Draping Saree: ಪ್ರಿ ಡ್ರೇಪಿಂಗ್ ಸೀರೆಯ ಕಮಾಲ್!
Draping Saree: ಸೀರೆಯನ್ನು ಪ್ರಿ ಡ್ರೇಪಿಂಗ್ ಮಾಡಿಸುವುದರಿಂದ ಇಲ್ಲವೇ ಮಾಡುವುದರಿಂದ ಕ್ಷಣಾರ್ಧದಲ್ಲಿ ಭಾರಿ ರೇಷ್ಮೆ ಸೀರೆಯನ್ನೂ ನಿರಾಂತಕವಾಗಿ ಉಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್. ಆದರೆ, ಇದಕ್ಕೂ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಒಂದಿಷ್ಟು ವಿವರ ನೀಡಿದ್ದಾರೆ.
ನಿಮಗೆ ಸಮಾರಂಭಗಳಿಗೆ ಹೋಗುವಾಗ ಆತುರದಲ್ಲಿ ಪರ್ಫೆಕ್ಟ್ ಆಗಿ ಸರಿಯಾಗಿ ಸೀರೆ ಉಡಲು ಕಷ್ಟವಾಗುತ್ತಿದೆಯೇ! ಅಥವಾ ಸಮಯದ ಅಭಾವವೇ! ಹಾಗಾದಲ್ಲಿ ಈ ಬಗ್ಗೆ ಯೋಚನೆ ಬಿಟ್ಟು ಬಿಡಿ. ಬ್ಯೂಟಿ ಎಕ್ಸ್‌ಪರ್ಟ್‌ಗಳು ಹಾಗೂ ಸೀರೆ ಡ್ರೇಪರ್ಸ್ ನಿಮ್ಮ ಸೀರೆಯನ್ನು ಫಟಾಫಟ್ ಡ್ರೆಪ್ ಮಾಡಿ ಕೊಡುತ್ತಾರೆ. ಅಷ್ಟೇಕೆ! ಇತ್ತೀಚೆಗೆ ಸಾಕಷ್ಟು ಪಾರ್ಲರ್‌ಗಳು ಮನೆಗೆ ಬಂದು ಸೀರೆಯನ್ನು ಪಡೆದು ಡ್ರೆಪ್ ಮಾಡಿಕೊಟ್ಟು, ಇಂತಿಷ್ಟು ಹಣ ಪಡೆದು ಹೋಗುವ ಸೌಲಭ್ಯವನ್ನು ಪರಿಚಯಿಸಿವೆ. ಆನ್‌ಲೈನ್‌ನಲ್ಲೂ ಇಂತಹ ಸೌಲಭ್ಯ ನೀಡುವ ಜಾಹೀರಾತನ್ನು ನೋಡಬಹುದು. ಆದರೆ, ಇದಕ್ಕೂ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಡ್ರೇಪಿಂಗ್‌ಗೂ ಉಂಟು ಸೌಲಭ್ಯ
ಡ್ರೇಪಿಂಗ್ ಮಾಡುವ ಬ್ಯೂಟಿ ಎಕ್ಸ್‌ಪರ್ಟ್ ಗಂಗಾ ಪ್ರಕಾರ, ಹಿಂದಿನ ಕಾಲದಂತೆ ಇದೀಗ ಸೀರೆಯನ್ನು ಇನ್ಸ್ಟಂಟ್ ಆಗಿ ಉಡಲು ಸಮಯವಿಲ್ಲದಿದ್ದಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ! ಬದಲಿಗೆ ಸಮಾರಂಭಕ್ಕೆ ಉಡುವ ಅಗತ್ಯವಿರುವ ಸೀರೆಗಳನ್ನು ಮೊದಲೇ ಡ್ರೇಪಿಂಗ್ ಮಾಡಿಸಿ ರೆಡಿ ಇಟ್ಟುಕೊಂಡರಾಯಿತು ಎನ್ನುತ್ತಾರೆ.
