ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನವನ್ನು 12ರಿಂದ 160 ಪ್ರಾಂತ್ಯಗಳಾಗಿ ವಿಭಜಿಸಲು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಯೋಜನೆ: ಏನಿದು ವಿಭಜಿಸಿ ಆಳುವ ತಂತ್ರ?

Divide And Rule Plan: ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳನ್ನು 12, 15 ಅಥವಾ 160 ಸಣ್ಣ ಪ್ರಾಂತ್ಯಗಳಾಗಿ ವಿಭಜಿಸುವ ಯೋಜನೆಯನ್ನು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಆಡಳಿತ ಸುಧಾರಣೆಯ ಹೆಸರಿನಲ್ಲಿ ಅಧಿಕಾರವನ್ನು ಮತ್ತಷ್ಟು ಕೇಂದ್ರೀಕರಿಸುವ ಪ್ರಯತ್ನ ಇದಾಗಿರಬಹುದು ಎಂದು ‘ದಿ ಇಕನಾಮಿಸ್ಟ್’ ವರದಿ ವಿಶ್ಲೇಷಿಸಿದೆ.

ಅಸಿಮ್ ಮುನೀರ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್, ಅ. 9: ಪಾಕಿಸ್ತಾನದ (Pakistan) ನಾಲ್ಕು ಪ್ರಾಂತ್ಯಗಳನ್ನು 12, 15 ಅಥವಾ 160 ಸಣ್ಣ ಪ್ರಾಂತ್ಯಗಳಾಗಿ ವಿಭಜಿಸುವ ಯೋಜನೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Field Marshal Asim Munir) ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ‘ದಿ ಇಕನಾಮಿಸ್ಟ್’ (The Economist) ವರದಿ ಮಾಡಿದ್ದು, ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹೆಸರಿನಲ್ಲಿ ಅಧಿಕಾರವನ್ನು ಮತ್ತಷ್ಟು ಕೇಂದ್ರೀಕರಿಸುವ ಉದ್ದೇಶ ಈ ಯೋಜನೆಯ ಹಿಂದಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

1947ರಲ್ಲಿ ಪಾಕಿಸ್ತಾನ ರಚನೆಯಾದಾಗಿನಿಂದ ದೇಶದ ನಾಲ್ಕು ಪ್ರಮುಖ ಪ್ರಾಂತ್ಯಗಳಾದ ಪಂಜಾಬ್, ಸಿಂಧ್, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದ ಆಡಳಿತಾತ್ಮಕ ಯಾವುದೇ ಬದಲಾವಣೆ ಆಗಿಲ್ಲ. ದೇಶದ ಅತ್ಯಂತ ಜನಸಂಖ್ಯೆ ಹೊಂದಿರುವ ಪಂಜಾಬ್‌ನಲ್ಲಿ ಸುಮಾರು 12.8 ಕೋಟಿ ಜನರಿದ್ದರೆ, ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಬಲೂಚಿಸ್ತಾನದಲ್ಲಿ ಸುಮಾರು 1.5 ಕೋಟಿ ಜನರಿದ್ದಾರೆ. ದೊಡ್ಡ ಪ್ರಾಂತ್ಯಗಳ ಕಾರಣ ಆಡಳಿತ ನಿರ್ವಹಣೆ ಕಷ್ಟವಾಗುತ್ತಿದೆ ಎಂಬ ವಾದ ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಇದೇ ಕಾರಣ ಮುಂದಿಟ್ಟುಕೊಂಡು ಅಸಿಮ್ ಮುನೀರ್ ನಾಲ್ಕು ಪ್ರಾಂತ್ಯಗಳನ್ನು ವಿಭಜಿಸಿ ಹೆಚ್ಚಿನ ಸಂಖ್ಯೆಯ ಸಣ್ಣ ಪ್ರಾಂತ್ಯಗಳನ್ನು ರಚಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಆದರೆ, ಈ ಯೋಜನೆಯ ಉದ್ದೇಶದ ಬಗ್ಗೆ ವಿಮರ್ಶಕರು ಅನುಮಾನ ವ್ಯಕ್ತಪಡಿಸಿದ್ದು, ಹೊಸದಾಗಿ ರಚನೆಯಾಗುವ ಪ್ರಾಂತ್ಯಗಳಿಗೆ ಚುನಾಯಿತ ಮುಖ್ಯಸ್ಥರು, ಪ್ರಾಂತೀಯ ಅಥವಾ ಜಿಲ್ಲಾ ವಿಧಾನಸಭೆಗಳು ಅಥವಾ ಸರ್ಕಾರದ ನಾಮನಿರ್ದೇಶಿತ ಪ್ರತಿನಿಧಿಗಳು ಆಡಳಿತ ನಡೆಸುವ ಸಾಧ್ಯತೆಯಿದೆ. ಇಲ್ಲಿ ‘ಸರ್ಕಾರ’ ಎಂಬ ಹೆಸರಿನಲ್ಲಿ ಸೇನಾ ಮುಖ್ಯಸ್ಥರ ಪ್ರಭಾವವೇ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಆರ್ಥಿಕ ಸಂಕಷ್ಟಕ್ಕೆ ಸೇನೆಯೇ ಕಾರಣವೆ?

