ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಜಿ ಪ್ರಧಾನಿ ಶೇಖ್ ಹಸೀನಾ ವಾಪಸಾತಿಗೆ ಬಾಂಗ್ಲಾದೇಶ ಸ್ವಾಗತ!

Sheikh Hasina: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಢಾಕಾಗೆ ಮರಳುವ ಯೋಜನೆಯನ್ನು ಬಾಂಗ್ಲಾದೇಶ ಸ್ವಾಗತಿಸಿದೆ. ಅವರು ಈ ಘೋಷಣೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯ ದೊರಕಬೇಕು ಎಂಬುದು ನಮ್ಮ ಉದ್ದೇಶ ಎಂದು ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಸಲಹೆಗಾರರಾದ ಜಹೇದ್ ಉರ್ ರೆಹಮಾನ್ ಹೇಳಿದರು.

ಶೇಖ್ ಹಸೀನಾ (ಸಂಗ್ರಹ ಚಿತ್ರ)

ಢಾಕಾ, ಜು.15: ಪದಚ್ಯುತ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಢಾಕಾಗೆ ಮರಳುವ ಯೋಜನೆಯನ್ನು ಬಾಂಗ್ಲಾದೇಶ (Bangladesh) ಸ್ವಾಗತಿಸಿದೆ. ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಯಾಗಿ ಅವರು ನ್ಯಾಯವನ್ನು ಎದುರಿಸಲೇಬೇಕು ಎಂದು ಹೇಳಿದೆ. 78 ವರ್ಷದ ಹಸೀನಾ, ಆಗಸ್ಟ್ 2024 ರಲ್ಲಿ ಬೃಹತ್ ಸರ್ಕಾರಿ ವಿರೋಧಿ ಆಂದೋಲನದ ಹಿನ್ನೆಲೆಯಲ್ಲಿ ತಮ್ಮ ಸರ್ಕಾರ ಪತನಗೊಂಡ ನಂತರ ಢಾಕಾದಿಂದ ಪಲಾಯನ ಮಾಡಿದ ನಂತರ ಭಾರತದಲ್ಲಿ ವಾಸಿಸುತ್ತಿದ್ದಾರೆ.

ಕಳೆದ ವಾರ ಹಸೀನಾ ಅವರ ಆಪ್ತ ಮೂಲಗಳು, ಈ ವರ್ಷದ ಅಂತ್ಯದ ವೇಳೆಗೆ ಅವರು ತಮ್ಮ ಅವಾಮಿ ಲೀಗ್ ಪಕ್ಷವನ್ನು ಪುನರುಜ್ಜೀವನಗೊಳಿಸಲು ಸ್ವಯಂಪ್ರೇರಣೆಯಿಂದ ಢಾಕಾಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದವು.

ಬಾಂಗ್ಲಾದೇಶ ಹೇಳಿದ್ದೇನು?

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರ ಸಲಹೆಗಾರರಾದ ಜಹೇದ್ ಉರ್ ರೆಹಮಾನ್, 2024 ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಮೇಲೆ ಅವರ ಸರ್ಕಾರ ನಡೆಸಿದ ಕ್ರೂರ ದಮನಕ್ಕೆ ಕಾರಣವಾದ ಮಾನವೀಯತೆಯ ವಿರುದ್ಧದ ಅಪರಾಧಗಳ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ವಿಶ್ವದ ಅತ್ಯುತ್ತಮ ವಕೀಲರನ್ನು ಢಾಕಾಗೆ ಕರೆತರುವಂತೆ ಹಸೀನಾ ಅವರಿಗೆ ಸವಾಲು ಹಾಕಿದರು.

