ಕೋಲ್ಕತ್ತಾ: ಪಶ್ಚಿಮ ಬಂಗಾಳ (west bengal) ವಿಧಾನ ಸಭೆಗೆ (assembly election) ಇತ್ತೀಚೆಗೆ ನಡೆದ ಚುನಾವಣೆಯ ತೀರ್ಪು (election result 2026) ನಿಜವಾದ ಸಾರ್ವಜನಿಕ ಆದೇಶವಲ್ಲ. ಅದು ಪಿತೂರಿಯ ಫಲಿತಾಂಶವಾಗಿದೆ. ಹೀಗಾಗಿ ನಾನು ರಾಜೀನಾಮೆಯ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಮುಖ್ಯಮಂತ್ರಿ (West Bengal Chief Minister) ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅವರು ರಾಜೀನಾಮೆ ನೀಡಬೇಕು ಎನ್ನುವ ಕೂಗು ಜೋರಾಗಿದ್ದು ಇದಕ್ಕೆ ಅವರು ಪ್ರತಿಕ್ರಿಯಿಸಿದರು.
ನಾವು ನೈತಿಕವಾಗಿ ಗೆದ್ದಿದ್ದೇವೆ.ಚುನಾವಣಾ ಆಯೋಗದ ಮೂಲಕ ಅವರು ನಮ್ಮನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ. ನಾನು ಹಿಂದೆ ಬೀದಿಗಳಲ್ಲಿದ್ದೆ, ಇನ್ನು ಮುಂದೆಯೂ ಇರುತ್ತೇನೆ. ಬಿಜೆಪಿಯ ದೌರ್ಜನ್ಯಗಳನ್ನು ನಾನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ತಿಳಿಸಿದರು.
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿ; ಯಾವಾಗ ಸಿಎಂ ಆಗ್ತಾರೆ ದಳಪತಿ?
ರಾಜೀನಾಮೆ ನೀಡಲು ಯಾವುದೇ ಕಾರಣವಿ. ಹೀಗಾಗಿ ರಾಜ ಭಾವನಕ್ಕೆ ನಾನು ಯಾವ ಉದ್ದೇಶಕ್ಕಾಗಿ ಹೋಗಬೇಕು ಎಂದ ಅವರು, ನಾನು ಸೋತಿದ್ದರೆ, ಹೋಗಿ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೆ. ಆದರೆ ಈಗ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಯಾವುದೇ ರೀತಿಯಲ್ಲಿ ಒತ್ತಡ ಹೇರುವುದು ಕೂಡ ಸಾಧ್ಯವಿಲ್ಲ. ಬಲವಂತವಾಗಿ ಬಂಧಿಸಿದರೂ ಕೂಡ ರಾಜೀನಾಮೆ ನೀಡುವುದಿಲ್ಲ ಎಂದ ಅವರು, ನಮ್ಮ ಮುಂದಿನ ಕ್ರಮವನ್ನು ಸಾಮೂಹಿಕವಾಗಿ ನಿರ್ಧರಿಸಲಾಗುತ್ತದೆ. ಇದನ್ನು ಪಕ್ಷ ನಿರ್ಧರಿಸುತ್ತದೆ. ನಾನು ಒಬ್ಬಂಟಿಯಾಗಿಲ್ಲ. ನನ್ನ ಪಕ್ಷ ನನ್ನೊಂದಿಗಿದೆ. ಮುಂದಿನ ಕಾರ್ಯತಂತ್ರವನ್ನು ನಾವು ಒಟ್ಟಾಗಿ ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ಟಿಎಂಸಿಯ ಸ್ಪರ್ಧೆಯು ಬಿಜೆಪಿ ವಿರುದ್ಧವಲ್ಲ. ಚುನಾವಣಾ ಆಯೋಗದ ವಿರುದ್ಧವಾಗಿದೆ ಎಂದ ಅವರು, ಅದು ಬಿಜೆಪಿಗಾಗಿ ಕೆಲಸ ಮಾಡುತ್ತಿದೆ. ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು.