ಪಾಕಿಸ್ತಾನದ ಪ್ರಾಂತ್ಯಗಳು ದೊಡ್ಡದಾಗಿರುವುದರಿಂದ ಸಮರ್ಪಕ ಆಡಳಿತ ಸಾಧ್ಯವಾಗುತ್ತಿಲ್ಲ ಎಂದು ಮುನೀರ್ ಪ್ರತಿಪಾದಿಸುತ್ತಿದ್ದಾರೆ ಎನ್ನಲಾಗಿದ್ದು, ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು, ಎರಡಂಕಿಯ ಹಣದುಬ್ಬರ ಹಾಗೂ ಭಾರತದ ಅರ್ಧಕ್ಕಿಂತಲೂ ಕಡಿಮೆ ಆರ್ಥಿಕ ಬೆಳವಣಿಗೆ ದರ ಪಾಕಿಸ್ತಾನದ ಪ್ರಮುಖ ಸವಾಲುಗಳಾಗಿವೆ.

ಆದರೆ, ಈ ಸಮಸ್ಯೆಗಳಿಗೆ ಸೇನೆಯ ಪಾತ್ರವೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ‘ದಿ ಇಕನಾಮಿಸ್ಟ್’ ವರದಿಯ ಪ್ರಕಾರ, ಪಾಕಿಸ್ತಾನದ ಸೇನೆ ತೆರಿಗೆದಾರರ ಹಣದ ದೊಡ್ಡ ಪಾಲನ್ನು ಬಳಸಿಕೊಳ್ಳುವುದರ ಜತೆಗೆ, ದೇಶದ ಅತ್ಯಮೂಲ್ಯ ಭೂಮಿಯ ವಿಶಾಲ ಪ್ರದೇಶಗಳ ಮೇಲೆ ಹಿಡಿತ ಹೊಂದಿದೆ. ಅಲ್ಲದೆ, ಸ್ಪರ್ಧಿಗಳಿಗೆ ಒತ್ತಡ ಹೇರುವ ವ್ಯವಹಾರಗಳ ಮೇಲೆಯೂ ಸೇನೆಯ ಪ್ರಭಾವವಿದೆ ಎಂಬ ಆರೋಪಗಳಿವೆ.

ಪಾಕಿಸ್ತಾನದ ಇತಿಹಾಸದ ಐದರಲ್ಲಿ ಎರಡಕ್ಕಿಂತ ಹೆಚ್ಚು ಭಾಗ ನೇರ ಸೇನಾ ಆಡಳಿತಕ್ಕೆ ಒಳಪಟ್ಟಿದೆ. ಉಳಿದ ಅವಧಿಯಲ್ಲಿಯೂ ನಾಗರಿಕ ಸರ್ಕಾರಗಳು ಸೇನೆಯ ಅಸಮಾಧಾನಕ್ಕೆ ಗುರಿಯಾಗದಂತೆ ಎಚ್ಚರಿಕೆಯಿಂದ ಆಡಳಿತ ನಡೆಸಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವೂ ಸೇನೆಯ ಪ್ರಭಾವದಿಂದ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆಗಳಿವೆ.

