ನೈಜೀರಿಯಾ : ನೈಜರ್ ರಾಜ್ಯದ ಅಗ್ವಾರದ ಪಾಪಿರಿ ಸಮುದಾಯದ ಸೇಂಟ್ ಮೇರಿ (Nigeria abductions) ಕ್ಯಾಥೋಲಿಕ್ ಶಾಲೆಗೆ ಶುಕ್ರವಾರ ಮುಂಜಾನೆ ಬಂದೂಕುಧಾರಿಗಳು ನುಗ್ಗಿ 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿದ್ದಾರೆ ಎಂದು ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ (CAN) ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಶಾಲಾ ಅಪಹರಣಗಳಲ್ಲಿ ಈ ದಾಳಿಯೂ ಒಂದು ಎಂದು ವರದಿಯಾಗಿದೆ. ನೈಜರ್ ರಾಜ್ಯದ ಕೆಎನ್ ವಕ್ತಾರ ಡೇನಿಯಲ್ ಅಟೋರಿ ಅಪಹರಣದ ಕುರಿತು ಮಾತನಾಡಿದ್ದು, ಈ ಪ್ರದೇಶದಲ್ಲಿ ಭೀತಿ ಮತ್ತು ಭಯದ ವಾತಾವರಣವಿತ್ತು, ಈಗಾಗಲೇ ಅಪಹರಣಕ್ಕೊಳಗಾಗಿದ್ದ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಾನು ಶಾಲೆ ಮತ್ತು ಅಲ್ಲಿದ್ದ ಪೋಷಕರನ್ನು ಭೇಟಿ ಮಾಡಿ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ನಾವು ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದ್ದೇನೆ ಎಂದು ಅಟೋರಿ ತಿಳಿಸಿದ್ದಾರೆ. ಬೆದರಿಕೆಗಳು ಹೆಚ್ಚಾಗುತ್ತಿವೆ ಎಂಬ ಗುಪ್ತಚರ ಎಚ್ಚರಿಕೆಗಳ ಹೊರತಾಗಿಯೂ ಶಾಲೆಯನ್ನು ಮತ್ತೆ ತೆರೆಯಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಪೋಷಕರಲ್ಲಿ ಕಳವಳ ಹೆಚ್ಚುತ್ತಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದೆ ಮತ್ತು ಪರಿಸ್ಥಿತಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆಡಳಿತ ಹೇಳಿಕೊಂಡಿದೆ. ತರಗತಿಗಳನ್ನು ಪುನರಾರಂಭಿಸುವ ಮೊದಲು ಅನುಮತಿ ಪಡೆಯಲು ವಿಫಲವಾಗಿದೆ ಎಂದು ನೈಜರ್ ರಾಜ್ಯ ಸರ್ಕಾರ ಆಡಳಿತವನ್ನು ಟೀಕಿಸಿದೆ. ಸರ್ಕಾರವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಅನಗತ್ಯ ಅಪಾಯಕ್ಕೆ ಸಿಲುಕಿಸಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಣೆಯಾದ ಮಕ್ಕಳ ಬಗ್ಗೆ ಅನೇಕರಿಗೆ ಯಾವುದೇ ಮಾಹಿತಿ ಸಿಗದ ಕಾರಣ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ.
ಉತ್ತರ ನೈಜೀರಿಯಾದಾದ್ಯಂತ ನಡೆದ ಹಿಂಸಾತ್ಮಕ ಘಟನೆಗಳ ಸರಣಿಯ ನಂತರ ಈ ಅಪಹರಣ ಸಂಭವಿಸಿದೆ. ವಾರದ ಆರಂಭದಲ್ಲಿ, ನೆರೆಯ ಕೆಬ್ಬಿ ರಾಜ್ಯದ ಪ್ರೌಢಶಾಲೆಯಿಂದ ಬಂದೂಕುಧಾರಿಗಳು 25 ಶಾಲಾ ವಿದ್ಯಾರ್ಥಿನಿಯರನ್ನು ಅಪಹರಿಸಲಾಗಿತ್ತು. ಕ್ವಾರಾ ರಾಜ್ಯದಲ್ಲಿ, ದಾಳಿಕೋರರು ಇಬ್ಬರನ್ನು ಕೊಂದು 38 ಜನರನ್ನು ಅಪಹರಿಸಿದ್ದರು.
ಅಪಹರಣದ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಅಧ್ಯಕ್ಷ ಬೋಲಾ ಟಿನುಬು ತಮ್ಮ ಯೋಜಿತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಫೆಡರಲ್ ಶಿಕ್ಷಣ ಸಚಿವಾಲಯವು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ 47 ಯೂನಿಟಿ ಕಾಲೇಜುಗಳನ್ನು ಮುಚ್ಚಲು ಆದೇಶಿಸಿದೆ. ಹೆಚ್ಚುತ್ತಿರುವ ಅಭದ್ರತೆಗೆ ನಿವಾಸಿಗಳು ಮತ್ತು ವಿಶ್ಲೇಷಕರು ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಶಿಕ್ಷೆಯ ವಿನಾಯಿತಿ ಕಾರಣ ಎಂದು ದೂಷಿಸಿದ್ದಾರೆ.