ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ; 13 ಮಂದಿ ಸಾವು: 7 ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ

Hong Kong Fire: ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು ಕನಿಷ್ಠ 13 ಮಂದಿ ಬಲಿಯಾಗಿದ್ದಾರೆ. ಹಾಂಗ್‌ ಕಾಂಗ್‌ನ ತೈ ಪೊ ಜಿಲ್ಲೆಯ ಹೌಸಿಂಗ್‌ ಕಾಂಪ್ಲೆಕ್ಸ್‌ನಲ್ಲಿರುವ 7 ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಬೆಂಕಿ ವ್ಯಾಪಿಸಿದ್ದು, ಇಡೀ ಕಟ್ಟಡಗಳೇ ಹೊತ್ತಿ ಉರಿದಿವೆ. ಅಗ್ನಿಶಾಮಕ ದಳದ 128 ವಾಹನಗಳು ಮತ್ತು 57 ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಹಾಂಗ್‌ ಕಾಂಗ್‌ನಲ್ಲಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ

ಹಾಂಗ್‌ ಕಾಂಗ್‌, ನ. 26: ಹಾಂಗ್‌ ಕಾಂಗ್‌ನಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು (Fire Accident), ಕನಿಷ್ಠ 13 ಮಂದಿ ಬಲಿಯಾಗಿದ್ದಾರೆ (Hong Kong Fire). ಘಟನೆಯಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಹಾಂಗ್‌ ಕಾಂಗ್‌ನ ತೈ ಪೊ (Tai Po) ಜಿಲ್ಲೆಯ ಹೌಸಿಂಗ್‌ ಕಾಂಪ್ಲೆಕ್ಸ್‌ನಲ್ಲಿರುವ 7 ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಬೆಂಕಿ ವ್ಯಾಪಿಸಿದ್ದು, ಇಡೀ ಕಟ್ಟಡಗಳೇ ಹೊತ್ತಿ ಉರಿದಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿದ್ದು, ಕಟ್ಟಡದೊಳಗೆ ಸಿಲುಕಿರುವವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸ್ಥಳದಲ್ಲಿ 9 ಮಂದಿ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ 4 ಮಂದಿ ಅಸುನೀಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸುಮಾರು 700 ಮಂದಿಯನ್ನು ರಕ್ಷಿಸಿ ಅವರನ್ನು ತಾತ್ಕಾಲಿಕ ನಿರಾಶ್ರಿತರ ಶಿಬಿರಕ್ಕೆ ದಾಖಲಿಸಲಾಗಿದೆ. ಸದ್ಯ ಘಟನೆಯ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ.

ಹಾಂಗ್‌ ಕಾಂಗ್‌ನಲ್ಲಿ ಅಪಾರ್ಟ್‌ಮೆಂಟ್‌ಗೆ ಬೆಂಕಿ ಹರಡಿರುವ ದೃಶ್ಯ:



ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸುತ್ತಿದ್ದು, ದಟ್ಟ ಹೊಗೆ ಕಂಡು ಬಂದಿದೆ. ನ್ಯೂ ಟೆರಿಟರಿಸ್‌ನ ವಸತಿ ಸಂಕೀರ್ಣದ ಹೊರಭಾಗದಲ್ಲಿ ಸ್ಥಾಪಿಸಲಾದ ಬಿದಿರಿನ ಸ್ಕ್ಯಾಫೋಲ್ಡಿಂಗ್ (ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವ ಬಿದಿರಿನ ಅಟ್ಟಳಿಕೆ)ನಿಂದಾಗಿ ಬೆಂಕಿ ವ್ಯಾಪಿಸಿದೆ. ಸದ್ಯ ಕಟ್ಟಡದ ಮೇಲೆ ಹರಡಿದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಸತಿ ಸಂಕೀರ್ಣವು 8 ಬ್ಲಾಕ್‌ಗಳನ್ನು ಹೊಂದಿದ್ದು, ಸುಮಾರು 2,000 ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 4,800 ಜನರು ವಾಸಿಸುತ್ತಿದ್ದಾರೆ.

