ಕೋಲ್ಕತ್ತಾ: ಪಶ್ಚಿಮ ಬಂಗಾಳದ (west bengal) ವಿಧಾನ ಸಭಾ ಚುನಾವಣೆ (Assembly elections) ಫಲಿತಾಂಶ ಸೋಮವಾರ ಹೊರಬಿದ್ದ ಬಳಿಕ ಉಂಟಾಗಿರುವ ಗಲಭೆಯಲ್ಲಿ (Post-poll violence ) ಮೂರು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿದ್ದು, ಚುನಾವಣೋತ್ತರ ಹಿಂಸಾಚಾರ ಎರಡನೇ ದಿನವೂ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆಗೆ ಸೂಚಿಸಿರುವ ಚುನಾವಣಾ ಆಯೋಗವು ಗಲಭೆಗೆ ಕಾರಣವಾದವರ ವಿರುದ್ಧ ಶೂನ್ಯ ಸಹಿಷ್ಣುತೆಯ ಆದೇಶ ನಿರ್ದೇಶನ ನೀಡಿದೆ.
ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ದಿನಗಳಾದರೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಂದುವರಿದಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಕೋಲ್ಕತ್ತಾ, ಬಿರ್ಭುಮ್ ಮತ್ತು ಉತ್ತರ 24 ಪರಗಣಗಳಲ್ಲಿ ಒಟ್ಟು ಮೂವರ ಕೊಲೆಯಾಗಿದೆ. ಈ ಘಟನೆಗೆ ಟಿಎಂಸಿ ಮತ್ತು ಬಿಜೆಪಿ ಆರೋಪ, ಪ್ರತ್ಯಾರೋಪವನ್ನು ಮಾಡುತ್ತಿವೆ.
ಸರ್ಕಾರ ರಚಿಸಲು ಟಿವಿಕೆಯನ್ನು ಬೆಂಬಲಿಸುತ್ತಾ ಎಐಎಡಿಎಂಕೆ? ತಮಿಳುನಾಡು ರಾಜಕೀಯದಲ್ಲಿ ಭಾರೀ ಬೆಳವಣಿಗೆ
ಇದರೊಂದಿಗೆ ಅಸನ್ಸೋಲ್ ಕೈಗಾರಿಕಾ ಪ್ರದೇಶ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿರುವ ಹಲವಾರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಚೇರಿ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಲಾಗಿದೆ, ಬೆಂಕಿ ಹಚ್ಚಲಾಗಿದೆ. ರಾಣಿಗಂಜ್, ಬರ್ನ್‌ಪುರ ಮತ್ತು ಬರಾಬಾನಿಯಂತಹ ಪ್ರದೇಶಗಳಲ್ಲಿರಿವ ಟಿಎಂಸಿ ಕಚೇರಿಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ.
ಘಟನೆಗೆ ಸಂಬಂಧಿಸಿ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಅವರು ಎಲ್ಲರೂ ಶಾಂತಿಯಿಂದ ವರ್ತಿಸಲು ಪದೇ ಪದೇ ಕರೆ ನೀಡಿದರೂ ಕೂಡ ಅದನ್ನು ಕಡೆಗಣಿಸಲಾಗಿದೆ. ಪಕ್ಷದ ಸದಸ್ಯರು ಯಾವುದೇ ಅಪರಾಧದಲ್ಲಿ ಭಾಗಿಯಾದರೂ ಕೂಡ ಅವರನ್ನು ಪಕ್ಷದಿಂದ ಹೊರಹಾಕುವುದಾಗಿ ಎಚ್ಚರಿಕೆಯನ್ನು ಕೂಡ ಅವರು ನೀಡಿದ್ದಾರೆ. ಆದರೂ ಕೂಡ ಇಂತಹ ಘಟನೆಗಳು ಮುಂದುವರಿದಿದೆ.
ಬಿಜೆಪಿ ಹೆಸರು ದುರ್ಬಳಕೆ
ಬಿಜೆಪಿ ಹೆಸರನ್ನು ಬಳಸಿಕೊಂಡು ಕೆಲವು ದುಷ್ಕರ್ಮಿಗಳು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಇಬ್ಬರು ರಾಜಕೀಯ ಕಾರ್ಯಕರ್ತರು, ಒಬ್ಬರು ಬಿಜೆಪಿ ಮತ್ತು ಒಬ್ಬರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ನ್ಯೂ ಟೌನ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಥಳಿಸಿದಾಗ ಬಿಜೆಪಿ ಕಾರ್ಯಕರ್ತ ಮಧು ಮೊಂಡಲ್ ಅವರು ಮಂಗಳವಾರ ಸಾವನ್ನಪ್ಪಿದ್ದಾರೆ. ಬಿರ್ಭೂಮ್‌ನ ನಾನೂರ್‌ನಲ್ಲಿ ಟಿಎಂಸಿ ಕಾರ್ಯಕರ್ತ ಅಬೀರ್ ಶೇಖ್ ಅವರನ್ನು ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಬಿಜೆಪಿ ಮೆರವಣಿಗೆ ಮೇಲೆ ದಾಳಿ, ಟಿಎಂಸಿ ಕಾರ್ಯಕರ್ತರ ಮನೆಗಳ ಮೇಲೆ ದಾಳಿ, ರಸ್ತೆ ತಡೆ ಘಟನೆಗಳು ಕೂಡ ನಡೆದಿವೆ. ಇಂತಹ ಘಟನೆಗಳನ್ನು ಬಿಜೆಪಿ, ಟಿಎಂಸಿ ನಾಯಕರು ಖಂಡಿಸಿದ್ದರೂ ಕೂಡ ಘಟನೆಗಳ ಬಗ್ಗೆ ಆರೋಪ, ಪ್ರತ್ಯಾರೋಪಗಳನ್ನು ಮುಂದುವರಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಭಾರತೀಯ ಚುನಾವಣಾ ಆಯೋಗವು ಶೂನ್ಯ ಸಹಿಷ್ಣುತೆ ಕ್ರಮಕ್ಕೆ ಆದೇಶಿಸಿದೆ. ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಸೂಚನೆ ನೀಡಿರುವ ಆಯೋಗ ಶೂನ್ಯ ಸಹಿಷ್ಣುತೆ ವಿಧಾನವನ್ನು ಜಾರಿಗೊಳಿಸಲು ನಿರ್ದೇಶನ ನೀಡಿದೆ.