"ಸಾಯಲೂ ಸಿದ್ಧ"; ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಶೇಖ್ ಹಸೀನಾ

ಅವರು ಈ ಘೋಷಣೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯ ದೊರಕಬೇಕು ಎಂಬುದು ನಮ್ಮ ಉದ್ದೇಶ ಎಂದು ರೆಹಮಾನ್ ಹೇಳಿದರು. ಅವರು ಎಸಗಿದ ಅಪರಾಧಗಳಿಗೆ ವಿಧಿಸಲಾದ ಮರಣದಂಡನೆ ಶಿಕ್ಷೆ ಯಥಾಸ್ಥಿತಿಯಲ್ಲಿ ಉಳಿಯಬೇಕು ಎಂಬುದು ದೇಶದ ಜನರ ಆಶಯ. ಆ ಶಿಕ್ಷೆ ಜಾರಿಯಾದರೆ, ಜನರು ಬಯಸಿದಂತೆ ಅವರಿಗೆ ಮರಣದಂಡನೆ ಜಾರಿಯಾಗುತ್ತದೆ ಎಂದು ಅವರು ಹೇಳಿದರು.

“ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ನಡೆಯುವ ವಿಚಾರಣೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದು ಹೇಳಿದರು. ಈ ವಿಚಾರಣೆಯನ್ನು ವೀಕ್ಷಕರು ನಿಗಾ ವಹಿಸಬಹುದಾಗಿದ್ದು, ವಿಡಿಯೊ ಪ್ರಸಾರದ ಮೂಲಕವೂ ಸಾರ್ವಜನಿಕರು ವೀಕ್ಷಿಸಲು ಅವಕಾಶ ಇರಲಿದೆ ಎಂದರು. ಹಾಗೆಯೇ, ನ್ಯಾಯಾಲಯವು ಶೇಖ್ ಹಸೀನಾ ವಿರುದ್ಧದ ತೀರ್ಪನ್ನು ಪರಿಷ್ಕರಿಸುವ ಅಥವಾ ಅವರನ್ನು ಖುಲಾಸೆಗೊಳಿಸುವ ಸಾಧ್ಯತೆಯೂ ಇದೆ” ಎಂದು ರೆಹಮಾನ್ ಹೇಳಿದರು.

ಆಗಸ್ಟ್ 5, 2024 ರಂದು ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ಬೀದಿ ಪ್ರತಿಭಟನೆಯಲ್ಲಿ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ರಿ ಹಸೀನಾ ಅವರ ಸರ್ಕಾರವನ್ನು ಉರುಳಿಸಲಾಯಿತು. 2010ರಲ್ಲಿ ಅವಾಮಿ ಲೀಗ್ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ನೀಡಿದ್ದ ಕೆಲವು ತೀರ್ಪುಗಳನ್ನು ತಡೆಹಿಡಿಯಲಾದ ಹಿಂದಿನ ನಿದರ್ಶನಗಳಿವೆ ಎಂದು ರೆಹಮಾನ್ ಹೇಳಿದರು.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿದೆ ಭಾರತ ವಿರೋಧಿ ಮನಸ್ಥಿತಿ; ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಕಳವಳ

ಹಸೀನಾ ಅವರ ಅಪರಾಧ ಸಾಬೀತು

2024 ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಮೇಲೆ ಹಸೀನಾ ಸರ್ಕಾರವು ನಡೆಸಿದ್ದ ಕ್ರೂರ ಕ್ರಮಕ್ಕೆ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳು ಎಂದು ಆರೋಪಿಸಿ ಢಾಕಾದ ವಿಶೇಷ ನ್ಯಾಯಮಂಡಳಿಯು ಕಳೆದ ವರ್ಷ ನವೆಂಬರ್‌ನಲ್ಲಿ ಹಸೀನಾ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿತು.

ಮರಣದಂಡನೆ, ಕ್ರಿಮಿನಲ್ ಅಪರಾಧಗಳು ಮತ್ತು ಅವರ ವಿರುದ್ಧದ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಹಸೀನಾ ತಳ್ಳಿಹಾಕಿದ್ದಾರೆ. ತೀರ್ಪಿನ ನಂತರ, ಕಾನೂನು ಕ್ರಮ ಜರುಗಿಸಲು ಆಕೆಯನ್ನು ಹಸ್ತಾಂತರಿಸುವಂತೆ ಭಾರತವನ್ನು ಬಾಂಗ್ಲಾದೇಶ ಒತ್ತಾಯಿಸಿತ್ತು.

ಆಗಸ್ಟ್ 2024 ರಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಳಸಿದೆ.