ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಒಂದೇ ದಿನದ ಭೇಟಿಯಲ್ಲಿ ಸೌದಿ ಜೊತೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ(PM Modi Visit) ಅವರು ಮಂಗಳವಾರ ಜೆಡ್ಡಾದಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ವ್ಯಾಪಕ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಿದರು. ಇವರ ಸಭೆಯ ಬಳಿಕ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭೇಟಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಭಾರತಕ್ಕೆ ಮರಳಿದ್ದಾರೆ.

ಸೌದಿ- ಭಾರತ ನಡುವೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ

ಜೆಡ್ಡಾ: ಸೌದಿ ಅರೇಬಿಯಾದ (Saudi Arabia) ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ (Saudi Crown Prince Mohammed bin Salman) ಅವರನ್ನು ಮಂಗಳವಾರ ಜೆಡ್ಡಾದಲ್ಲಿ (Jeddah) ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಸಂದರ್ಭದಲ್ಲಿ ಎರಡು ರಾಷ್ಟ್ರಗಳ ಸಂಬಂಧಗಳನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಿದರು. ಸಭೆಯ ಎರಡು ದೇಶಗಳ ನಾಯಕರು ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು. ಎರಡು ದಿನಗಳ ಸೌದಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರು ಕಾಶ್ಮೀರದಲ್ಲಿ ಉಗ್ರರ ದಾಳಿಯಾಗಿದ್ದರಿಂದ (Terror attack) ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಮರಳಿದರು.

ಎರಡು ರಾಷ್ಟ್ರಗಳ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಸೌದಿ ಅರೇಬಿಯಾ ಭೇಟಿಯು ಹೆಚ್ಚು ಮಹತ್ವದ್ದಾಗಿತ್ತು. ಮಂಗಳವಾರದ ಸಭೆಯಲ್ಲಿ ಎರಡು ದೇಶಗಳು ರಕ್ಷಣೆಗೆ ಸಂಬಂಧಪಟ್ಟಂತೆ ಎರಡು ಹೊಸ ಸಚಿವ ಸಮಿತಿಗಳನ್ನು ರಚಿಸಿತ್ತು. ಅಲ್ಲದೇ ಭಾರತದಲ್ಲಿ ಎರಡು ಸಂಸ್ಕರಣಾಗಾರಗಳನ್ನು ಸ್ಥಾಪಿಸಲು ಸಹಕಾರ ನೀಡಲು ಸೌದಿಯು ಒಪ್ಪಿಕೊಂಡಿತು.

ಪ್ರಧಾನಿ ಮೋದಿಗೆ ವಿಶೇಷ ಗೌರವ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಜೆಡ್ಡಾದಲ್ಲಿ ಇಳಿಯುವ ಮೊದಲೇ ಅವರ ವಿಮಾನಕ್ಕೆ ಸೌದಿ ವಾಯುಪಡೆಯ ಹಲವಾರು ಎಫ್ -15 ಯುದ್ಧ ವಿಮಾನಗಳು ಬೆಂಗಾವಲಾಗಿ ಸಾಗಿತು. ಇದು ಅತ್ಯಂತ ನಿಕಟವಾಗಿರುವ ಮಿತ್ರರಾಷ್ಟ್ರಗಳಿಗೆ ಸೌದಿ ಸಲ್ಲಿಸುವ ಗೌರವವಾಗಿದೆ. ರಾಯಲ್ ಸೌದಿ ವಾಯುಪಡೆಯ ಈ ನಡೆಯು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಎತ್ತಿ ತೋರಿಸಿದೆ.

ನರೇಂದ್ರ ಮೋದಿ ಅವರು ಸೌದಿಗೆ ಆಗಮಿಸುತ್ತಿದ್ದಂತೆ ಭಾರತೀಯ ಸಮುದಾಯದ ಸದಸ್ಯರು "ಸಾರೆ ಜಹಾಂ ಸೆ ಅಚ್ಛಾ" ಹಾಡಿ 21 ಗುಂಡುಗಳ ವಂದನೆ ಸಲ್ಲಿಸಿದರು. ಅನಂತರ, ಪ್ರಧಾನಿ ಮೋದಿ ಅವರಿಗೆ ಅಲ್ ಸಲಾಮ್ ಅರಮನೆಯಲ್ಲಿ ಔಪಚಾರಿಕ ಸ್ವಾಗತ ನೀಡಲಾಯಿತು. ಅಲ್ಲಿ ಅವರನ್ನು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬರಮಾಡಿಕೊಂಡರು.

