BBC Chief Resign: ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಟ್ರಂಪ್ ಭಾಷಣ ತಿರುಚಿದ ಆರೋಪ: ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳ ತಲೆದಂಡ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ತಿರುಚಿ ಸಾಕ್ಷ್ಯಚಿತ್ರದಲ್ಲಿ ಪ್ರದರ್ಶಿಸಿದಕ್ಕಾಗಿ ಬಿಬಿಸಿ ಸುದ್ದಿ ಸಂಸ್ಥೆಯ ಮಹಾ ನಿರ್ದೇಶಕರ ತಲೆದಂಡವಾಗಿದೆ. ಅವರು ಮಾಡಿದ ಒಂದು ಎಡವಟ್ಟಿನಿಂದ ವಿವಾದ ಎದ್ದಿದ್ದು, ಇದರ ಬೆನ್ನಲ್ಲೇ ಬಿಬಿಸಿಯ ಮಹಾನಿರ್ದೇಶಕ ಟಿಮ್ ಡೇವಿ ರಾಜೀನಾಮೆ ನೀಡಿದ್ದಾರೆ.
ಟಿಮ್ ಡೇವಿ - ಡೊನಾಲ್ಡ್ ಟ್ರಂಪ್ -
ಲಂಡನ್: ಬಿಬಿಸಿ ಸುದ್ದಿ ಸಂಸ್ಥೆಯ (BBC) ಇಬ್ಬರು ಉನ್ನತಾಧಿಕಾರಿಗಳ ರಾಜೀನಾಮೆ ಇದೀಗ ಮಾಧ್ಯಮ ವಲಯದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಭಾಷಣವನ್ನು ತಿರುಚಿ ಪ್ರಸಾರ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾದ ಹಿನ್ನಲೆಯಲ್ಲಿ ಬಿಬಿಸಿ ಸುದ್ದಿ ಸಂಸ್ಥೆಯ ಮಹಾ ನಿರ್ದೇಶಕ ಟಿಮ್ ಡೇವಿ (Tim Davie) ಮತ್ತು ಚೀಫ್ ಎಕ್ಸಿಕ್ಯೂಟಿವ್ ಡೆಬೊರಾ ಟರ್ನೆಸ್ (Deborah Turness) ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜ. 6ರಂದು ಕ್ಯಾಪಿಟಲ್ ಹಿಲ್ ದಂಗೆಗೆ ಸಂಬಂಧಿಸಿದಂತೆ ಬಿಬಿಸಿ ಪ್ರಸಾರ ಮಾಡಿದ್ದ ಡಾಕ್ಯುಮೆಂಟರಿ ಒಂದರಲ್ಲಿ ಟ್ರಂಪ್ ಅವರ ಭಾಷಣವನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿತ್ತು.
ಸಂಸ್ಥೆಯ ಆಂತರಿಕ ಮೆಮೋ ಬಹಿರಂಗಗೊಂಡ ಬಗ್ಗೆ ಡೈಲಿ ಟೆಲಿಗ್ರಾಫ್ ವರದಿ ಮಾಡಿದ ಒಂದು ದಿನದ ಬಳಿಕ ಈ ಇಬ್ಬರು ಉನ್ನತ ಹುದ್ದೆಯಲ್ಲಿದ್ದವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 2021ರ ಜ. 6ರಂದು ನಡೆದಿದ್ದ ಕ್ಯಾಪಿಟಲ್ ಹಿಲ್ಸ್ ದಂಗೆಕೋರರಿಗೆ ಟ್ರಂಪ್ ಉತ್ತೇಜನ ನೀಡುವಂತೆ ಭಾಷಣ ಮಾಡಿದ್ದರು ಎಂಬ ರೀತಿಯಲ್ಲಿ ಮಾಡಿದ್ದ ವರದಿಗೆ ತೀವ್ರ ಟೀಕೆ ಎದುರಾಗಿತ್ತು.
ಎಲ್ಲ ಸಾರ್ವಜನಿಕ ಸಂಸ್ಥೆಗಳಂತೆ, ಬಿಬಿಸಿಯೂ ಪರ್ಫೆಕ್ಟ್ ಆದುದಲ್ಲ, ಮತ್ತು ನಾವು ಯಾವಾಗಲೂ ಮುಕ್ತ, ಪಾರದರ್ಶಕ ಮತ್ತು ಉತ್ತರದಾಯಿಗಳಾಗಿರಬೇಕು ಎಂದು ಡೇವಿ ತನ್ನ ರಾಜೀನಾಮೆಗೆ ಸಂಬಂಧಿಸಿದಂತೆ ಬಿಬಿಸಿ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿಯನ್ನು ಓದಿ; Viral Video: ಹೈವೇ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನಿಂದ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಮಹಿಳೆ; ವಿಡಿಯೊ ವೈರಲ್
ಇದೊಂದೇ ಕಾರಣವಲ್ಲದೇ, ಬಿಬಿಸಿ ನ್ಯೂಸ್ ಸುತ್ತ ಸದ್ಯ ಹಬ್ಬಿರುವ ಚರ್ಚೆಗಳಿಗೆ ಉತ್ತರವಾಗಿ ನನ್ನ ಈ ನಿರ್ಧಾರ ಹೊರಬಿದ್ದಿದೆ. ಒಟ್ಟಿನಲ್ಲಿ ಬಿಬಿಸಿ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದೆ. ಆದರೆ ಅಲ್ಲೂ ಕೆಲವೊಂದು ತಪ್ಪುಗಳಾಗಿವೆ ಮತ್ತು ಸಂಸ್ಥೆಯ ಮಹಾನಿರ್ದೇಶಕನಾಗಿ ಇದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರಬೇಕಾಗಿದೆ ಎಂದು ಡೇವಿ ಬರೆದುಕೊಂಡಿದ್ದಾರೆ.
