾಕಿಕೊಂಡಿತ್ತು. ನಿರಂತರ ಪರಿಶ್ರಮದ ಫಲವಾಗಿ ಈಗ ಅದು ರಾಜ್ಯಾದ್ಯಂತ ವಿಜಯ ಪತಾಕೆಯನ್ನು ಹಾರಿಸಿದೆ.

ವಿದ್ಯಾ ಇರ್ವತ್ತೂರು

View all posts by this author