ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಕದನ ಏರ್ಪಟ್ಟಿದೆ. ಉಭಯ ದೇಶಗಳು ದಾಳಿ ನಡೆಸುತ್ತಿದ್ದು, ಪಾಕಿಸ್ತಾನ ತನ್ನ ಮತ್ತೊಂದು ಅಮೂಲ್ಯ, ಉನ್ನತ ದರ್ಜೆಯ, ಅಮೆರಿಕ ನಿರ್ಮಿತ ಎಫ್ -16 ಯುದ್ಧ ವಿಮಾನವನ್ನು ಕಳೆದುಕೊಂಡಿದೆ ಎಂದು ಅಫ್ಘಾನಿಸ್ತಾನ ಹೇಳಿದೆ. ಅಫ್ಘಾನಿಸ್ತಾನದ ಪಡೆಗಳು ಯುದ್ಧ ವಿಮಾನವನ್ನು ಹೊಡೆದುರಿಳಿಸಿವೆ ಎಂದು ಹೇಳಿಕೊಂಡಿವೆ. ಅಫ್ಘಾನಿಸ್ತಾನ್ ಡಿಫೆನ್ಸ್' ಎಂಬ X ಹ್ಯಾಂಡಲ್ ಉರಿಯುತ್ತಿರುವ F-16 ವಿಮಾನದ ಅವಶೇಷಗಳನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದೆ. ಅತ್ಯಂತ ಚುರುಕಾದ ಸಿಂಗಲ್-ಎಂಜಿನ್ ಫೈಟರ್ ಜೆಟ್‌ನ ಲಂಬವಾದ ಸ್ಟೆಬಿಲೈಜರ್ ಮೇಲೆ ಸಣ್ಣ ಪಾಕಿಸ್ತಾನಿ ಧ್ವಜವನ್ನು ಚಿತ್ರಿಸಲಾಗಿದೆ. ಎಕ್ಸಾಸ್ಟ್ ಬಳಿ '85510' ಸಂಖ್ಯೆಗಳು ಗೋಚರಿಸುತ್ತವೆ.
ಪಾಕಿಸ್ತಾನದ ವಾಯುದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ ನಡೆಸಿದ ಮಿಲಿಟರಿ ದಾಳಿಯಲ್ಲಿ ಪಾಕಿಸ್ತಾನದ 55 ಸೈನಿಕರು ಹತ್ಯೆಗೀಡಾಗಿದ್ದರು, ಅಲ್ಲದೇ 23 ಮಂದಿಯನ್ನ ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇದಕ್ಕೆ ಪಾಕಿಸ್ತಾನ ಕೂಡ ಪ್ರತೀಕಾರ ತೀರಿಸಿಕೊಂಡಿದೆ. ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದೆ. ಕಾಬೂಲ್ ಕಂದಹಾರ್ ಮತ್ತು ಪಕ್ತಿಯಾ ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಆದ್ರೆ ದಾಳಿಯಲ್ಲಿ ಸಂಭಾವ್ಯ ಸಾವು ನೋವುಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.
ನಂಗರ್‌ಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆ ಮಿಲಿಟರಿ ದಾಳಿ ನಡೆಸಿ, 55 ಪಾಕ್ ಸೈನಿಕರನ್ನ ಕೊಂದಿತ್ತು. 23 ಮಂದಿಯನ್ನ ಜೀವಂತ ಸೆರೆ ಹಿಡಿದೆ. ಡುರಾಂಡ್ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಸೇನಾ ಕೇಂದ್ರಗಳು ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದ ಅಫ್ಘಾನ್ ಒಂದು ಪ್ರಧಾನ ಕಚೇರಿ ಮತ್ತು 19 ಔಟ್‌ಪೋಸ್ಟ್ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆ ವಾಯುದಾಳಿ ನಡೆಸಿದೆ.
ಅಕ್ಟೋಬರ್‌ನಲ್ಲಿ ನಡೆದ ಹಿಂಸಾತ್ಮಕ ಗಡಿ ಘರ್ಷಣೆಗಳ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿವೆ. ಇದರ ಪರಿಣಾಮವಾಗಿ ಎರಡೂ ದೇಶಗಳ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದರು. ಕತಾರ್‌ನ ಮಧ್ಯಸ್ಥಿಕೆಯಲ್ಲಿ ಅಕ್ಟೋಬರ್ 19 ರಂದು ಕದನ ವಿರಾಮ ಘೋಷಿಸಲಾಯಿತು.ಈ ದಾಳಿಗಳನ್ನು ಪಾಕಿಸ್ತಾನ ನಡೆಸಿದೆ ಎಂದು ತಾಲಿಬಾನ್ ಆಡಳಿತ ಆರೋಪಿಸಿದೆ.