ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

3 ದೇಶ, 1 ಪರ್ವತ ಶ್ರೇಣಿ: ಹಠಾತ್‌ ಪ್ರವಾಹದ ಬೆನ್ನಲ್ಲೇ ಹಿಮಾಲಯ ರಕ್ಷಣೆಗೆ ಭಾರತ-ಚೀನಾಕ್ಕೆ ನೇಪಾಳ ಕರೆ

Nepal Floods: ಭೀಕರ ಪ್ರವಾಹದ ಬೆನ್ನಲ್ಲೇ ಭಾರತ ಮತ್ತು ಚೀನಾಗೆ ನೇಪಾಳ ಆಡಳಿತ ಪಕ್ಷ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP) ಅಧ್ಯಕ್ಷ ಅಧ್ಯಕ್ಷ ರಬಿ ಲಮಿಛಾನೆ ಮನವಿಯೊಂದನ್ನು ಮಾಡಿದ್ದಾರೆ. ಹಿಮಾಲಯದ ಪರಿಸರ ರಕ್ಷಣೆಗೆ ಮೂರೂ ದೇಶಗಳು ತಕ್ಷಣವೇ ಒಂದಾಗಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ ಮತ್ತು ರಬಿ ಲಮಿಛಾನೆ

ಕಠ್ಮಂಡು, ಆ. 27: ನೇಪಾಳದ ಹಿಮಾಲ ಪ್ರಾಂತ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಜಲಪ್ರಳಯ ಹಾಗೂ ದಿಢೀರ್ ಭೂಕುಸಿತಗಳು ಸೃಷ್ಟಿಸಿರುವ ಮಹಾ ವಿನಾಶದ ಬೆನ್ನಲ್ಲೇ ನೇಪಾಳದ ಆಡಳಿತರೂಢ ರಾಷ್ಟ್ರೀಯ ಸ್ವತಂತ್ರ ಪಾರ್ಟಿಯ (RSP) ಮುಖ್ಯಸ್ಥ ರಬಿ ಲಮಿಛಾನೆ (Rabi Lamichhane) ಭಾರತ ಮತ್ತು ಚೀನಾಕ್ಕೆ ಕರೆಯೊಂದನ್ನು ನೀಡಿದ್ದಾರೆ (Nepal Floods). ಕಠ್ಮಂಡುವಿನಲ್ಲಿ ಆಯೋಜಿಸಲಾದ ಎನ್‌ಡಿಟಿವಿ ವರ್ಲ್ಡ್‌ ಅನ್ವಿಕ್ಷ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಈ ಪ್ರಕೃತಿ ವಿಕೋಪವು ಭಾರತ, ನೇಪಾಳ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಸ್ಪಷ್ಟಪಡಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ʼʼಹಿಮಾಲಯ ಪರ್ವತ ಸಾಲುಗಳು ಕೇವಲ ಒಂದು ದೇಶದ ಗಡಿಗೆ ಮಾತ್ರ ಸೀಮಿತವಾಗಿಲ್ಲ. ಭಾರತ, ನೇಪಾಳ ಮತ್ತು ಚೀನಾ ಈ ಮೂರು ದೇಶಗಳು ಒಂದೇ ಪರಿಸರ ವ್ಯವಸ್ಥೆಯನ್ನು ಹಂಚಿಕೊಂಡಿವೆ. ಭಾರತ, ಚೀನಾ ಮತ್ತು ನೇಪಾಳ ಭೌಗೋಳಿಕ ಗಡಿಗಳಿಂದ ಬೇರ್ಪಟ್ಟಿರಬಹುದು. ಆದರೆ ನಮ್ಮನ್ನು ಜೋಡಿಸಿರುವ ಒಂದೇ ಹಿಮಾಲಯ ಶ್ರೇಣಿ. ಇಲ್ಲಿ ಆಗುವ ಸಣ್ಣ ಹವಾಮಾನ ಬದಲಾವಣೆ ಮೂರು ದೇಶಗಳ ಭವಿಷ್ಯಕ್ಕೆ ಕಂಟಕವಾಗದಿರಲಿ’ʼ ಎಂದು ಜಾಗತಿಕ ವೇದಿಕೆಯಲ್ಲಿ ಹೇಳಿದರು.