ಸೋರಿಕೆಯಾದ ಮೆಮೊದಲ್ಲಿ ಉಲ್ಲೇಖವಾಗಿರುವಂತೆ, ಮಾಜಿ ಪತ್ರಕರ್ತ ಪ್ರೆಸ್ಕಾಟ್ ಬಿಬಿಸಿಯ ಡಾಕ್ಯುಮೆಂಟರಿ ‘ಟ್ರಂಪ್: ಎ ಸೆಕೆಂಡ್ ಚಾನ್ಸ್?’ನಲ್ಲಿ ಇದರ ಒಂದು ಸೆಕ್ಷನ್‌ನಲ್ಲಿ ಟ್ರಂಪ್ ಮಾತನಾಡಿದ 50 ನಿಮಿಷಗಳ ಮಾತುಗಳನ್ನು ದಂಗೆಯ ದೃಶ್ಯಾವಳಿಗಳ ಜತೆ ಜೋಡಿಸಲಾಗಿತ್ತು. ಈ ಡಾಕ್ಯುಮೆಂಟರಿ ಕಳೆದ ವರ್ಷದ ಅಮೆರಿಕ ಚುನಾವಣೆಗಳಿಗೂ ಒಂದು ವಾರ ಮೊದಲು ಪ್ರಸಾರಗೊಂಡಿತ್ತು.
ಅಮೆರಿಕ ರಾಜಧಾನಿಯ ಮೇಲೆ ಗುಂಪು ದಾಳಿಗೆ ಟ್ರಂಪ್ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು. ಆ ಚುನಾವಣೆಯಲ್ಲಿ ಟ್ರಂಪ್ ಸೋತರೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಈ ದಂಗೆಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪವೂ ವ್ಯಕ್ತವಾಗಿತ್ತು.
ಪ್ರೆಸ್ಕಾಟ್ ಹೇಳುವ ಪ್ರಕಾರ, ಈ ಡಾಕ್ಯಮೆಂಟರಿಯಲ್ಲಿ ಎಡಿಟ್ ಮಾಡಿರುವ ಪ್ರಕಾರ ಟ್ರಂಪ್ ತನ್ನ ಬೆಂಬಲಿಗರಿಗೆ ಅಮೆರಿಕ ರಾಜಧಾನಿಯತ್ತ ನುಗ್ಗುವಂತೆ ಹೇಳುತ್ತಿದ್ದಾರೆ ‘ಸಾಯುವವರೆಗೆ ಹೋರಾಡಿ’ ಎಂದು ತನ್ನ ಬೆಂಬಲಿಗರಿಗೆ ಉತ್ತೇಜನ ನೀಡುವಂತೆ ಈ ವಿಡಿಯೊದಲ್ಲಿ ತೋರಿಸಲಾಗಿದೆ ಎಂಬ ಆರೋಪ ಇದೀಗ ವ್ಯಕ್ತವಾಗಿದೆ. ಆದರೆ ನಿಜವಾಗ್ಲೂ ಟ್ರಂಪ್ ತನ್ನ ಬೆಂಬಲಿಗರನ್ನು ತನ್ನೊಂದಿಗೆ ಬರುವಂತೆ ಉತ್ತೇಜಿಸಿದ್ದರು. ನಾವೀಗ ನಮ್ಮ ವೀರ ಸೆನೆಟರ್‌ಗಳನ್ನು ಮತ್ತು ಕಾಂಗ್ರೆಸ್ ಮೆನ್ ಗಳನ್ನು ಹಾಗೂ ಮಹಿಳೆಯರನ್ನು ಉತ್ತೇಜಿಸಲು ನಾವು ಸಾಗುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದರು.
ತೃತೀಯ ಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಬಿಬಿಸಿ ನುಣುಚಿಕೊಂಡಿದೆ ಎಂದು ಪ್ರೆಸ್ಕಾಟ್ ಟೀಕಿಸಿದ್ದಾರೆ.