ಡ್ರೇಪಿಂಗ್ ಮಾಡುವ ಸೀರೆಯನ್ನು ಆಯ್ಕೆ ಮಾಡಿ. ಎತ್ತಿಡಿ. ನಿಮ್ಮ ಸೀರೆಯನ್ನು ಡ್ರೇಪ್ ಮಾಡುವವರ ಬಳಿ ಮೊದಲೇ ತಲುಪಿಸಿ. ಇಂದಿನ ದಿನಗಳಲ್ಲಿ ಇದನ್ನು ಮನೆಗೆ ಬಂದು ಮಾಡಿಕೊಡುವವರು ಇದ್ದಾರೆ ಇಲ್ಲವಾದಲ್ಲಿ ಎಕ್ಸ್‌ಪರ್ಟ್ಸ್ ಬಳಿ ತೆಗೆದುಕೊಂಡು ಹೋದಲ್ಲಿ, ಇಂತಿಷ್ಟು ಸಮಯ ಹಾಗೂ ಶುಲ್ಕ ತೆಗೆದುಕೊಂಡು ರೆಡಿ ಮಾಡಿ ಕೊಡುತ್ತಾರೆ.
ಆನ್‌ಲೈನ್‌ನಲ್ಲಿ ಬುಕ್ ಮಾಡುವುದಾದಲ್ಲಿ, ಪಾರ್ಲರ್‌ನ ಸಂಪೂರ್ಣ ವಿವರ ಪಡೆಯಿರಿ. ಯಾವ ಸೀರೆಯನ್ನು ಡ್ರೇಪ್ ಮಾಡಿಸುವ ಉದ್ದೇಶವಿದೆಯೋ ಅದನ್ನು ಮೊದಲೇ ಆಯ್ಕೆ ಮಾಡಿ. ಸೀರೆಯ ಬ್ಲೌಸ್ ತೋರಿಸಿ.. ನಿಮ್ಮ ಅಗತ್ಯತೆ ಹಾಗೂ ಸಮಯವನ್ನು ನಮೂದಿಸಿ. ಬೆಲೆ ಬಾಳುವ ಸೀರೆಯಾದಲ್ಲಿ ಯಾವುದೇ ಕಾರಣಕ್ಕೂ ಕೊರಿಯರ್ ಮಾಡಬೇಡಿ. ಹಾಳಾಗುವ ಸಾಧ್ಯತೆ ಇರುತ್ತದೆ. ರೇಷ್ಮೆ ಹಾಗೂ ಕೊಂಚ ಹೆವ್ವಿ ವಿನ್ಯಾಸವಿರುವ ಸೀರೆಗಳನ್ನು ಮಾತ್ರ ಡ್ರೇಪ್ ಮಾಡಿಸಿ.
ಡ್ರೇಪಿಂಗ್ ಎಕ್ಸ್‌ಪರ್ಟ್ಸ್‌ಗೆ ನಿಮ್ಮ ಸೊಂಟದ ಅಳತೆ ಹಾಗೂ ಬೇಕಾಗುವ ನೆರಿಗೆ ಹಾಗೂ ಪಲ್ಲುವಿನ ಉದ್ದದ ವಿವರ ಮೊದಲೇ ತಿಳಿಸಿ. ನಿಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಮ್ಯಾಚ್ ಆಗುವಂತೆ ಉದ್ದ, ಅಗಲವನ್ನು ಅಡ್ಜಸ್ಟ್ ಮಾಡಿ ರೆಡಿ ಮಾಡಿ ಕೊಡುತ್ತಾರೆ.
ಡ್ರೇಪಿಂಗ್ ಮಾಡಿಸಿದ ಸೀರೆಯನ್ನು ಬಹಳ ದಿನಗಳ ಕಾಲ ಹಾಗೆಯೇ ಇಡಬೇಡಿ. ಸೀರೆಯಲ್ಲಿ ಲೈನ್ ಮೂಡಬಹುದು. ಉಡುವುದಾದರೇ ಮಾತ್ರ ರೆಡಿ ಮಾಡಿಸಿಡಿ.