ಇಸ್ಲಾಮಾಬಾದ್: ಭಾರತದ ಜೊತೆಗಿನ ಇತ್ತೀಚಿನ ಸಂಘರ್ಷದಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ (Pakistan Army Chief) ಜನರಲ್ ಅಸೀಮ್ ಮುನೀರ್ (Asim Munir) ಅವರನ್ನು ಮಂಗಳವಾರ ಫೀಲ್ಡ್ ಮಾರ್ಷಲ್ (Field Marshal) ರ‍್ಯಾಂಕ್‌ಗೆ ಏರಿಸಲಾಗಿದೆ. ಇದರೊಂದಿಗೆ, ಪಾಕಿಸ್ತಾನದ ಇತಿಹಾಸದಲ್ಲಿ ಈ ಗೌರವಕ್ಕೆ ಭಾಜನರಾದ ಎರಡನೇ ಹಿರಿಯ ಸೇನಾಧಿಕಾರಿಯಾಗಿದ್ದಾರೆ.
ಸರ್ಕಾರದಿಂದ ಅಧಿಕೃತ ಘೋಷಣೆ
ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್‌ಗೆ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 1959ರಲ್ಲಿ ಜನರಲ್ ಆಯುಬ್ ಖಾನ್ ಈ ರ‍್ಯಾಂಕ್‌ಗೆ ಏರಿದ ಮೊದಲ ಸೇನಾಧಿಕಾರಿಯಾಗಿದ್ದರು. ಪ್ರಧಾನಮಂತ್ರಿಯ ಕಚೇರಿಯ ಹೇಳಿಕೆಯ ಪ್ರಕಾರ, "ದೇಶದ ಭದ್ರತೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಮತ್ತು ಶತ್ರುವನ್ನು ಸೋಲಿಸಿದ ಉನ್ನತ ಕಾರ್ಯತಂತ್ರ ಮತ್ತು ಧೈರ್ಯದ ನಾಯಕತ್ವಕ್ಕಾಗಿ ಜನರಲ್ ಅಸೀಮ್ ಮುನೀರ್ (ನಿಶಾನ್-ಎ-ಇಮ್ತಿಯಾಜ್ ಮಿಲಿಟರಿ) ಅವರನ್ನು ಫೀಲ್ಡ್ ಮಾರ್ಷಲ್ ರ‍್ಯಾಂಕ್‌ಗೆ ಏರಿಸಲಾಗಿದೆ."
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ
ಪಾಕಿಸ್ತಾನ ಸರ್ಕಾರದಿಂದ ಅವರ ರ‍್ಯಾಂಕ್ ಏರಿಕೆಗೆ ಒಪ್ಪಿಗೆ ಸಿಕ್ಕರೂ, ಸಾಮಾಜಿಕ ಜಾಲತಾಣಗಳಲ್ಲಿ ಅಸೀಮ್ ಮುನೀರ್ ಅವರನ್ನು "ತಾವೇ ತಮ್ಮನ್ನು ಏರಿಸಿಕೊಂಡಿದ್ದಾರೆ" ಎಂದು ಟೀಕಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥನೇ ಪ್ರಧಾನಮಂತ್ರಿ ಮತ್ತು ಸರ್ಕಾರದ ಮೂಲಕ ಆಡಳಿತ ನಡೆಸುತ್ತಿರುವ ಚಿತ್ರಣವೇ ಇದಕ್ಕೆ ಕಾರಣವಾಗಿದೆ ಉಲ್ಲೇಖಿಸಲಾಗಿದೆ. ಎಕ್ಸ್ ಬಳಕೆದಾರರು, "ಸಂಘರ್ಷದಲ್ಲಿ ಸೋತ ನಂತರ, ದೇಶದ ವಾಯುನೆಲೆಗಳು ಬಾಂಬ್ ದಾಳಿಗೆ ಒಳಗಾದರೂ ಹೇಗೆ ಫೀಲ್ಡ್ ಮಾರ್ಷಲ್ ರ‍್ಯಾಂಕ್‌ಗೆ ಏರಿಸಲಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ. ಆಪರೇಷನ್ ಸಿಂಧೂರ್‌ನ ನಂತರ ಪಾಕಿಸ್ತಾನದ ಸೇನಾ ಪ್ರತಿದಾಳಿಯನ್ನು ಭಾರತೀಯ ಸೇನೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆಗಟ್ಟಿದ್ದವು.
