ನವದೆಹಲಿ: ಭಾರತೀಯ ವಲಸಿಗರೇ (immigration) ಹೆಚ್ಚಾಗಿರುವ ಇಸ್ರೇಲ್‌ನ (Israel) ಡಿಮೋನಾ (Dimona) ನಗರದ ಮೇಲೆ ಇರಾನ್ ದಾಳಿ (Iran war) ನಡೆಸಿರುವುದು ಇದೀಗ ಭಾರತ ಸೇರಿದಂತೆ ವಿಶ್ವವನ್ನೇ ಆಘಾತಕ್ಕೀಡು ಮಾಡಿದೆ. ಇರಾನ್‌ನ ನಟಾಂಜ್ ಪರಮಾಣು ಪುಷ್ಟೀಕರಣ ತಾಣದ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನ ಡಿಮೋನಾ ನಗರದ ಮೇಲೆ ಶನಿವಾರ ಸಂಜೆ ಇರಾನ್ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಇದರಿಂದ ನಗರದ ವಿಶಾಲ ಪ್ರದೇಶದಲ್ಲಿ ಶಿಲಾಖಂಡರಾಶಿಗಳು ತುಂಬಿಕೊಂಡಿತ್ತು. ಸುಮಾರು 47 ಮಂದಿ ಗಾಯಗೊಂಡರು.
ಭಾರತೀಯ ಮೂಲದ ಜನರೇ ವಾಸವಾಗಿರುವ ಡಿಮೋನಾ ನಗರವು ಭಾರತೀಯ ಶೈಲಿಯ ಉಡುಗೆ ತೊಡುಗೆಯನ್ನು ಧರಿಸಿರುವ ಜನರು ಬೀದಿಗಳಲ್ಲಿ ಕಾಣಸಿಗುತ್ತಾರೆ. ಜಿಲೇಬಿ ಮತ್ತು ಚಾಟ್‌ನ ವಾಸನೆಯು ಬೀದಿಗಳಲ್ಲಿ ಮೂಗಿಗೆ ಬಡಿಯುತ್ತದೆ. ಇಸ್ರೇಲ್ ನ ಪ್ರಮುಖ ಪರಮಾಣು ತಾಣವಾಗಿರುವ ಡಿಮೋನಾ "ಲಿಟಲ್ ಇಂಡಿಯಾ" ಎಂದೇ ಹೆಸರು ಪಡೆದಿದೆ.
ಇಸ್ರೇಲ್ ಪ್ರಮುಖ ಪರಮಾಣು ಸಂಶೋಧನಾ ತಾಣದ ಮೇಲೆ ಇರಾನ್ ದಾಳಿ; 40 ಕ್ಕೂ ಹೆಚ್ಚು ಜನರಿಗೆ ಗಾಯ
ಇಲ್ಲಿನ ಜನಸಂಖ್ಯೆಯ ಸುಮಾರು ಶೇ. 30ರಷ್ಟು ಅಂದರೆ 7,500ರಷ್ಟು ಮಂದಿ ಭಾರತೀಯ- ಯಹೂದಿಗಳಾಗಿದ್ದಾರೆ. ಇಲ್ಲಿ ನಿರರ್ಗಳವಾಗಿ ಮರಾಠಿ ಮತ್ತು ಹಿಂದಿ ಮಾತನಾಡುವವರು, ಕ್ರಿಕೆಟ್ ಅಭಿಮಾನಿಗಳು, ಸೋನ್‌ಪಾಪ್ಡಿ ಗುಲಾಬ್ ಜಾಮೂನ್, ಪಾಪರಿ ಚಾಟ್ ಮತ್ತು ಭೇಲ್‌ಪುರಿಯಂತಹ ಭಾರತೀಯ ತಿಂಡಿಗಳನ್ನು ಕಾಣಬಹುದು.
ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ಪ್ರಕಾರ, ಭಾರತದಿಂದ ಇಸ್ರೇಲ್‌ಗೆ 1950 ಮತ್ತು 1960 ರ ದಶಕಗಳಲ್ಲಿ ಹೆಚ್ಚಿನ ವಲಸೆಯಾಗಿದೆ. ಇದರಲ್ಲಿ ಹೆಚ್ಚಿನವರು ಮಹಾರಾಷ್ಟ್ರ, ಕೇರಳ,ಕೋಲ್ಕತ್ತಾದಿಂದ ಬಂದವರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಮಿಜೋರಾಂ ಮತ್ತು ಮಣಿಪುರದಿಂದ ಕೆಲವು ಭಾರತೀಯ ಯಹೂದಿಗಳು ಇಸ್ರೇಲ್‌ಗೆ ವಲಸೆ ಬರುತ್ತಿದ್ದಾರೆ. ಹೆಚ್ಚಿನ ಭಾರತೀಯರು ಇಲಿ ವಜ್ರ ವ್ಯಾಪಾರಿಗಳು, ಐಟಿ ವೃತ್ತಿಪರರು ಮತ್ತು ವೃದ್ಧರ ಆರೈಕೆದಾರರಾಗಿ ಗುರುತಿಸಿಕೊಂಡಿದ್ದಾರೆ.
ಕೇವಲ ಆಹಾರ ಮಾತ್ರವಲ್ಲ ವಿವಿಧ ಸಂಪ್ರದಾಯ, ಹಬ್ಬಗಳನ್ನು ಕೂಡ ಇಲ್ಲಿನ ಜನರು ಆಚರಿಸುತ್ತಾರೆ. ಓಣಂ, ದೀಪಾವಳಿ ಸಂಭ್ರಮವನ್ನು ಇಲ್ಲಿ ಕಾಣಬಹುದಾಗಿದೆ. ಇಸ್ರೇಲಿ ಸೂಪರ್‌ಮಾರ್ಕೆಟ್ ಗಳಲ್ಲಿ ರಸ್ಕ್‌ನೊಂದಿಗೆ ಕಪ್ ಚಹಾ ಸವಿಯುವ ಅನೇಕ ಭಾರತೀಯರಿದ್ದಾರೆ.
2025ರ ನವೆಂಬರ್ ತಿಂಗಳಲ್ಲಿ ನಡೆದ ಇಂಡಿಯನ್ ಫಿಲ್ಮ್ ಫೆಸ್ಟ್ ಒಂದು ತಿಂಗಳಿಗೂ ಹೆಚ್ಚು ಕಾಲ ಭಾರತೀಯ ಸಿನೆಮಾಗಳ ಪ್ರದರ್ಶನ ನಡೆದಿದ್ದು, ಇದಕ್ಕೂ ಮೊದಲು ಭಾರತೀಯ ಸಂಗೀತ ಉತ್ಸವವನ್ನು ಆಯೋಜಿಸಲಾಗಿತ್ತು. ಭಾರತೀಯ ಮೂಲದ ಹೆಚ್ಚಿನ ಜನರು ಹೈಫಾ, ಟೆಲ್ ಅವೀವ್, ಅರಾದ್, ನೆತನ್ಯಾ ಮತ್ತು ಅಫುಲಾ ನಗರಗಳಲ್ಲಿ ವಾಸವಾಗಿದ್ದಾರೆ.
ಪರಮಾಣುವಿನ ಭದ್ರಕೋಟೆ
ಡಿಮೋನಾದ ಶಿಮೊನ್ ಪೆರೆಸ್ ನೆಗೆವ್ ಪರಮಾಣು ಕೇಂದ್ರ 1958ರಲ್ಲಿ ನಿರ್ಮಾಣವಾಗಿದ್ದು, 1964ರ ಸುಮಾರಿಗೆ ಕಾರ್ಯಾರಂಭ ಮಾಡಲು ಪ್ರಾರಂಭಿಸಿತ್ತು. 1960ರ ಯುಎಸ್ ಗುಪ್ತಚರ ಮಾಹಿತಿ ಪ್ರಕಾರ ಇದು ಪರಮಾಣು ಶಸ್ತ್ರಾಸ್ತ್ರಗಳಿಗೆ ಪ್ರಮುಖ ಅವಶ್ಯಕತೆಯಾದ ಪ್ಲುಟೋನಿಯಂ ಅನ್ನು ಉತ್ಪಾದಿಸಲು ವಿನ್ಯಾಸಗೊಳಿಸಲಾದ ಸ್ಥಾವರವಾಗಿದೆ. ಇರಾನ್ ವಿರುದ್ಧ ಸಂಘರ್ಷವನ್ನು ಪ್ರಾರಂಭಿಸಿರುವ ಇಸ್ರೇಲ್ ಸದ್ಯ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿಲ್ಲ.