ಟೆಹರಾನ್: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಉದ್ವಿಗ್ನತೆ ತಾರಕಕ್ಕೇರಿದ್ದು, ಇರಾನ್‌ನ ಉನ್ನತ ಸೇನಾ ಕಮಾಂಡರ್ ಮತ್ತು ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ (Ayatollah Ali Khamenei) ಆಪ್ತ ಜನರಲ್ ಅಲಿ ಶಾದ್ಮಾನಿ (General Ali Shadmani), ಟೆಹರಾನ್‌ನಲ್ಲಿ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲಿ ಸೇನೆ ಮಂಗಳವಾರ ಘೋಷಿಸಿದೆ.
ಈ ಕಾರ್ಯಾಚರಣೆಯನ್ನು “ಆಕಸ್ಮಿಕ ಅವಕಾಶ” ಎಂದು ಬಣ್ಣಿಸಿದ ಇಸ್ರೇಲಿ ಡಿಫೆನ್ಸ್ ಫೋರ್ಸಸ್ (IDF), ಇರಾನ್ ರಾಜಧಾನಿಯ ಕೇಂದ್ರದಲ್ಲಿ ಸಿಬ್ಬಂದಿಯಿರುವ ಕಮಾಂಡ್ ಸೆಂಟರ್ ಮೇಲೆ ದಾಳಿ ನಡೆಸಿ, ಯುದ್ಧಕಾಲದ ಚೀಫ್ ಆಫ್ ಸ್ಟಾಫ್ ಆಗಿದ್ದ ಶಾದ್ಮಾನಿಯನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ. ಇಸ್ಲಾಮಿಕ್ ರಿಪಬ್ಲಿಕ್‌ನ ಅತ್ಯಂತ ಉನ್ನತ ಸೇನಾಧಿಕಾರಿಯಾಗಿದ್ದ ಶಾದ್ಮಾನಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಇರಾನ್ ಸೇನೆಯಲ್ಲಿ ಗಣನೀಯ ಪ್ರಭಾವ ಹೊಂದಿದ್ದರು.
ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನ್ ಟಿವಿ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಸ್ಟುಡಿಯೋದೊಳಗೆ ಬಿತ್ತು ಬಾಂಬ್; ಇಸ್ರೇಲ್ ದಾಳಿಯ ವಿಡಿಯೊ ವೈರಲ್
ಇಸ್ರೇಲಿ ಸೇನೆಯ ಹೇಳಿಕೆಯಲ್ಲಿ ಶಾದ್ಮಾನಿಯನ್ನು “ಸರ್ವೋಚ್ಚ ನಾಯಕ ಖಮೇನಿಯವರಿಗೆ ಅತ್ಯಂತ ಆಪ್ತ ವ್ಯಕ್ತಿ” ಎಂದು ಕರೆದಿದ್ದು, ಇರಾನ್‌ನ ಪ್ರಾದೇಶಿಕ ಸೇನಾ ಚಟುವಟಿಕೆಗಳ ಸಂಘಟನೆಯಲ್ಲಿ ಆತನ ಕಾರ್ಯತಂತ್ರದ ಮೇಲ್ವಿಚಾರಣೆ ಪ್ರಮುಖವಾಗಿತ್ತು ಎಂದು ದಾಖಲಿಸಿದೆ.
ಶಾದ್ಮಾನಿಯ ಸಾವು ಇರಾನ್‌ನ ಸೇನಾ ಕಮಾಂಡ್ ರಚನೆಗೆ ದೊಡ್ಡ ಆಘಾತವನ್ನುಂಟು ಮಾಡಿದ್ದು, ಈಗಾಗಲೇ ದುರ್ಬಲವಾಗಿರುವ ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಲಿದೆ. ಈ ಬಗ್ಗೆ ಇರಾನ್ ಸರ್ಕಾರ ಅಥವಾ ಅಯಾತೊಲ್ಲಾ ಖಮೇನಿಯ ಕಚೇರಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಈ ದಾಳಿಯು ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಕಾಲದ ಶತ್ರುತ್ವವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಸ್ರೇಲ್‌ನ ಈ ಕಾರ್ಯಾಚರಣೆಯು ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಸೇನಾ ಶಕ್ತಿಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ತಜ್ಞರು ಭಾವಿಸಿದ್ದಾರೆ.