ಭಾರತದೊಂದಿಗಿನ ಸಂಬಂಧವನ್ನು ಉದ್ವಿಗ್ನವಾಗಿಯೇ ಉಳಿಸಿಕೊಳ್ಳುವುದು ಪಾಕಿಸ್ತಾನದ ಆರ್ಥಿಕ ಬೆಳವಣಿಗೆಗೆ ಹಾನಿಕಾರಕವಾಗಿದ್ದರೂ, ಇದರಿಂದ ರಕ್ಷಣಾ ವೆಚ್ಚ ಹೆಚ್ಚಿಸಿಕೊಳ್ಳಲು ಸೇನೆಗೆ ಅನುಕೂಲವಾಗುತ್ತದೆ ಎಂಬ ವಿಶ್ಲೇಷಣೆಯನ್ನೂ ವರದಿ ಮುಂದಿಟ್ಟಿದೆ.

ಇಂಡಿಯಾ ಬ್ಲಾಕ್ ಪ್ರತಿಭಟನಾ ರ‍್ಯಾಲಿಯಲ್ಲಿ ಹೈಡ್ರಾಮಾ: ಪರಸ್ಪರ ಹೊಡೆದಾಡಿದ ಕಾಂಗ್ರೆಸ್‌ ನಾಯಕಿಯರು

ಪ್ರಾಂತ್ಯಗಳ ವಿಭಜನೆಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯವೆ?

ಅಸಿಮ್ ಮುನೀರ್ ಅವರ ಯೋಜನೆಯ ಬಗ್ಗೆ ಎಚ್ಚರಿಕೆ ವಹಿಸಲು ಎರಡು ಪ್ರಮುಖ ಕಾರಣಗಳಿವೆ ಎಂದು ‘ದಿ ಇಕನಾಮಿಸ್ಟ್’ ವರದಿ ತಿಳಿಸಿದೆ. ಮೊದಲನೆಯದಾಗಿ, ಪಾಕಿಸ್ತಾನದಲ್ಲಿ ರಾಜಕೀಯ ಬಹುತ್ವ ಸೀಮಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಪ್ರಾಂತ್ಯಗಳು ಕೇಂದ್ರ ಸರ್ಕಾರದ ಅಧಿಕಾರಕ್ಕೆ ಪ್ರತಿರೋಧ ಒಡ್ಡಬಲ್ಲ ಪ್ರಮುಖ ಶಕ್ತಿಗಳಾಗಿವೆ.

ಪಂಜಾಬ್‌ನಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಮತ್ತು ಸಿಂಧ್‌ನಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪ್ರಭಾವ ಹೊಂದಿವೆ. ಸಿಂಧ್ ಪ್ರಾಂತ್ಯದ ಪ್ರಮುಖ ನಗರವಾದ ಕರಾಚಿ ದೇಶದ ವಾಣಿಜ್ಯ ಕೇಂದ್ರವಾಗಿದೆ. ಸೇನಾ ಸರ್ವಾಧಿಕಾರಿಗಳ ಆಡಳಿತದ ಸಂದರ್ಭದಲ್ಲಿಯೂ ಈ ಪ್ರಾಂತ್ಯಗಳು ಪರ್ಯಾಯ ರಾಜಕೀಯ ಶಕ್ತಿ ಕೇಂದ್ರಗಳಾಗಿ ಉಳಿದಿದ್ದವು. ಹೀಗಾಗಿ, ಈ ಪ್ರಾಂತ್ಯಗಳನ್ನು ವಿಭಜಿಸುವುದರ ಹಿಂದೆ ರಾಜಕೀಯ ಉದ್ದೇಶವಿರಬಹುದು ಎಂಬ ಅನುಮಾನ ವರದಿಯಲ್ಲಿ ವ್ಯಕ್ತವಾಗಿದೆ. ಎರಡನೆಯದಾಗಿ, ಮುನೀರ್ ತಮ್ಮ ಕೈಯಲ್ಲಿ ಅಧಿಕಾರವನ್ನು ಕ್ರೋಢೀಕರಿಸಿಕೊಳ್ಳುವಲ್ಲಿ ಕಠಿಣ ನಿಲುವು ಅನುಸರಿಸಿದ್ದಾರೆ ಎಂಬ ಆರೋಪವಿದೆ.