ಸುಮಾರು 40 ವರ್ಷಗಳ ಬಳಿಕ ಜೆಡ್ಡಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ ಅವರು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು "ನನ್ನ ಸಹೋದರ" ಎಂದು ಉಲ್ಲೇಖಿಸಿದ್ದಾರೆ. ನಮ್ಮ ಈ ಭೇಟಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಸೌದಿ ಅರೇಬಿಯಾವನ್ನು ವಿಶ್ವಾಸಾರ್ಹ ಸ್ನೇಹಿತ, ಕಾರ್ಯತಂತ್ರದ ಮಿತ್ರ ಮತ್ತು ಭಾರತದ ಅತ್ಯಂತ ಮೌಲ್ಯಯುತ ಪಾಲುದಾರ ಎಂದು ಕರೆದಿರುವ ಮೋದಿ, ಭಾರತ ಮತ್ತು ಸೌದಿ ಪಾಲುದಾರಿಕೆಯು ಅಪರಿಮಿತ ಅವಕಾಶಗಳನ್ನು ಹೊಂದಿದೆ ಎಂದು ಹೇಳಿದರು. ಸೌದಿ ಮತ್ತು ಭಾರತ ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಎರಡನೇ ಸಭೆ ಇದಾಗಿದೆ. ಈ ಮಂಡಳಿಯನ್ನು ಪ್ರಧಾನಿ ಮೋದಿ ಅವರ 2019 ರ ಭೇಟಿಯ ಸಮಯದಲ್ಲಿ ಸ್ಥಾಪಿಸಲಾಯಿತು.

ರಾಜಕೀಯ, ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ ಮತ್ತು ಜನರ ಸಂಬಂಧಗಳನ್ನು ಒಳಗೊಂಡಿರುವ ಎಸ್ ಪಿಸಿ ಅಡಿಯಲ್ಲಿ ವಿವಿಧ ಸಮಿತಿಗಳು, ಉಪಸಮಿತಿಗಳ ಕೆಲಸವನ್ನು ಮಂಡಳಿಯು ಪರಿಶೀಲನೆ ನಡೆಸಿತು. ರಕ್ಷಣೆ, ಬಾಹ್ಯಾಕಾಶ, ಶಿಕ್ಷಣ, ಆರೋಗ್ಯ ಮತ್ತು ಸಂವಹನ ಕ್ಷೇತ್ರಗಳಲ್ಲಿ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು.

ಇದನ್ನೂ ಓದಿ: Narendra Modi: ದಾಳಿ ಬಳಿಕ ಸೌದಿ ಪ್ರವಾಸ ಮೊಟಕುಗೊಳಿಸಿದ ಪ್ರಧಾನಿ; ಪಾಕ್ ವಾಯುಪ್ರದೇಶ ಬಳಸದೇ ಭಾರತಕ್ಕೆ ವಾಪಾಸ್‌

ಸಭೆಯ ಆರಂಭದಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿ, ಸೌದಿ ಅರೇಬಿಯಾ ಭಾರತದೊಂದಿಗೆ ನಿಂತಿದೆ. ಈ ದುಃಖದ ಸಮಯದಲ್ಲಿ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. ಕಾರ್ಯತಂತ್ರದ ಮಂಡಳಿ ಸಭೆ ಮತ್ತು ದ್ವಿಪಕ್ಷೀಯ ಮಾತುಕತೆಗಳ ಜೊತೆಗೆ ಪ್ರಧಾನಿ ಮೋದಿ ಅವರು ಇಲ್ಲಿ ಕಾರ್ಖಾನೆಯೊಂದಕ್ಕೆ ಭೇಟಿ ನೀಡಿ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಬೇಕಿತ್ತು. ಆದರೆ ಅದು ರದ್ದಾಗಿದೆ. ಸೌದಿ ದೊರೆಯೊಂದಿಗಿನ ಸಭೆಯ ಬಳಿಕ ಪ್ರಧಾನಿ ಮೋದಿ ಅವರು ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಭಾರತಕ್ಕೆ ಮರಳಿದರು.