-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸಾಲಿನ ಕಾನ್ ಫೆಸ್ಟಿವಲ್‌ನ (Cannes Festival) ಓಪನಿಂಗ್ ಸೆರೆಮನಿಯಲ್ಲಿ ಬಾಲಿವುಡ್ ನಟಿ ಊರ್ವಶಿ ರೌತೇಲಾ (Urvashi Rautela) ಸಾವಿರಾರು ಕೋಟಿ ರುಪಾಯಿ ಬೆಲೆ ಬಾಳುವ ವಜ್ರ ಖಚಿತ ಡಿಸೈನರ್‌ವೇರ್ ಧರಿಸಿ, ರೆಡ್ ಕಾರ್ಪೆಟ್ ತುಳಿದಿದ್ದಾರೆ. ಅವರ ಈ ದುಬಾರಿ ಔಟ್‌ಫಿಟ್ ಇದೀಗ ಜಾಗತೀಕ ಮಟ್ಟದಲ್ಲಿ ಸುದ್ದಿಯಾಗಿದೆ. ಅಷ್ಟೇಕೆ! ಅವರು ಧರಿಸಿರುವ ಡಿಸೈನರ್‌ವೇರ್ ಕುರಿತ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾ ತುಂಬೆಲ್ಲಾ ಹರಿದಾಡುತ್ತಿವೆ. ವೈರಲ್ ಆಗಿವೆ.
ಪ್ರತಿ ಬಾರಿ ವಿಶೇಷ ಡಿಸೈನರ್‌ವೇರ್ ಧರಿಸಿ ಸುದ್ದಿಯಾಗುವ ಊರ್ವಶಿ
ಅಂದಹಾಗೆ, ಊರ್ವಶಿ ರೌತೇಲಾ ಕಾನ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿರುವುದು ಮೊದಲೇನಲ್ಲ! ಆದರೆ, ಪ್ರತಿಬಾರಿಯೂ ವಿಶೇಷ ಉಡುಗೆಗಳಲ್ಲಿ ಹಾಗೂ ಡಿಫರೆಂಟ್ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಫ್ಯಾಷನ್ ಪ್ರಿಯರ ಮೆಚ್ಚುಗೆ ಪಡೆಯುತ್ತಿದ್ದರು. ಸುದ್ದಿಯಾಗುತ್ತಿದ್ದರು. ಕಾನ್ ಫೆಸ್ಟಿವಲ್‌ನಲ್ಲಿ ಎಂತಹ ಸೆಲೆಬ್ರೆಟಿಗಳು ಭಾಗವಹಿಸಿದರೂ ಕೂಡ ಊರ್ವಶಿ ಮಾತ್ರ ತನ್ನದೇ ಆದ ಸ್ಪೆಷಲ್ ಡಿಸೈನರ್‌ವೇರ್‌ಗಳಿಂದ ಹೈಲೈಟ್ ಆಗುತ್ತಿದ್ದರು. ಈ ಬಾರಿಯೂ ಹಾಗೆಯೇ ಆಗಿದೆ. ಅವರ ವಿಭಿನ್ನ ಹಾಗೂ ಸಾವಿರಾರು ಕೋಟಿ ರೂಗಳ ದುಬಾರಿ ಡಿಸೈನರ್‌ವೇರ್ ಧರಿಸುವ ಮೂಲಕ ಮತ್ತೊಮ್ಮೆ ಜಾಗತೀಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕಾನ್ ಫೆಸ್ಟಿವಲ್‌ನ ದುಬಾರಿ ಔಟ್‌ಫಿಟ್ ಧರಿಸಿದ ಸೆಲೆಬ್ರೆಟಿ ಎಂದು ರೆಕಾರ್ಡ್ ಮಾಡಿದ್ದಾರೆ.
ಸಾವಿರ ಕೋಟಿ ಬೆಲೆಬಾಳುವ ಮಿನುಗುವ ಡಿಸೈನರ್‌ವೇರ್
ಇನ್ನು, ಊರ್ವಶಿ ರೌತೇಲಾ ಈ ಬಾರಿ ಧರಿಸಿರುವ ಡಿಸೈನರ್‌ವೇರ್ ಬೆಲೆ ಕೇಳಿದಲ್ಲಿ ಮಾತ್ರ ಎಂತಹವರು ಕೂಡ ಒಮ್ಮೆ ದಂಗಾಗುವುದಂತೂ ಸಹಜ. ಅವರ ಮಿನುಗುವ ಈ ದುಬಾರಿ ಡಿಸೈನರ್‌ವೇರ್ ಬೆಲೆ ಸರಿ ಸುಮಾರು 1,491 ರೂಪಾಯಿಗಳು. ಇದನ್ನು ನಂಬಲೇ ಬೇಕು ಎಂದಿವೆ ಬಲ್ಲ ಮೂಲಗಳು.