ಸುಮಾರು 100 ಸ್ಥಾನಗಳಲ್ಲಿ ಜನಾದೇಶದಲ್ಲಿ ವಂಚನೆ ಮಾಡಲಾಗಿದೆ. ಮತ ಎಣಿಕೆ ಕಾರ್ಯವನ್ನು ಉದ್ದೇಶ ಪೂರ್ವಕವಾಗಿ ನಿಧಾನಗೊಳಿಸಲಾಗಿತ್ತು. ಚುನಾವಣಾ ಆಯೋಗವು ಪಕ್ಷಪಾತದಿಂದ ವರ್ತಿಸುತ್ತಿದೆ ಎಂದರು.
ಈ ಚುನಾವಣೆಯ ಫಲಿತಾಂಶ ಪ್ರಜಾಪ್ರಭುತ್ವದ ಕ್ರೂರ ಕೊಲೆ. ನ್ಯಾಯಯುತ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ನಾನು ದೂರು ನೀಡುತ್ತಿರಲಿಲ್ಲ. ಆದರೆ ಅವರು ಮತವನ್ನು ಕದ್ದು ಗೆದ್ದಿದ್ದಾರೆ. ಇದು ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಎಂದರು.
ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಲಾಗಿದೆ. 90 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ನ್ಯಾಯಾಲಯಕ್ಕೆ ಹೋಗಿದ್ದರಿಂದ 32 ಲಕ್ಷ ಹೆಸರು ಮತ್ತೆ ಹಾಕಲಾಗಿದೆ. ಬಳಿಕ ಮತ್ತೆ ಏಳು ಲಕ್ಷ ಹೆಸರುಗಳನ್ನು ಸೇರಿಸಲಾಗಿದೆ. ಇದು ಹೇಗೆ ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.
ಚುನಾವಣಾ ಬಳಿಕ ಹಿಂಸಾಚಾರ ನಡೆದಿರುವ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಪರಿಸ್ಥಿತಿಯನ್ನು ನಿರ್ಣಯಿಸಲು 10 ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸುವುದಾಗಿ ಹೇಳಿದ ಅವರು, ಇವೆಲ್ಲವೂ ಆಧಾರರಹಿತವಾಗಿದೆ. ಮತ ಎಣಿಕೆ, ಮತದಾನದ ವೇಳೆ ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಬಿಜೆಪಿಯು ಉದ್ದೇಶಿತ ಹಿಂಸಾಚಾರವನ್ನು ಸಂಘಟಿಸುತ್ತಿದೆ ಎಂದು ಹೇಳಿದರು.
ಮಹಿಳೆಯರಿಗೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅವರು ನನ್ನ ಮೇಲೆ ಕೂಡ ಹಲ್ಲೆ ನಡೆಸಿದರು. ನನ್ನ ಹೊಟ್ಟೆ ಮತ್ತು ಬೆನ್ನಿಗೆ ಒದ್ದರು. ಎಣಿಕೆ ಕೇಂದ್ರದಿಂದ ಹೊರಗೆ ಎಸೆದರು. ನಾವು ಯಾರಿಗೆ ದೂರು ನೀಡುವುದು? ದೂರು ತೆಗೆದುಕೊಳ್ಳಬೇಕಾದವರನ್ನೆಲ್ಲ ಖರೀದಿಸಲಾಗಿದೆ ಎಂದು ಆರೋಪಿಸಿದರು.
ಅಮೆರಿಕದಿಂದ ಪಾಕಿಸ್ತಾನದವರೆಗೆ; ಬಂಗಾಳದ ಬಿಜೆಪಿ ಗೆಲುವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಬಣ್ಣಿಸಿದ್ದು ಹೀಗೆ
ನಾವು ಹುಲಿಯಂತೆ ಹೋರಾಡಿದೆವು. ಮುಂದೆ ಹೋರಾಡುತ್ತಲೇ ಇರುತ್ತೇವೆ. ನನಗೆ ಕುರ್ಚಿಗಳ ಬಗ್ಗೆ ಕಾಳಜಿ ಇಲ್ಲ. ಜನರ ಬಗ್ಗೆ ಮಾತ್ರ ಕಾಳಜಿ ಇದೆ. ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೂ ಇಂಡಿಯಾ ಮೈತ್ರಿಕೂಟದ ನಾಯಕರು ಬೆಂಬಲ ನೀಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಹೇಮಂತ್ ಸೊರೆನ್, ತೇಜಸ್ವಿ ಯಾದವ್ ಕರೆ ಮಾಡಿದರು. ಅವರೆಲ್ಲರೂ ನನ್ನೊಂದಿಗಿದ್ದಾರೆ ಎಂದರು.