ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಅಸಿಮ್ ಮುನೀರ್ ನೇಮಕ

ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದಲ್ಲಿ ಅಸಿಮ್ ಮುನೀರ್ ಅಧಿಕಾರದ ವಿಚಾರವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಅವರನ್ನು ಪಾಕಿಸ್ತಾನದ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಅಸಿಮ್ ಮುನೀರ್ ಮುಂದಿನ ಐದು ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ಶೆಹ್ಬಾಜ್ ಷರೀಫ್ ಸರ್ಕಾರವು ಅವರ ಈ ನೇಮಕವನ್ನು ಘೋಷಿಸಿ ಆದೇಶ ಹೊರಡಿಸಿದೆ.

(ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನದ (Pakistan)ಮಿಲಿಟರಿ ನಾಯಕತ್ವದಲ್ಲಿ (Pakistan defence forces) ಪ್ರಮುಖ ಬದಲಾವಣೆ ಮಾಡಲಾಗಿದೆ. ದೇಶದ ರಕ್ಷಣಾ ಪಡೆಗಳ (defence forces) ಮೊದಲ ಮುಖ್ಯಸ್ಥರನ್ನಾಗಿ ಅಸಿಮ್ ಮುನೀರ್ (Asim Munir) ಅವರ ನೇಮಕ ಮಾಡಿ ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಷರೀಫ್ (Shehbaz Sharif) ಸರ್ಕಾರವು ಘೋಷಣೆ ಮಾಡಿದೆ. ಮುನೀರ್ ಅವರನ್ನು ಪಾಕಿಸ್ತಾನ ಮಿಲಿಟರಿಯ ಮುಖ್ಯಸ್ಥ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಬಡ್ತಿ ನೀಡಲು ಶೆಹ್ಬಾಜ್ ಷರೀಫ್ ಅವರು ಅನುಮೋದನೆ ನೀಡಿದ್ದು, ಈ ಹೊಸ ಹುದ್ದೆಯ ಅವಧಿ ಐದು ವರ್ಷಗಳದ್ದಾಗಿದೆ.

ವರ್ಷದ ಆರಂಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದಿದ್ದ ಅಸಿಮ್ ಮುನೀರ್ ಅವರು ಇದೀಗ ಆ ಹುದ್ದೆಯೊಂದಿಗೆ ಉನ್ನತ ಸೇನಾ ಅಧಿಕಾರಿ ಮತ್ತು ಸೇನಾ ಮುಖ್ಯಸ್ಥ ಹುದ್ದೆಯನ್ನು ಕೂಡ ಅಲಂಕರಿಸಲಿದ್ದಾರೆ ಎಂದು ಪಾಕಿಸ್ತಾನ ಅಧ್ಯಕ್ಷರ ಕಚೇರಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Asim Munir: ಪಾಕಿಸ್ತಾನದ ಸರ್ವಾಧಿಕಾರಿ ಆಗಲು ಹೊರಟ್ರಾ ಅಸಿಮ್ ಮುನೀರ್; ಸಂವಿಧಾನವನ್ನೇ ಬದಲು ಮಾಡ್ತಿರೋದ್ಯಾಕೆ?

ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪ್ರಧಾನ ಮಂತ್ರಿ ಕಚೇರಿಯಿಂದ ಕಳುಹಿಸಲಾದ ಹೊಸ ಹುದ್ದೆಯ ಬೇಡಿಕೆಯನ್ನು ಅನುಮೋದಿಸಿದ್ದು ಇದರಿಂದ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಎನ್ಐ(ಎಂ), ಎಚ್ ಜೆ ಅವರು ಮುಂದಿನ ಐದು ವರ್ಷಗಳ ಕಾಲ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕಗೊಳಿಸಲು ಅನುಮೋದನೆ ನೀಡಿದೆ.