ಈ ಸುದ್ದಿಯನ್ನು ಓದಿ: Asim Munir: ʼಮತಾಂಧʼ ಅಸಿಮ್ ಮುನೀರ್‌ಗೆ ಬಡ್ತಿ ನೀಡಿದ ಪಾಕ್ ಸರ್ಕಾರ; ಫೀಲ್ಡ್ ಮಾರ್ಷಲ್ ಆಗಿ ಪ್ರಮೋಷನ್
‘ಫೇಲ್ಡ್ ಮಾರ್ಷಲ್’ ಎಂದು ಲೇವಡಿ
ಮೇ 10ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ಒಪ್ಪಂದಕ್ಕೆ ಒಡಂಬಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುನೀರ್‌ನ ರ‍್ಯಾಂಕ್ ಏರಿಕೆಯನ್ನು ಟೀಕಿಸಿರುವ ಎಕ್ಸ್ ಬಳಕೆದಾರರು, "ಅಸೀಮ್ ಮುನೀರ್ ತಾವೇ ಫೀಲ್ಡ್ ಮಾರ್ಷಲ್ ಆಗಿ ಏರಿದ್ದಾರೆ. ಇದು ಕಾಮಿಡಿ ದೇಶ!" ಎಂದು ಕಾಮೆಂಟ್ ಮಾಡಿದ್ದಾರೆ.ನಾಲ್ಕು ದಿನಗಳ ಸಂಘರ್ಷದ ವೇಳೆ ಮುನೀರ್ ಬಂಕರ್‌ನಲ್ಲಿ ಅಡಗಿಕೊಂಡಿದ್ದ ಎಂಬ ವರದಿಗಳನ್ನು ಉಲ್ಲೇಖಿಸಿ, ಒಬ್ಬ ಬಳಕೆದಾರ, "ಈಗ ರ‍್ಯಾಂಕ್ ಏರಿಕೆಯ ನಂತರ ಮುನೀರ್‌ಗೆ ದೊಡ್ಡ ಮತ್ತು ವಿಶಾಲವಾದ ಬಂಕರ್ ಸಿಗಲಿದೆ" ಎಂದು ಲೇವಡಿ ಮಾಡಿದ್ದಾರೆ. ಕೆಲವರು, "ಅಸೀಮ್ ಮುನೀರ್ ಫೀಲ್ಡ್ ಮಾರ್ಷಲ್ ಆಗಿಲ್ಲ, ಫೇಲ್ಡ್ ಮಾರ್ಷಲ್ ಆಗಿದ್ದಾರೆ" ಎಂದು ಟೀಕಿಸಿದ್ದಾರೆ.
ಬಾಲಿವುಡ್ ಕಾಮೆಂಟ್‌ಗಳೊಂದಿಗೆ ಟ್ರೋಲ್
ಬಾಲಿವುಡ್ ನಟ ನಾನಾ ಪಟೇಕರ್ ಒಂದು ಚಿತ್ರದಲ್ಲಿ ಕನ್ನಡಿಯ ಮುಂದೆ ತನಗೆ ತಾನೇ ಪೂಜೆ ಸಲ್ಲಿಸುವ ದೃಶ್ಯವನ್ನು ಶೇರ್ ಮಾಡಿ, ಮುನೀರ್ ತಾವೇ ರ‍್ಯಾಂಕ್ ಏರಿಸಿಕೊಂಡಿದ್ದಾರೆ ಎಂದು ಹೋಲಿಕೆ ಮಾಡಿದ್ದಾರೆ.ಗಾಯಕ ಅದ್ನಾನ್ ಸಾಮಿ ಕೂಡ ಎಕ್ಸ್‌ನಲ್ಲಿ ಹಳೆಯ ಬಾಲಿವುಡ್ ಚಿತ್ರದ ಕ್ಲಿಪ್ ಶೇರ್ ಮಾಡಿ, ಮುನೀರ್‌ನನ್ನು ಗೇಲಿ ಮಾಡಿದ್ದಾರೆ. ಕ್ಲಿಪ್‌ನಲ್ಲಿ ಒಬ್ಬ ವ್ಯಕ್ತಿ ಪ್ರಾಣಿಗಳಿಗೆ ಭಾಷಣ ನೀಡುತ್ತಾ, "ನಾನು ಎಲ್ಲ ಕತ್ತೆಗಳ ಮತ್ತು ಪ್ರಾಣಿಗಳ ಹಕ್ಕುಗಳನ್ನು ರಕ್ಷಿಸುತ್ತೇನೆ" ಎಂದು ಹೇಳುವ ದೃಶ್ಯವಿದೆ.