ಭುವನೇಶ್ವರ, ಏಪ್ರಿಲ್ 19: ಇಲ್ಲಿನ ಕಳಿಂಗಾ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2026 (Femina Miss India World 2026) ಗ್ಯಾಂಡ್ ಫಿನಾಲೆಯಲ್ಲಿ ಗೋವಾದ ಸಾಧ್ವಿ ಸತೀಶ್ ಸೈಲ್ (Sadhvi Satish Sail) ವಿಜೇತರಾದರು. ಮಹಾರಾಷ್ಟ್ರದ ರಾಜನಂದಿನಿ ಪವಾರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಶ್ರೀ ಅದ್ವೈತ ಜಿ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಆಫ್ ಆಗಿ ಹೊರ ಹೊಮ್ಮಿದರು.
ಕೆಐಐಟಿಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಯಿತು. ಸಾಧ್ವಿ ಅವರು ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದಿನ ವಿಜೇತರಾದ ನಿಖಿತಾ ಪೋರ್ವಾಲ್, ರೇಖಾ ಪಾಂಡೆ ಹಾಗೂ ಆಯುಷಿ ಧೋಕಲಾ ನೂತನ ವಿಜೇತೆಗೆ ಕಿರೀಟ ಧಾರಣೆ ಮಾಡಿ ಶುಭ ಹಾರೈಸಿದರು.
ಪೂರ್ವ ಭಾರತದ ವಿಶ್ವವಿದ್ಯಾಲಯವೊಂದರಲ್ಲಿ ಇಂತಹ ಸ್ಪರ್ಧೆ ಈ ವರೆಗೆ ನಡೆದಿಲ್ಲ. 61ನೇ ಆವೃತ್ತಿಯ ಪ್ರತಿಷ್ಠಿತ ಸ್ಪರ್ಧೆಗೆ ಇದೇ ಮೊದಲ ಬಾರಿಗೆ ಕೆಐಐಟಿ ಕ್ಯಾಂಪಸ್ ಸಾಕ್ಷಿಯಾಯಿತು. ದೇಶದ 30 ರಾಜ್ಯಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮೊದಲ ಹಂತದಲ್ಲಿ 15 ಸ್ಪರ್ಧಿಗಳು ಹೊರಬಂದರು. ಮುಂದಿನ ಹಂತಕ್ಕೆ ಆಯ್ಕೆಯಾದ 15 ಸ್ಪರ್ಧಿಗಳಲ್ಲಿ ಕರ್ನಾಟಕದ ಖುಷಿ ರಮೇಶ್ ಕಲಕೇರಿ ಅವರೂ ಸೇರಿದ್ದರು. ಎರಡನೇ ಹಂತದಲ್ಲಿ 8 ಸ್ಪರ್ಧಿಗಳು ಆಯ್ಕೆ ಮಾಡಲಾಯಿತು. ಮೂರನೇ ಹಂತದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಅಂತಿಮವಾಗಿ ಮೂವರನ್ನು ಆಯ್ಕೆ ಮಾಡಲಾಯಿತು.
ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿಗೆ ಒಲಿದ ಮಿಸ್ ಇಂಡಿಯಾ ಕಿರೀಟ
ವರ್ಣರಂಜಿತ ವೇದಿಕೆ, ಅದ್ಬುತ ಸಾಂಸ್ಕೃತಿಕ ಕಾರ್ಯಕ್ರಮ
ಫಿನಾಲೆ ಕಾರ್ಯಕ್ರಮದಲ್ಲಿ ಕಳಿಂಗಾ ಇನ್ಸ್‌ಟಿಟ್ಯೂಟ್ ಆಫ್ ಸೋಶೀಯಲ್ ಸೈನ್ಸಸ್ (ಕೆಐಎಸ್‌ಎಸ್) ನ 25,000 ಬುಡಕಟ್ಟು ವಿದ್ಯಾರ್ಥಿನಿಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಅವರು ಹಾಜರಿದ್ದರು. ವೇದಿಕೆ ಮೇಲೆ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದವು. ಅಂತರರಾಷ್ಟ್ರೀಯ ಗುಣಮಟ್ಟದ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಎಲ್ಲಾ ನೃತ್ಯಗಳಿಗೆ ಬುಡಕಟ್ಟು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಪ್ರತಿಕ್ರಿಯೆ ನೀಡಿದ್ದು ನೋಡುಗರ ಮನಸೋರೆಗೊಳಿಸಿತು. ಸ್ಪರ್ಧೆ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಪ್ರದರ್ಶನ ಮಾಡಿದರು.
ಗೋವಾದ ಸಾಧ್ವಿ ಸತೀಶ್ ಸೈಲ್‌ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ:
ಡಾ. ಸಮಂತಾ ಅಭಿನಂದನೆ
ಸ್ಪರ್ಧಾ ವಿಜೇತರನ್ನು ಅಭಿನಂದಿಸಿ ಮಾತನಾಡಿದ ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಡಾ. ಅಚ್ಯುತ ಸಮಂತಾ ಅವರು, ಇದೊಂದು ಐತಿಹಾಸಿಕ ದಿನ. ಇಂತಹ ಸ್ಪರ್ಧೆಯನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಿದ್ದು ಹೆಮ್ಮೆಯಾಗಿದೆ. ಇದರ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.
"ಈ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ಇಡೀ ಸ್ಪರ್ಧೆಯ ಉದ್ದಕ್ಕೂ ಎಲ್ಲ ಸ್ಪರ್ಧಿಗಳು ನನ್ನೊಂದಿಗೆ ಬಲವಾದ ಬಾಂಧವ್ಯವನ್ನು ಹಂಚಿಕೊಂಡರು. ಅವರೊಂದಿಗೆ ಕಳೆದ ಸುಂದರ ಸಮಯವನ್ನು ಸದಾ ಸ್ಮರಿಸುತ್ತೇನೆ. ನನ್ನ ಎಲ್ಲಾ ಸ್ನೇಹಿತರು ವಿಜೇತರು. ನಾವು ಭಾರತವನ್ನು ಪ್ರಪಂಚದಾದ್ಯಂತ ಹೆಮ್ಮೆಪಡುವಂತೆ ಮಾಡಲು ಬಯಸುತ್ತೇವೆ" ಎಂದು ವಿಜೇತ ಸಾಧ್ವಿ ಸೈಲ್ ಹೇಳಿದರು.

ನಗದು ಬಹುಮಾನ ವಿತರಣೆ
ವಿಜೇತೆ ಸಾಧ್ವಿ ಸೈಲ್ ಅವರಿಗೆ 1 ಲಕ್ಷ ರುಪಾಯಿ, ಮೊದಲ ಮತ್ತು ಎರಡನೇ ರನ್ನರ್ ಅಪ್ ಆದವರಿಗೆ ತಲಾ 50 ಸಾವಿರ ರುಪಾಯಿಗಳ ನಗದು ಬಹುಮಾನವನ್ನು ಡಾ. ಅಚ್ಯುತ ಸಮಂತ ತಮ್ಮ ಸಂಸ್ಥೆಯ ಪರವಾಗಿ ವಿತರಿಸಿದರು. ಸಮಾರಂಭದಲ್ಲಿ ಜವಳಿ ಸಚಿವಾಲಯದ ಪ್ರತಿನಿಧಿ ಎಂ ಭೀನಾ, ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, ಪಾಲಿಕೆ ಮೇಯರ್ ಸುಲೋಚನಾ ದಾಸ್, ಟೈಮ್ಸ್ ಸಮೂಹದ ವಿನೀತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.