ಮುನೀರ್ ಅವರಿಗೆ ನೀಡಿರುವ ಹೊಸ ಹುದ್ದೆಯು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಕಮಾಂಡ್‌ ಹುದ್ದೆಯಾಗಿದೆ. ಇದು ಅವರ ಸಾಮರ್ಥ್ಯವನ್ನು ಹೆಚ್ಚಿಸುವ, ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಈ ಮೂಲಕ ಅವರು ಸಿಒಎಎಸ್ ಮತ್ತು ಸಿಡಿಎಫ್ ಹುದ್ದೆಗಳನ್ನು ಏಕಕಾಲದಲ್ಲಿ ಹೊಂದಿರುವ ಮೊದಲ ಮಿಲಿಟರಿ ಅಧಿಕಾರಿಯಾಗಿ ಗುರುತಿಸಿಕೊಳ್ಳಲಿದ್ದಾರೆ.



ಈ ನಡುವೆಯೇ ಮುನೀರ್ ಅವರು ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಅವರ ಎರಡು ವರ್ಷಗಳ ಅಧಿಕಾರ ವಿಸ್ತರಣೆಯನ್ನು ಅನುಮೋದಿಸಿದ್ದಾರೆ. 2026ರ ಮಾರ್ಚ್ ತಿಂಗಳಲ್ಲಿ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಬಳಿಕ ಅವರ ವಿಸ್ತರಣೆಯ ಅಧಿಕಾರಾವಧಿ ಪ್ರಾರಂಭವಾಗಲಿದೆ.

ಕಳೆದ ವಾರ ಮಾಜಿ ಪ್ರಧಾನಿ ನವಾಜ್ ಷರೀಫ್, ಪಿಎಂಎಲ್-ಎನ್ ಮುಖ್ಯ ಸಂಘಟಕ ಮರಿಯಮ್ ನವಾಜ್ ಮತ್ತು ಅಸಿಮ್ ಮುನೀರ್ ಅವರ ನಡುವೆ ಮಾತುಕತೆ ನಡೆದಿದ್ದು, ಅನಂತರವೇ ಪಾಕಿಸ್ತಾನದಲ್ಲಿ ಈ ಬೆಳವಣಿಗೆಗಳು ನಡೆದಿವೆ. ಪಿಎಂಎಲ್-ಎನ್ ದೇಶದಲ್ಲಿ ಪ್ರಮುಖ ರಾಜಕೀಯ ಹುದ್ದೆಗಳು, ಮಿಲಿಟರಿ ನೇಮಕಾತಿಗಳ ಮೇಲೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ.

ಮೊದಲು ಭಾರತಕ್ಕೆ ಬನ್ನಿ, ನಂತರ ಪ್ರಕರಣದ ವಿಚಾರಣೆ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಸೂಚನೆ

ಪಕ್ಷದ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ನವಾಜ್ ಷರೀಫ್ ಅವರು ಪಾಕಿಸ್ತಾನದ ನಾಲ್ಕನೇ ಅವಧಿಗೆ ಪ್ರಧಾನಿಯಾಗುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಈ ಉದ್ದೇಶದಿಂದಲೇ ಅಸಿಮ್ ಮುನೀರ್ ಅವರ ಅಧಿಕಾರ ವ್ಯಾಪ್ತಿ ಮತ್ತು ಅವಧಿಯನ್ನು ಹೆಚ್ಚಿಸಲಾಗಿದೆ. ಒಂದು ವೇಳೆ ಮುನೀರ್ ಬಯಸಿದರೆ ನವಾಜ್ ಷರೀಫ್ ಅವರು ಮುಂದಿನ ಪ್ರಧಾನಿ ಆಗುವುದು ಖಚಿತ. ಷರೀಫ್ ಕುಟುಂಬವು ಮಿಲಿಟರಿ ಹುದ್ದೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದು, ಇದು ಅವರ ಮುಂದಿನ ರಾಜಕೀಯ ನಡೆಗೆ ಪ್ರಮುಖ ಹೆಜ್ಜೆಯಾಗಿದೆ. ಇದರಲ್ಲಿ ನವಾಜ್ ಷರೀಫ್ ಮತ್ತು ಮರಿಯಮ್ ನವಾಜ್ ಅವರ ದೀರ್ಘಾವಧಿಯ ರಾಜಕೀಯ ಸ್ಥಿರತೆಯನ್ನು ಭದ್ರಪಡಿಸುವುದು ಮೊದಲ ಆದ್ಯತೆಯಾಗಿದೆ ಎನ್ನಲಾಗುತ್ತಿದೆ.

ವಿದ್ಯಾ ಇರ್ವತ್ತೂರು

View all posts by this author