ಕಾನ್ ಫೆಸ್ಟಿವಲ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಊರ್ವಶಿ
ಇದುವರೆಗೂ ಕಾನ್ ಫೆಸ್ಟಿವಲ್‌ನಲ್ಲಿ ಇಷ್ಟೊಂದು ದುಬಾರಿ ಬೆಲೆಯ ಉಡುಗೆ ಯಾರೂ ಧರಿಸಿರಲಿಲ್ಲ! ಹಾಗೆನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಅವರ ಪ್ರಕಾರ, ಈ ಬಾರಿ ಊರ್ವಶಿ, ಸಾವಿರಾರು ಕೋಟಿಯ ಡಿಸೈನರ್‌ವೇರ್ ಧರಿಸಿ, ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಅವರದ್ದು ರೆಕಾರ್ಡ್ ಬ್ರೇಕಿಂಗ್ ಡಿಸೈನರ್‌ವೇರ್. ಹಾಗಾಗಿ ಗ್ಲೋಬಲ್ ಫ್ಯಾಷನ್ ಹಿಸ್ಟರಿಯಲ್ಲಿ ಇದು ದಾಖಲಾಗಲು ಕಾರಣವಾಗಿದೆ ಎನ್ನುತ್ತಾರೆ.
ಸಾವಿರ ಕೋಟಿಯ ಡಿಸೈನರ್‌ವೇರ್ ಸ್ಪೆಷಾಲಿಟಿ
ಊರ್ವಶಿ ರೌತೇಲಾ ಧರಿಸಿರುವ ಸಾವಿರಕ್ಕೂ ಹೆಚ್ಚು ಕೋಟಿ ಬೆಲೆ ಬಾಳುವ ಈ ಡಿಸೈನರ್‌ವೇರ್, ಮೆರ್ಮೈಡ್ ಸ್ಟೈಲ್ ಗೌನ್ ಆಗಿದ್ದು, ಪ್ರತಿಷ್ಠಿತ ಜಾಲಿಪೊಲಿ ಬ್ರ್ಯಾಂಡ್‌ನದ್ದಾಗಿದೆ. ತಿಳಿ ಲ್ಯಾವೆಂಡರ್ ಶೇಡ್‌ನಲ್ಲಿರುವ ಈ ಉಡುಗೆಯ ಮೇಲೆ ಸಾವಿರಗಟ್ಟಲೇ ವಜ್ರ ಖಚಿತ ಸ್ಟೋನ್‌ಗಳಿಂದ ಕ್ರಿಸ್ಟಲ್‌ನಿಂದ ಸೂಕ್ಷ್ಮವಾಗಿ ಡಿಸೈನ್ ಮಾಡಲಾಗಿದೆ. ಈ ಔಟ್‌ಫಿಟ್‌ನ ಶೀರ್ ಡಿಸೈನ್ ಗೌನನ್ನು ಪಾರದರ್ಶಕ ಉಡುಗೆಯಂತೆ ಬಿಂಬಿಸಿದೆ. ಜತೆಗೆ ಸ್ಲೀವ್‌ನ ಲಾಂಗ್ ಕೇಪ್ ಡಿಸೈನ್ ಊರ್ವಶಿಯನ್ನು ಎಂಜೆಲ್‌ನಂತೆ ಬಿಂಬಿಸಿದೆ ಎಂದು ವಿವರಿಸಿದ್ದಾರೆ ಫ್ಯಾಷನ್ ವಿಶ್ಲೇಷಕರು.
ಅತ್ಯಾಕರ್ಷಕ ಆಕ್ಸೆಸರೀಸ್
ಇವೆಲ್ಲದರ ಜತೆಗೆ ಊರ್ವಶಿಯು ಹಣೆಯ ಮೇಲೆ ಧರಿಸಿರುವ ಪಕ್ಷಿಯ ಹೇರ್ ಜ್ಯುವೆಲರಿ, ಕೈಗಳಲ್ಲಿ ಹಿಡಿದಿಡಿರುವ ದುಬಾರಿ ಕ್ಲಚ್ ಹಾಗೂ ನೆಕ್‌ಲೈನ್‌ನಂತೆ ಡಿಸೈನ್ ಮಾಡಲಾಗಿರುವ ಸ್ಟೇಟ್‌ಮೆಂಟ್ ನೆಕ್ಲೇಸ್ ಎಲ್ಲವೂ ನೂರಾರು ಸೆಲೆಬ್ರೆಟಿಗಳ ಮಧ್ಯೆಯೂ ಅವರನ್ನು ಹೈಲೈಟ್ ಮಾಡಿದೆ.
ಒಟ್ಟಿನಲ್ಲಿ, ಕಾನ್ ಫೆಸ್ಟಿವಲ್‌ನಲ್ಲಿ ಅವರ 5ನೇ ಬಾರಿಯ ರೆಡ್‌ಕಾರ್ಪೆಟ್ ವಾಕ್‌ನಲ್ಲಿ ಊರ್ವಶಿ ರೌತೇಲಾ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)