ʼʼನೇಪಾಳದಲ್ಲಿ ಸಂಭವಿಸಿದ ಈ ಭೀಕರ ಭೂಕಂಪಕ್ಕೆ ಜಾಗತಿಕ ತಾಪಮಾನ ನೇರ ಕಾರಣ. ಚೀನಾ, ಭಾರತ ಮತ್ತು ನೇಪಾಳ ಗಡಿಯುದಕ್ಕೂ ಭೋಟೆ ಕೋಶಿ ನದಿಯ ಆರ್ಭಟಕ್ಕೆ ಮನೆಗಳು, ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿಹೋಗಿದ್ದು, ನೂರಾರು ಜನರು ಬಲಿಯಾಗಿದ್ದಾರೆ. ನೂರಾರು ಯಾತ್ರಿಕರು ನಾಪತ್ತೆಯಾಗಿದ್ದಾರೆ. ಈ ಘಟನೆಯು ಹಿಮಾಲಯ ಪ್ರದೇಶದಲ್ಲಿ ಎದುರಾಗುತ್ತಿರುವ ಅಪಾಯವನ್ನು ತೆರೆದಿಟ್ಟಿದೆʼ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರವಾಹದ ಹೊಡೆತಕ್ಕೆ ನೇಪಾಳ ತತ್ತರ; 359 ದಾಟಿದ ಮೃತರ ಸಂಖ್ಯೆ: ಸಂತ್ರಸ್ತರಿಗಾಗಿ ಮುಂದುವರಿದ ಹುಡುಕಾಟ

ಕಂಠ್ಮಡುವಿನಲ್ಲಿ ಉದ್ಘಾಟನೆಯಾದ ಈ ಶೃಂಗಸಭೆಯಲ್ಲಿ ಹಿಮಾಲಯದ ಸೂಕ್ಷ್ಮ ಪರಿಸರ ಮತ್ತು ಪ್ರಾದೇಶಿಕ ಸಂಬಂಧಗಳ ಕುರಿತು ಪ್ರಮುಖ ಚರ್ಚೆಗಳು ನಡೆದವು. ಕಾರ್ಯಕ್ರಮದ ಆರಂಭದಲ್ಲೇ ನೇಪಾಳ ಜಲಪ್ರಳಯದಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರಿಗೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಎನ್‌ಡಿಟಿವಿ ಸಂಪಾದಕೀಯ ಮಂಡಳಿಯು ನೇಪಾಳ ಪ್ರಕೃತಿ ವಿಕೋಪದ ನೋವಿನಲ್ಲಿದ್ದಾಗ ಭಾರತವು ಜತೆಗೆ ನಿಲ್ಲಲಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಭಾರತ ಸಂಪೂರ್ಣ ನೆರವು ನೀಡಲಿದೆ ಎಂದು ಭರವಸೆ ನೀಡಿತು.

ಭಾರತದ ಸಂಸದ ಡಾ. ಶಶಿ ತರೂರ್ ‘ʼಭಾರತವು ನೇಪಾಳವನ್ನು ಸಂಪೂರ್ಣ ಸಾರ್ವಭೌಮತ್ವ ಹೊಂದಿರುವ ಸಮಾನ ರಾಷ್ಟ್ರವಾಗಿ ಗೌರವಿಸಬೇಕು ಮತ್ತು ಅದರೆದೇ ಆದ ಆದ್ಯತೆಗಳಿಗೆ ತಕ್ಕಂತೆ ಸಹಕಾರ ನೀಡಬೇಕುʼ’ ಎಂದು ಅಭಿಪ್ರಾಯಪಟ್ಟರು.

