ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ(Delhi Election 2025) ಹೊತ್ತಲ್ಲೇ, ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಸಿಎಂ ಅತಿಶಿ, ಅರವಿಂದ್ ಕೇಜ್ರಿವಾಲ್ ಬಳಿಕ ಶಾಸಕ(AAP MLA Kissing Row) ದಿನೇಶ್ ಮೋಹಾನಿಯಾ (Dinesh Mohaniya) ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ . ದಿನೇಶ್ ಮೋಹಾನಿಯಾ ಮಹಿಳೆಯೊಬ್ಬರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಶಾಸಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಂಗಮ್ ವಿಹಾರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ದಿನೇಶ್ ಮೋಹಾನಿಯಾ ಸದ್ಯ ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸಿದ್ದಾರೆ. ಇವರ ವಿರುದ್ಧ ಬಿಜೆಪಿಯ ಚಂದನ್ ಕುಮಾರ್ ಚೌಧರಿ ಮತ್ತು ಕಾಂಗ್ರೆಸ್‌ನ ಹರ್ಷ್ ಚೌಧರಿ ಕಣದಲ್ಲಿದ್ದಾರೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ 70 ವಿಧಾನಸಭಾ ಸ್ಥಾನಗಳಿಗೆ ಮತದಾನ ಆರಂಭವಾಗಿದೆ. ಫೆಬ್ರುವರಿ 8 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಯಮುನಾ ನದಿಗೆ ವಿಷ; ಕೇಜ್ರಿವಾಲ್ ಆರೋಪ
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ವಾರವಷ್ಟೇ ದೆಹಲಿಗೆ ಕಳುಹಿಸುತ್ತಿರುವ ಯಮುನಾ ನೀರಿಗೆ ವಿಷ ಬೆರೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಪ್ರಧಾನಿ ಮೋದಿ, ಹರಿಯಾಣದ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಲವು ನಾಯಕರು ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದರು. ದೆಹಲಿಯ ನೀರು ಸರಬರಾಜಿನ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕಾಗಿ ಚುನಾವಣಾ ಆಯೋಗದಿಂದ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆಮ್ ಆದ್ಮ ಪಕ್ಷದ ನಾಯಕ ಕೇಜ್ರಿವಾಲ್ ಹೇಳಿದ್ದರು.
ಈ ಸುದ್ದಿಯನ್ನೂ ಓದಿ:Delhi Election 2025: ಚುನಾವಣೆಗೆ ಸಜ್ಜಾದ ದೆಹಲಿ; ಮೂರನೇ ಬಾರಿಗೆ ಹ್ಯಾಟ್ರಿಕ್ ಬಾರಿಸುತ್ತಾ ಆಪ್?
ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ಹರಿಯಾಣವು ಯಮುನಾ ನದಿಗೆ ಕಲುಷಿತ ನೀರನ್ನು ಬಿಡುತ್ತಿದೆ ಎಂಬ ಅವರ ಹೇಳಿಕೆಗೆ ಸಂಬಂಧಿಸಿದಂತೆ ಎರಡನೇ ನೋಟಿಸ್‌ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಚುನಾವಣಾ ಆಯೋಗದ ಮುಂದೆ ಹಾಜರಾಗಿದ್ದರು.