ಕರಾಚಿ: ಪಾಕಿಸ್ತಾನದಲ್ಲಿ ( Pakistan ) ಇತ್ತೀಚಿನ ವರ್ಷಗಳಲ್ಲಿ ಪೊಲೀಸರು, ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರ ದಾಳಿಗಳು (terror attack) ಹೆಚ್ಚಾಗುತ್ತಿವೆ. ಇಂತಹ ಒಂದು ಘಟನೆ ಶನಿವಾರ ನಡೆದಿದೆ. ಕರಾಚಿಯಲ್ಲಿರುವ (karachi) ಪಾಕಿಸ್ತಾನದ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ 6 ಭಯೋತ್ಪಾದಕರು, 4 ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಅರೆಸೈನಿಕ ಪಡೆಯ ಪ್ರಾಂತೀಯ ಪ್ರಧಾನ ಕಚೇರಿಗೆ ಸ್ಫೋಟಕ ತುಂಬಿದ ವಾಹನವೊಂದು ಡಿಕ್ಕಿ ಹೊಡೆದಿದ್ದು ಇದರ ಬಳಿಕ ಭದ್ರತಾ ಪಡೆಗಳು ಭಯೋತ್ಪಾದಕ ಗುಂಪಿನೊಂದಿಗೆ ಗುಂಡಿನ ಕಾಳಗ ನಡೆಸಿದರು.
ಕರಾಚಿಯಲ್ಲಿರುವ ಮೊಸಾಮಿಯಾತ್ ಚೌರಂಗಿ ಪ್ರದೇಶದಲ್ಲಿ ಶನಿವಾರ ಭಾರೀ ಗುಂಡಿನ ಸದ್ದು ಕೇಳಿಬಂದಿದೆ. ಸಶಸ್ತ್ರ ಸೇವಾ ಸಿಬ್ಬಂದಿ ಬೀದಿಗಳನ್ನು ಸುತ್ತುವರೆದಿದ್ದು, ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ತೊಡಗಿಕೊಂಡರು.
ಇದಕ್ಕೂ ಮೊದಲು ಕರಾಚಿಯ ಗುಲಿಸ್ತಾನ್-ಇ-ಜೌಹರ್‌ನಲ್ಲಿರುವ ಅರೆಸೈನಿಕ ಪಡೆಯ ನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ನಾಲ್ವರು ಸಿಂಧ್ ರೇಂಜರ್ಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನೊಂದು ಘಟನೆ ವಿಶ್ವವಿದ್ಯಾಲಯ ರಸ್ತೆಯ ಹವಾಮಾನ ಚೌರಂಗಿ ಬಳಿ ನಡೆದಿದ್ದು, ಇಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ದಾಳಿ ನಡೆದಿದೆ. ಸ್ಥಳಕ್ಕೆ ತುರ್ತು ಪ್ರತಿಕ್ರಿಯೆ ಪಡೆ, ಪೊಲೀಸ್ ಕಮಾಂಡೋಗಳ ವಿಶೇಷ ಘಟಕಗಳನ್ನು ನಿಯೋಜಿಸಲಾಗಿದೆ.
ಕರಾಚಿಯ ಸಿಂಧ್ ರೇಂಜರ್ಸ್ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಲು ಯತ್ನಿಸಿದ ಬಳಿಕ ಪಾಕಿಸ್ತಾನ ಪಡೆಗಳು ಆರು ಭಯೋತ್ಪಾದಕರನ್ನು ಹೊಡೆದುರುಳಿಸಿ, ಒಬ್ಬನನ್ನು ಜೀವಂತವಾಗಿ ವಶಕ್ಕೆ ಪಡೆದಿದೆ ಎಂದು ತಿಳಿಸಿದೆ.
ದಾಳಿ ಹೊಣೆ ಹೊತ್ತುಕೊಂಡ ಜೆಯುಎ
ಸಿಂಧ್ ರೇಂಜರ್ಸ್ ಪ್ರಧಾನ ಕಚೇರಿ ಮೇಲಿನ ದಾಳಿ ಹೊಣೆಯನ್ನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಿಂದ ಬೇರ್ಪಟ್ಟ ಭಯೋತ್ಪಾದಕ ಗುಂಪು ಜಮಾತ್-ಉಲ್-ಅಹ್ರಾರ್ (ಜೆಯುಎ) ಹೊತ್ತುಕೊಂಡಿದೆ. ಇದರ ಖುಲಾಫಾ-ಎ-ರಷಿದ್ದೀನ್ ಇಶ್ತಿಶ್ ಹಾದಿ ಬ್ರಿಗೇಡ್ ಎಂಬ ಆತ್ಮಹತ್ಯಾ ದಳ ಈ ದಾಳಿಗಳನ್ನು ನಡೆಸಿರುವುದಾಗಿ ತಿಳಿಸಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಿಂಧ್ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ, ಸ್ಫೋಟದ ಶಬ್ದ, ಗುಂಡಿನ ದಾಳಿಯ ಬಗ್ಗೆ ತಿಳಿದಿದೆ. ಇದರ ಕುರಿತು ವಿವರವಾದ ಮಾಹಿತಿಯನ್ನು ಕೇಳಲಾಗಿದೆ. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಘಟನೆಯ ಸ್ವರೂಪ ತಿಳಿದುಕೊಂಡು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.