ಮೂರು ದೇಶಗಳ ಅಗತ್ಯ

ಚೀನಾ ಭಾಗದಲ್ಲಿ ಹಿಮ ನದಿಗಳು ಕರಗಿದರೆ ಅಥವಾ ಸರೋವರಗಳು ಒಡೆದರೆ ಅದರ ನೇರ ಪರಿಣಾಮ ನೇಪಾಳ ಮತ್ತು ಭಾರತದ ಈಶಾನ್ಯ ಪ್ರದೇಶಗಳ ಮೇಲಾಗುತ್ತದೆ. ನದಿಗಳು ಉಕ್ಕಿ ಹರಿಯುವ ಮುನ್ನ ಚೀನಾ, ನೇಪಾಳ ಮತ್ತು ಭಾರತದ ನಡುವೆ ತಕ್ಷಣದ ಮುನ್ನೆಚ್ಚರಿಕೆ ಮಾಹಿತಿ ವಿನಿಮಯ ಅತ್ಯಗತ್ಯ. ಕೈಲಾಸ ಮಾನಸ ಸರೋವರ ಗಡಿಯಲ್ಲಿ ನೂರಾರು ಭಾರತಿಯರು ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಇದೇ ಮಾರ್ಗದಲ್ಲೇ ಪ್ರಯಾಣಿಸುವುದರಿಂದ ಮೂರು ದೇಶಗಳ ಭದ್ರತಾ ನೇರವು ಅನಿವಾರ್ಯ. ರಬಿ ಲಮಿಛಾನೆ ಅವರ ಕರೆ ಹಿಮಾಲಯ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳನ್ನು ಎದುರಿಸಲು ದಕ್ಷಿಣ ಏಷ್ಯಾದ ಬಲವಾದ ಪ್ರಾದೇಶಿಕ ಒಕ್ಕೂಟ ಮತ್ತು ಜಲ-ರಾಜತಾಂತ್ರಿಕತೆಯ ಅಗತ್ಯವನ್ನು ಎತ್ತಿ ಹಿಡಿದಿದೆ.

ಗಂಡಕ್ ನದಿಯಲ್ಲಿ ನೀರಿನ ಮಟ್ಟ ಇಳಿಕೆ; ನಿಟ್ಟುಸಿರುಬಿಟ್ಟ ಬಿಹಾರ, ಉತ್ತರ ಪ್ರದೇಶದ ಜನ

ದಕ್ಷಿಣ ಏಷ್ಯಾದಲ್ಲಿ ಭಾರತ ಹಾಗೂ ಚೀನಾ ನಡುವೆ ರಾಜತಾಂತ್ರಿಕ ಪೈಪೋಟಿ ನಿರಂತರವಾಗಿದೆ. ಆದರೆ ಹಿಮನದಿಗಳ ಕರಗುವಿಕೆ ಮತ್ತು ಪ್ರಕೃತಿಕ ವಿಕೋಪಗಳು ಭಾರತೀಯ ಉಪಖಂಡದ ನದಿಗಳಾದ ಗಂಗಾ, ಬ್ರಹ್ಮಪುತ್ರಾ ಮತ್ತು ಸಿಂಧು ನದಿಗಳ ಮೂಲಕ್ಕೆ ಕಂಟಕ ತರುತ್ತಿವೆ. ನೇಪಾಳ ನೀಡಿದ ಈ ‘3 ದೇಶಗಳು 1 ಪರ್ವತ ಶ್ರೇಣಿ’ ಕರೆ ಭಾರತ ಹಾಗೂ ಚೀನಾ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಿಸರ ಭದ್ರತೆಗಾಗಿ ಒಂದಾಗಬೇಕಾದ ಅನಿವಾರ್ಯತೆಯನ್ನು ಜಗತ್ತಿಗೆ ಸಾರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author