ಇಮ್ರಾನ್ ಖಾನ್ ಜೈಲಿನಲ್ಲಿ; ವಿರೋಧ ಪಕ್ಷಗಳ ಮೇಲೆ ನಿರ್ಬಂಧ

ಪಾಕಿಸ್ತಾನದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪಿಎಂಎಲ್-ಎನ್ ಮತ್ತು ಪಿಪಿಪಿಯ ನಾಯಕರನ್ನು ಮುನೀರ್ ತಮ್ಮ ಪ್ರಭಾವದ ವಲಯಕ್ಕೆ ತಂದಿದ್ದಾರೆ ಎಂಬ ವಿಶ್ಲೇಷಣೆಯಿದೆ. ಈ ಪಕ್ಷಗಳ ವಾಸ್ತವಿಕ ನಾಯಕತ್ವದ ಪ್ರಭಾವದ ನಡುವೆಯೇ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ದುರ್ಬಲ ಸ್ಥಾನದಲ್ಲಿದ್ದಾರೆ ಎಂದು ವರದಿ ಟೀಕಿಸಿದೆ.

ಮತ್ತೊಂದೆಡೆ, ಮೂರನೇ ಪ್ರಮುಖ ರಾಜಕೀಯ ಪಕ್ಷದ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ. ಅವರ ಬೆಂಬಲಿಗರ ಪ್ರತಿಭಟನೆಗಳಿಗೆ ನಿರ್ಬಂಧಗಳು ಮತ್ತು ತಡೆಗೋಡೆಗಳ ಮೂಲಕ ಪ್ರತಿಕ್ರಿಯಿಸಲಾಗುತ್ತಿದೆ. ದೂರದರ್ಶನ ವಾಹಿನಿಗಳೂ ಅವರ ಹೆಸರನ್ನು ಪ್ರಸ್ತಾಪಿಸಲು ಹಿಂಜರಿಯುವ ವಾತಾವರಣವಿದೆ ಎಂದು ವರದಿ ಉಲ್ಲೇಖಿಸಿದೆ.

ಹೀಗಾಗಿ, ಪಾಕಿಸ್ತಾನವನ್ನು ಸಣ್ಣ ಪ್ರಾಂತ್ಯಗಳಾಗಿ ವಿಭಜಿಸುವ ಯೋಜನೆಯು ಪ್ರಾಂತೀಯ ಸರ್ಕಾರಗಳನ್ನು ಬಲಪಡಿಸಿ ಜನರಿಗೆ ಉತ್ತಮ ಆಡಳಿತ ಒದಗಿಸುವ ಉದ್ದೇಶ ಹೊಂದಿರುವ ಸಾಧ್ಯತೆ ಕಡಿಮೆ ಎಂದು ‘ದಿ ಇಕನಾಮಿಸ್ಟ್’ ವಿಶ್ಲೇಷಿಸಿದೆ. ಬದಲಾಗಿ, ರಾಜಕಾರಣಿಗಳು ಸೇನಾ ಮುಖ್ಯಸ್ಥರ ಬೇಡಿಕೆಗಳಿಗೆ ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡುವ ಮೂಲಕ ಅಸಿಮ್ ಮುನೀರ್ ತಮ್ಮ ಅಧಿಕಾರವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಈ ಯೋಜನೆ ನೆರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.