-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವರಮಹಾಲಕ್ಷ್ಮೀ ಹಬ್ಬದ ಸೀಸನ್‌ನಲ್ಲಿ (Varamahalaxmi festival Fashion 2026) ಟ್ರೆಡಿಷನಲ್ ಲುಕ್ ನೀಡುವ ಹಾಫ್ ಸೀರೆಗಳು ಜೆನ್ ಝೀ ಹುಡುಗಿಯರನ್ನು ಸೆಳೆದಿವೆ. ಸವಾರಿ ಮಾಡಲು ಸಜ್ಜಾಗಿವೆ. ಹೌದು, ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ವಿನ್ಯಾಸದ ಮನಮೋಹಕ ಹಾಫ್ ಸೀರೆಗಳು ಎಂಟ್ರಿ ನೀಡಿವೆ.
ಸಾಂಪ್ರದಾಯಿಕ ಲುಕ್ ನೀಡುವ ಹಾಫ್ ಸೀರೆಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಧರಿಸಿದವರನ್ನು ಗ್ರ್ಯಾಂಡ್ ಆಗಿ ಬಿಂಬಿಸುತ್ತವೆ. ಅದರಲ್ಲೂ ಈ ಬಾರಿ ಜೆನ್ ಝೀ ಹುಡುಗಿಯರ ಅಭಿಲಾಷೆಗೆ ತಕ್ಕಂತೆ ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.
ವೆರೈಟಿ ಡಿಸೈನ್‌ಗಳಲ್ಲಿ ಹಾಫ್ ಸೀರೆ
ಹಬ್ಬದ ಲುಕ್‌ಗೆ ಹೊಂದುವಂತೆ, ಕಾಂಚೀವರಂ, ಧರ್ಮಾವರಂ, ಗಾರ್ಡನ್ ರೇಷ್ಮೆ, ಬಾರ್ಡರ್ ರೇಷ್ಮೆ ಸೀರೆಯಲ್ಲಿ ಹಾಫ್ ಸೀರೆಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿವೆ. ಸೆಮಿ ಸ್ಟಿಚ್‌ನಲ್ಲಿ ಲಭ್ಯವಿರುವ ಇವನ್ನು ಅವರವರ ಬಾಡಿ ಫಿಟ್‌ಗೆ ಅನುಗುಣವಾಗಿ ಹೊಲೆಸಬಹುದು ಎನ್ನುತ್ತಾರೆ ಡಿಸೈನರ್ ರಕ್ಷಾ.
ಲಂಗ-ದಾವಣಿಯೇ ಹಾಫ್ ಸೀರೆ
ಬಹುತೇಕ ಸೀರೆ ಅಂಗಡಿಗಳಲ್ಲೂ ಇವು ದೊರೆಯುತ್ತವೆ. ಬ್ಲೌಸ್ ಹಾಗೂ ಲಂಗಕ್ಕೆ ಹಾಫ್ ಸೀರೆಯಂತೆ ಉಡಬಹುದಾದ ದಾವಣಿಯು ಸಿಗುತ್ತವೆ. ಒಟ್ಟಾರೆ ಸೆಟ್‌ನಲ್ಲಿ ದೊರೆಯುವ ಇವು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಮಾರಾಟಗಾರರು. ಇನ್ನು, ದುಬಾರಿ ಬೆಲೆಯ ಶುದ್ಧ ರೇಷ್ಮೆಯ ದಾವಣಿ-ಲಂಗ ಖರೀದಿಸಲು ಸಾಧ್ಯವಿಲ್ಲದವರು, ಸೆಮಿ ಸಿಲ್ಕ್‌ನಲ್ಲಿ ದೊರೆಯುವ ಸೆಟ್‌ನಲ್ಲೂ ಹೊಲೆಸಬಹುದು. ಊಹೆಗೂ ಮೀರಿದ ಡಿಸೈನ್ ಹಾಗೂ ಪ್ರಿಂಟ್ಸ್‌ನಲ್ಲಿ ಇವು ಲಭ್ಯ ಎನ್ನುತ್ತಾರೆ ಡಿಸೈನರ್ ಗೀತಾ ಹಾಗೂ ರಾಶಿ.
ವರಮಹಾಲಕ್ಷ್ಮಿ ಹಬ್ಬದ ಮೇಕಪ್‌ಗೆ ಇಲ್ಲಿವೆ 5 ಸಿಂಪಲ್ ಐಡಿಯಾ
ಹಾಫ್ ಸೀರೆಯ ಆಯ್ಕೆ ಹೀಗಿರಲಿ
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿ.
- ಟ್ರೆಂಡಿ ಶೇಡ್‌ನವು ಫ್ಯಾಷೆನಬಲ್ ಆಗಿ ಕಾಣುತ್ತವೆ.
- ಬ್ಲೌಸ್‌ಗೆ ಬ್ಯಾಕ್ ಬಟನ್ ಇಡಿಸುವುದರಿಂದ ಲೆಹೆಂಗಾದಂತೆಯೂ ಧರಿಸಬಹುದು.
- ಮೇಕಪ್, ಹೇರ್‌ಸ್ಟೈಲ್ ಎಲ್ಲವೂ ಎಥ್ನಿಕ್ ಲುಕ್‌ಗೆ ಮ್ಯಾಚ್ ಆಗಬೇಕು.
- ಪ್ರಿಂಟೆಡ್ನವು ಅತಿ ಹೆಚ್ಚು ಟ್ರೆಂಡಿಯಾಗಿವೆ.
- ಮಾನೋಕ್ರೋಮ್ ಶೇಡ್‌ನವು ಟ್ರೆಂಡ್‌ನಲ್ಲಿಲ್ಲ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)