ಹಾಂಗ್‌ ಕಾಂಗ್‌ ಬೆಂಕಿ ದುರಂತದ ದೃಶ್ಯ:



ವಿಡಿಯೊ ವೈರಲ್‌

ವಿಡಿಯೊದಲ್ಲಿ ಒಂದಕ್ಕೊಂದು ಹತ್ತಿರದಲ್ಲಿರುವ ಹಲವು ಕಟ್ಟಡಗಳು ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಅಗ್ನಿಶಾಮಕ ದಳದವರು ಎತ್ತರದ ಏಣಿ, ಟ್ರಕ್‌ಗಳಿಂದ ಜ್ವಾಲೆಯ ಮೇಲೆ ನೀರು ಹಾಯಿಸುತ್ತಿದ್ದಾರೆ. ಅಪರಾಹ್ನ ಬೆಂಕಿ ಕಾಣಿಸಿಕೊಂಡಿತು ಎಂದು ಮೂಲಗಳು ತಿಳಿಸಿವೆ. ಅಗ್ನಿಶಾಮಕ ದಳದ 128 ವಾಹನಗಳು ಮತ್ತು 57 ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಮೃತರಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯೋರ್ವರೂ ಸೇರಿದ್ದಾರೆ. ತೀವ್ರವಾಗಿ ಗಾಯಗೊಂಡ ಅಗ್ನಿ ಶಾಮಕ ದಳದ ಅಧಿಕಾರಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ʼʼಆರಂಭದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಹಲವರು ಸಿಲುಕಿರುವ ಬಗ್ಗೆ ಕರೆ ಬಂದಿತ್ತು. ಆದರೆ ಸಂಪೂರ್ಣ ವಿವರ ಸಿಕ್ಕಿರಲಿಲ್ಲ. ನಾವು ಇಲ್ಲದೆ ಬಂದಾಗಲೇ ಪರಿಸ್ಥಿತಿಯ ಭೀಕರತೆ ಅರಿವಾಗಿದ್ದುʼʼ ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಸಿಲುಕಿರುವವರಲ್ಲಿ ಬಹುತೇಕರು ಹಿರಿಯ ನಾಗರಿಕರು ಎಂದು ತಿಳಿದು ಬಂದಿದೆ.

ಬೆಂದು ಹೋದ 12 ಮಂದಿ, ಕಿಟಕಿ ಒಡೆದು ಹೊರಜಿಗಿದ 20 ಪ್ರಯಾಣಿಕರು

ನಿರಾಶ್ರಿತರಾದ ಜನರಿಗೆ ತೈ ಪೊದಲ್ಲಿ ಜಿಲ್ಲಾ ಅಧಿಕಾರಿಗಳು ತಾತ್ಕಾಲಿಕ ಆಶ್ರಯ ತಾಣಗಳನ್ನು ತೆರೆದಿದ್ದಾರೆ. ತೈ ಪೊ ಎಂಬುದು ಹಾಂಗ್ ಕಾಂಗ್‌ನ ಉತ್ತರ ಭಾಗದಲ್ಲಿರುವ ಮತ್ತು ಚೀನಾದ ಮುಖ್ಯ ನಗರವಾದ ಶೆನ್‌ಜೆನ್‌ನ ಗಡಿಯ ಸಮೀಪದಲ್ಲಿರುವ ಉಪನಗರ. ಹಾಂಗ್ ಕಾಂಗ್‌ನಲ್ಲಿ ಕಟ್ಟಡ ನಿರ್ಮಾಣ ಮತ್ತು ನವೀಕರಣ ಯೋಜನೆಗಳಲ್ಲಿ ಬಿದಿರಿನ ಸ್ಕ್ಯಾಫೋಲ್ಡಿಂಗ್ ಬಳಕೆ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ವರ್ಷದ ಆರಂಭದಲ್ಲಿ ಸರ್ಕಾರವು ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಬಿದಿರಿನ ಸ್ಕ್ಯಾಫೋಲ್ಡಿಂಗ್ ಅನ್ನು ಹಂತಹಂತವಾಗಿ ತೆಗೆದುಹಾಕಲು ನಿರ್ಧರಿಸಿದೆ. ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಿಂದಾಗಿ ಬೆಂಕಿ ಬೃಹತ್‌ ಪ್ರಣಾಣದಲ್ಲಿ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ.