ಸಂದರ್ಶನ: ಶೀಲಾ ಸಿ. ಶೆಟ್ಟಿ
ಬೆಂಗಳೂರಿನ ಬ್ಲೌಸ್ ಸ್ಟೈಲಿಸ್ಟ್ ಮತ್ತು ಸರ್ಪ್ರೈಸ್ ಬ್ಲೌಸ್ ಶಾಪ್ ಮಾಲೀಕರಾದ ಅಂಜಲಿ ಧರಿಸಿದ್ದ ಆರ್‌ಸಿಬಿ ಲೋಗೋ ಇರುವ ಡಿಸೈನರ್ ಬ್ಲೌಸ್ ಸದ್ಯ ಫ್ಯಾಷನ್ ಲೋಕದಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಆರ್‌ಸಿಬಿ ಟೀಮ್ ಮೇಲಿರುವ ಪ್ರೀತಿಯನ್ನು ಡಿಸೈನರ್ ಬ್ಲೌಸ್ ಮೂಲಕ ವ್ಯಕ್ತಪಡಿಸಿರುವ ಅಂಜಲಿ ಈ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ವಿಶ್ವವಾಣಿ ನ್ಯೂಸ್: ಆರ್‌ಸಿಬಿ ಥೀಮ್ ಡಿಸೈನರ್ ಬ್ಲೌಸ್ ಕಾನ್ಸೆಪ್ಟ್ ಹೇಗೆ ಮೂಡಿತು?
ಅಂಜಲಿ: ನಾನು ಮೊದಲಿನಿಂದಲೂ ಆರ್‌ಸಿಬಿ ಪ್ರೇಮಿ. ಮೊದಲಿನಿಂದಲೂ ಇದೇ ಬಿಸ್ನೆಸ್‌ನಲ್ಲಿದ್ದ ನನಗೆ ಈ ಡಿಸೈನ್ ಯಾಕೆ ಮಾಡಿಸಿ, ಧರಿಸಬಾರದು ಎಂಬ ಅಲೋಚನೆ ಇತ್ತು. ಇದೇ ಬ್ಲೌಸ್ ಮೇಲೆ ಈ ಸುಂದರವಾದ ಡಿಸೈನ್ ಮೂಡಿಸಲು ಕಾರಣವಾಯಿತು.
ವಿಶ್ವವಾಣಿ ನ್ಯೂಸ್: ಎಲ್ಲರೂ ಟೀ ಶರ್ಟ್ ಧರಿಸಿ ಆರ್‌ಸಿಬಿ ಪ್ರೇಮ ವ್ಯಕ್ತಪಡಿಸಿದರೇ, ನೀವು ಮಾತ್ರ ಸೀರೆಗೆ ಈ ಡಿಸೈನ್ ಬ್ಲೌಸ್ ಧರಿಸಿ ಪ್ರೀತಿ ತೋರ್ಪಡಿಸಿದಿರಿ! ಈ ಬಗ್ಗೆ ನೀವು ಹೇಳುವುದೇನು?
ಅಂಜಲಿ: ಪ್ರತಿಯೊಬ್ಬರು ಕ್ಯಾಶುವಲ್ ಟೀ ಶರ್ಟ್ ಧರಿಸಿ ಆರ್‌ಸಿಬಿ ಪ್ರೇಮ ವ್ಯಕ್ತಪಡಿಸುವುದು ಕಾಮನ್ ಎಂದೆನಿಸಿತು. ನಾನು ವಿಭಿನ್ನವಾಗಿ ಆರ್‌ಸಿಬಿ ಪ್ರೇಮ ವ್ಯಕ್ತಪಡಿಸಿದೆ. ಅದರ ಲೋಗೋ ಡಿಸೈನ್ ಮಾಡಿಸಿ, ಪ್ರದರ್ಶಿಸಿದೆ ಅಷ್ಟೇ!
ವಿಶ್ವವಾಣಿ ನ್ಯೂಸ್: ಈ ಆರ್‌ಸಿಬಿ ಲೋಗೋ ಇರುವ ಡಿಸೈನರ್ ಬ್ಲೌಸ್ ವಿಶೇಷತೆಯೇನು?
ಅಂಜಲಿ: ರೆಡ್ ಸಿಲ್ಕ್ ಸೀರೆಯೊಂದಿಗೆ ಕಾಂಟ್ರಸ್ಟ್ ಮ್ಯಾಚಿಂಗ್ ಮಾಡಿದ್ದು, ನೀಲಿ ವರ್ಣದ ಬ್ಲೌಸ್‌ನ ಸ್ಲೀವ್‌ಗಳ ಮೇಲೆ ಗಂಡುಭೇರುಂಡ ಹಾಗೂ 18 ಚಿತ್ತಾರವನ್ನು ಗೋಲ್ಡನ್ ಥ್ರೆಡ್‌ನಿಂದ ಡಿಸೈನ್ ಮಾಡಲಾಗಿದೆ. ಇನ್ನು, ಬ್ಲೌಸ್‌ನ ಹಿಂಭಾಗದಲ್ಲಿ ಕರ್ನಾಟಕದ ಭೂಪಟ ಡಿಸೈನ್ ಮಾಡಿದ್ದು, ಈ ಸಲವೂ ಕಪ್ ನಮ್ದೆ ಎಂಬುದನ್ನು ಬರೆದಿರುವಂತೆ ವರ್ಕ್ ಮಾಡಿ ವಿನ್ಯಾಸಗೊಳಿಸಲಾಗಿದೆ.
ವಿಶ್ವವಾಣಿ ನ್ಯೂಸ್: ಇದೇ ರೀತಿ ಬ್ಲೌಸ್‌ಗಳು ಮತ್ತಷ್ಟು ಲಭ್ಯವಿದೆಯೇ?
ಅಂಜಲಿ: ಬೇಡಿಕೆ ಹೆಚ್ಚಾದಲ್ಲಿ ಇದೇ ಡಿಸೈನ್‌ನ ಬ್ಲೌಸ್‌ಗಳನ್ನು ಕಸ್ಟಮೈಸ್ಡ್ ಮಾಡಿ ನೀಡುತ್ತೇವೆ.
ವಿಶ್ವವಾಣಿ ನ್ಯೂಸ್: ನಿಮ್ಮ ಈ ಆರ್‌ಸಿಬಿ ಬ್ಲೌಸ್ ವೈರಲ್ ಆಗಿರುವ ಬಗ್ಗೆ ನಿಮಗೆ ಅನಿಸುವುದೇನು?
ಅಂಜಲಿ: ಸದಾ ನಮ್ಮ ಶಾಪ್‌ನ ಬ್ಲೌಸ್‌ಗಳ ಬಗ್ಗೆ ಪ್ರಮೋಷನ್ ಮಾಡುತ್ತಿದ್ದೆವು. ಈ ಬಾರಿ ಆರ್‌ಸಿಬಿ ಡಿಸೈನರ್ ಬ್ಲೌಸನ್ನು ವಿಭಿನ್ನವಾಗಿ ವಿಧಾನಸೌಧದ ಮುಂದೆ ಪ್ರದರ್ಶಿಸಿ, ಅಪ್‌ಲೋಡ್ ಮಾಡಿದೆವು. ವೈರಲ್ ಆಯಿತು. ಈ ಬಗ್ಗೆ ಸಖತ್ ಖುಷಿಯಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)