ಚೆನ್ನೈ: ತಮಿಳಗ ವೆಟ್ರಿ ಕಳಗಂ (Tamil Vetri Kalagam) ಮುಖ್ಯಸ್ಥ, ನಟ ಸಿ. ಜೋಸೆಫ್ ವಿಜಯ್ (C. Joseph Vijay) ಅವರು ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ (Tamil nadu cm) ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿಗೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ (Dravidian Front Kalagam Party) ಮತ್ತು ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ (Leader of Opposition) ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಅಭಿನಂದನೆ ಸಲ್ಲಿಸಿದರು. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಶುಭಾಶಯ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರು ತಮ್ಮ ಸಂದೇಶದಲ್ಲಿ ತಮಿಳುನಾಡಿನ ಹೊಸ ಸರ್ಕಾರ ಮತ್ತು ಮುಖ್ಯಮಂತ್ರಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ನಟ ವಿಜಯ್ ಅವರಿಗೆ ಶುಭಾಶಯಗಳು. ಡಿಎಂಕೆ ಪಕ್ಷದ ನಾಯಕರು ರಾಜ್ಯ ವಿಧಾನಸಭೆಯಲ್ಲಿ ಪ್ರಾಥಮಿಕ ವಿರೋಧ ಪಕ್ಷವಾಗಿ ಜನರ ಪರವಾಗಿ ಧ್ವನಿಯನ್ನು ಎತ್ತುತ್ತದೆ ಎಂದು ಹೇಳಿದರು.
ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ ಪ್ರಕರಣ; ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಮೂವರ ಬಂಧನ
ತಮಿಳುನಾಡು ಶಾಸಕಾಂಗ ಸಭೆಯಲ್ಲಿ ತಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕಾಗಿ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರಿಗೆ ಧನ್ಯವಾದ ಹೇಳಿದ ಅವರು, ತಮಿಳುನಾಡು ವಿಧಾನಸಭೆಯಲ್ಲಿ 17ನೇ ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುವ ಮಹತ್ತರ ಜವಾಬ್ದಾರಿಯನ್ನು ನನಗೆ ವಹಿಸಿದ ಡಿಎಂಕೆ ಅಧ್ಯಕ್ಷರು, ನನ್ನ ಜೀವ ಮತ್ತು ಆತ್ಮ, ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಡಿಎಂಕೆ ವಿಧಾನಸಭಾ ಸದಸ್ಯರು, ಡಿಎಂಕೆ ಪದಾಧಿಕಾರಿಗಳು, ನಮ್ಮ ನಾಯಕ ಕಲೈಗ್ನಾರ್ ಅವರ ಸಮಕಾಲೀನರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮಿಳುನಾಡಿನ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.
ಪಕ್ಷದ ಅಧ್ಯಕ್ಷರ ಮಾರ್ಗದರ್ಶನವನ್ನು ಅನುಸರಿಸಿ ವಿಧಾನಸಭೆಯಲ್ಲಿ ನಾವು ಪ್ರಬಲ ವಿರೋಧ ಪಕ್ಷವಾಗಿ ಜನರ ಧ್ವನಿಯನ್ನು ಪ್ರತಿಧ್ವನಿಸುತ್ತೇವೆ. ಕೇವಲ ವಿರೋಧ ಪಕ್ಷವಾಗಿ ಮಾತ್ರವಲ್ಲ ಉತ್ತಮ ವಿರೋಧ ಪಕ್ಷವಾಗಿಯೂ ಡಿಎಂಕೆ ಕಾರ್ಯನಿರ್ವಹಿಸಲಿದೆ ಎಂದ ಅವರು, ನಾವು ಇಂದಿನಿಂದ ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ನಿಲ್ಲುತ್ತೇವೆ. ನನ್ನ ಮೇಲೆ ನಂಬಿಕೆಯಿಟ್ಟು ನನಗೆ ವಹಿಸಿರುವ ಈ ಜವಾಬ್ದಾರಿಗಾಗಿ ನಾನು ಶೇಕಡಾ 100ರಷ್ಟು ಸತ್ಯವಂತನಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಇದಕ್ಕೂ ಮೊದಲು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ. ಜೋಸೆಫ್ ವಿಜಯ್, ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂಗಳ ದಶಕಗಳ ರಾಜಕೀಯ ಪ್ರಾಬಲ್ಯವನ್ನು ತಮಿಳುನಾಡಿನಲ್ಲಿ ಟಿವಿಕೆ ಕೊನೆಗೊಳಿಸಿದ್ದು, ನಿಜವಾದ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಹೊಸ ಯುಗ ಆರಂಭವಾಗಿದೆ ಎಂದರು.
ಅವರು ತಮ್ಮ ಮಾತು ಮುಂದುವರಿಸಿ, ನನ್ನ ಪ್ರೀತಿಯ ಜನರೇ ನನ್ನ ಸ್ವಂತ ಕುಟುಂಬ. ನಾನು ದೈವಿಕ ಸಂದೇಶವಾಹಕ ಅಥವಾ ಪ್ರವಾದಿಯಲ್ಲ. ನಾನು ಸಾಮಾನ್ಯ ಜೀವನವನ್ನು ನಡೆಸುವ ಒಬ್ಬ ಸಾಮಾನ್ಯ ಮನುಷ್ಯ. ನಾನು ಎಂದಿಗೂ ಸುಳ್ಳು ಭರವಸೆಗಳಿಂದ ನಿಮ್ಮನ್ನು ಮೋಸಗೊಳಿಸುವುದಿಲ್ಲ. ಸಾಧ್ಯವಾದದ್ದನ್ನು ಮಾತ್ರ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದರು.
ಯುವ ಮತದಾರರು ಮತ್ತು ಮಕ್ಕಳಿಗೆ ಧನ್ಯವಾದ ಹೇಳಿದ ಅವರು, ನನ್ನನ್ನು 'ವಿಜಯ್ ಮಾಮಾ' ಎಂದು ಕರೆಯುವ ಪುಟ್ಟ ಸ್ನೇಹಿತರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ಅವರಿಂದಲೇ ಇದೆಲ್ಲವೂ ಸಂಭವಿಸಿದೆ. ನಿಮ್ಮ ಭವಿಷ್ಯಕ್ಕಾಗಿ ಕೆಲಸ ಮಾಡುವ ಮೂಲಕ ನಾನು ನಿಮಗೆ ನನ್ನ ಕೃತಜ್ಞತೆಯ ಸಾಲವನ್ನು ತೀರಿಸುತ್ತೇನೆ. ನಿಮಗಾಗಿ ಈ ವಿಜಯ್ ಮಾಮಾ ಯಾವಾಗಲೂ ಇರುತ್ತಾರೆ. ನಾವೆಲ್ಲರೂ ಒಟ್ಟಾಗಿ ತಮಿಳುನಾಡಿಗೆ ಹೊಸ ಸರ್ಕಾರವನ್ನು ನೀಡೋಣ. ಇದು ನಿಜವಾದ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಹೊಸ ಯುಗದ ಆರಂಭ ಎಂದರು.
ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಮತ್ತು ಅವರ ಸಂಪುಟ ಸದಸ್ಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.