ನವದೆಹಲಿ, ಏ. 8: ಇರಾನ್ (Iran) ಮೇಲಿನ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಿರ್ಧಾರವನ್ನು ಇಸ್ರೇಲ್ (Israel) ಬೆಂಬಲಿಸುತ್ತದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಹೇಳಿದ್ದಾರೆ. ಆದರೆ ಈ ಕದನ ವಿರಾಮವು ಲೆಬನಾನ್ (Lebanon) ಅನ್ನು ಒಳಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಮಧ್ಯಪ್ರಾಚ್ಯ ಯುದ್ಧದಲ್ಲಿ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್ (shehbaz sharif) ಅವರ ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿದೆ.
ಬುಧವಾರ ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಅಮೆರಿಕ, ಇಸ್ರೇಲ್, ಇರಾನ್‌ನ ನೆರೆಯ ಅರಬ್ ರಾಷ್ಟ್ರಗಳು ಮತ್ತು ಇಡೀ ಜಗತ್ತಿಗೆ ಇರಾನ್‌ನಿಂದ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನೆಯ ಬೆದರಿಕೆ ಇಲ್ಲದಂತೆ ಮಾಡಲು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳನ್ನು ಇಸ್ರೇಲ್ ಬೆಂಬಲಿಸುತ್ತದೆ" ಎಂದು ತಿಳಿಸಿದೆ. ಮುಂಬರುವ ಮಾತುಕತೆಗಳಲ್ಲಿ ಈ ಗುರಿಗಳನ್ನು ಸಾಧಿಸಲು ಅಮೆರಿಕ ಬದ್ಧವಾಗಿದೆ ಎಂದು ಇಸ್ರೇಲ್‌ಗೆ ಭರವಸೆ ನೀಡಲಾಗಿದೆ ಎಂದು ಹೇಳಿಕೆ ಸೇರಿಸಿದೆ.
ಕದನ ವಿರಾಮದಲ್ಲಿ ಲೆಬನಾನ್ ಸೇರಿಲ್ಲ ಎಂದ ಇಸ್ರೇಲ್:
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕದನ ವಿರಾಮವು ಲೆಬನಾನ್ ಸೇರಿ ಎಲ್ಲೆಡೆ ಅನ್ವಯಿಸುತ್ತದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ನೆತನ್ಯಾಹು ಅವರಿಂದ ಈ ಸ್ಪಷ್ಟೀಕರಣ ಬಂದಿದೆ. ಮಾರ್ಚ್ 2ರಂದು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಹಿಜ್ಬುಲ್ಲಾ ಇಸ್ರೇಲ್ ನಗರಗಳ ಮೇಲೆ ರಾಕೆಟ್ ದಾಳಿ ನಡೆಸಿದ ನಂತರ ಲೆಬನಾನ್ ಈ ಯುದ್ಧಕ್ಕೆ ಸಿಲುಕಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಭಾರಿ ದಾಳಿಯಿಂದಾಗಿ ಲೆಬನಾನ್‌ನಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತು ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಕದನ ವಿರಾಮ ಮಾತುಕತೆಗೆ ಇರಾನ್ ಒಪ್ಪಿಕೊಳ್ಳಲು ಮುಖ್ಯ ಕಾರಣ ಚೀನಾ : ಡೊನಾಲ್ಡ್ ಟ್ರಂಪ್
ಮತ್ತೊಂದೆಡೆ, ಅಮೆರಿಕ ಮತ್ತು ಇರಾನ್ ಮಂಗಳವಾರ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಏಪ್ರಿಲ್ 10ರಂದು ಇಸ್ಲಾಮಾಬಾದ್‌ನಲ್ಲಿ ಅಂತಿಮ ಒಪ್ಪಂದಕ್ಕಾಗಿ ಮಾತುಕತೆ ನಡೆಯಲಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಅಂಗೀಕಾರ ಮತ್ತು ನಿರ್ಬಂಧಗಳ ತೆರವು ಸೇರಿದಂತೆ 10 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಟ್ರಂಪ್ ಇದನ್ನು ಮಾತುಕತೆಗೆ ಪೂರಕವಾದ ಆಧಾರ ಎಂದು ಪರಿಗಣಿಸಿದ್ದಾರೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದ ಸಂಘರ್ಷದ ಹಾದಿಯಲ್ಲಿ ಮಹತ್ವದ ತಿರುವು ನೀಡಿವೆ.