ನಿಯಾಮೆ, ಜೂ. 7: ಉತ್ತರ ನೈಜರ್‌ನ ಸಹಾರಾ ಮರುಭೂಮಿಯಲ್ಲಿ (Sahara Desert) ಕನಿಷ್ಠ 49 ಜನರು ಬಾಯಾರಿಕೆಯಿಂದ ನರಳಿ ನರಳಿ ಮೃತಪಟ್ಟಿದ್ದಾರೆ. ಟ್ರಕ್ ಕೆಟ್ಟುಹೋಗಿ, ಹಲವು ದಿನಗಳವರೆಗೆ ಸಿಲುಕಿಕೊಂಡ ಪರಿಣಾಮ, ನೀರಿಲ್ಲದೆ ಇವರು ಮೃತಪಟ್ಟಿದ್ದಾರೆ. ತಮ್ಮ ಕುಟುಂಬಗಳೊಂದಿಗೆ ಮಾಲಿಯಲ್ಲಿ ಬಕ್ರೀದ್ ಹಬ್ಬ (Eid al-Adha) ಆಚರಿಸಿ ನೈಜರ್‌ಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಸ್ಸಾಮಕಾದಿಂದ ಪಶ್ಚಿಮಕ್ಕೆ 80 ಕಿ.ಮೀ. ದೂರದ ಪ್ರದೇಶದಲ್ಲಿ ಬಾಯಾರಿಕೆಯಿಂದ 49 ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಹನವನ್ನು ದುರಸ್ತಿ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚಾಲಕ, ಸಹಾಯಕರು ಹಾಗೂ ಪ್ರಯಾಣಿಕರೆಲ್ಲರೂ ಪ್ರಯತ್ನಿಸಿದರೂ ವಾಹನ ಮುಂದಕ್ಕೆ ಚಲಿಸದೆ ನೀರಿಲ್ಲದೆ 49 ಮಂದಿ ಮೃತಪಟ್ಟರು. ಮೃತದೇಹಗಳನ್ನು ಸಾಮೂಹಿಕವಾಗಿ ಹೂಳಲಾಯಿತು.
ಘಟನೆಯಲ್ಲಿ ಇಬ್ಬರು ಬದುಕುಳಿದಿದ್ದಾರೆ. ಬದುಕುಳಿದವರು 50 ಕಿ.ಮೀ. (31 ಮೈಲುಗಳು)ಗಿಂತ ಹೆಚ್ಚು ದೂರ ನಡೆದಿದ್ದಾರೆ. ಅಸ್ಸಾಮಕಕ್ಕೆ ತೆರಳಿದ ಅವರಿಗೆ ನೀರು ದೊರಕಿದ್ದು, ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ನಂತರ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗಾಡೆಜ್ ಪ್ರದೇಶದ ಗವರ್ನರ್ ಜನರಲ್ ಇಬ್ರಾ ಬೌಲಾಮಾ ಇಸ್ಸಾ ಘಟನಾ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಿದ್ದಾರೆ.
ಅಮೆರಿಕದಲ್ಲಿ ಹೆಲಿಕಾಪ್ಟರ್ ಅಪಘಾತ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಭಾರತೀಯ ಮೂಲದ ಪೈಲಟ್ ಸಾವು
ನೈಜೀರಿಯನ್ ಗಡಿಯಿಂದ ಸುಮಾರು 300 ಕಿ.ಮೀ. (187 ಮೈಲುಗಳು) ದೂರದಲ್ಲಿರುವ ಮಾಲಿಯನ್ ಪಟ್ಟಣವಾದ ತಲ್ಹಾಂಡೆಕ್‌ನಿಂದ ಟ್ರಕ್ ಹಲವು ದಿನಗಳವರೆಗೆ ಪ್ರಯಾಣಿಸಿದೆ ಎಂದು ತಿಳಿದುಬಂದಿದೆ. ಅಪಘಾತಕ್ಕೆ ಕಾರಣವೇನು ಅಥವಾ ಪ್ರಯಾಣಿಕರು ಎಷ್ಟು ಸಮಯ ಕಾದಿದ್ದರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಚಾಲಕ, ಅವರ ಸಹಾಯಕರು ಮತ್ತು ಪ್ರಯಾಣಿಕರು ಟ್ರಕ್ ಅನ್ನು ದುರಸ್ತಿ ಮಾಡಲು ಮಾಡಿದ ಪ್ರಯತ್ನಗಳು ವಿಫಲವಾದವು ಎಂಬುದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡ ತಲುಪಿದಾಗ ಅಲ್ಲಿನ ಸ್ಥಿತಿ ನೋಡಿ ದಿಗ್ಭ್ರಮೆಗೊಂಡರು. ಟ್ರಕ್ ಮೇಲೆ, ಕೆಳಗೆ ಹಾಗೂ ಅದರ ಸುತ್ತ ಮೃತದೇಹಗಳು ಬಿದ್ದಿದ್ದವು.
ಆಫ್ರಿಕನ್ ದೇಶಗಳಿಂದ ಯುರೋಪಿಗೆ ಹೋಗಲು ಬಯಸುವ ನಿರಾಶ್ರಿತರು ಮತ್ತು ವಲಸಿಗರು ಮರುಭೂಮಿ ಮೂಲಕವೇ ಹಾದು ಹೋಗುತ್ತಾರೆ. ಹೀಗಾಗಿ ಅನೇಕರು ಬಾಯಾರಿಕೆ ಅಥವಾ ಹಸಿವಿನಿಂದ ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.