ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರನ್ನೇ ಬ್ಯಾನ್‌ ಮಾಡಿದ ತಾಲಿಬಾನ್: ಬೀಬಿ ಅಥವಾ ಪ್ರಾಣಿಗಳ ಹೆಸರಿನಿಂದ ಕರೆಯಲು ಆದೇಶ

Taliban & Afghan Women: ಆಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಮೇಲೆ ಒಂದೊಂದಾಗಿ ಆದೇಶಗಳ ಮೂಲಕ ಕಡಿವಾಣ ಹಾಕುತ್ತಿರುವ ತಾಲಿಬಾನ್, ಇದೀಗ ಅವರ ಗುರುತನ್ನೇ ಅಳಿಸುವ ಹಂತಕ್ಕೆ ತಲುಪಿದೆ. ಮಹಿಳೆಯರ ಮೂಲ ಹೆಸರುಗಳ ಬದಲಿಗೆ ‘ಬೀಬಿ’, ‘ಹಸು’ ಅಥವಾ ‘ಮೇಕೆ’ ಎಂಬಂತಹ ಪದಗಳಿಂದ ಕರೆಯುವ ಅಥವಾ ಗುರುತಿಸುವ ಪ್ರವೃತ್ತಿಯ ಮೂಲಕ ಆಫ್ಘನ್ ಮಹಿಳೆಯರ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರನ್ನೇ ಬ್ಯಾನ್‌ ಮಾಡಿದ ತಾಲಿಬಾನ್

ಕಾಬೂಲ್, ನ. 28: ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಹಿಳೆಯರ ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಬದುಕಿನ ಮೇಲೆ ಹಲವು ನಿರ್ಬಂಧಗಳನ್ನು ಹೇರುತ್ತಾ ಬಂದಿರುವ ತಾಲಿಬಾನ್, (Taliban) ಒಂದೊಂದೇ ಆದೇಶ ಮತ್ತು ನಿಯಮಗಳ ಮೂಲಕ ಆಫ್ಘನ್ ಮಹಿಳೆಯರ ಗುರುತನ್ನೇ ಅಳಿಸಿಹಾಕುತ್ತಿದೆ. ಮಹಿಳೆಯರ ಹೆಸರುಗಳ ಬದಲಿಗೆ ‘ಬೀಬಿ’, ‘ಹಸು’ ಅಥವಾ ‘ಮೇಕೆ’ ಎಂಬಂತಹ ಪದಗಳನ್ನು ಬಳಸುವ ಮೂಲಕ ಅವರ ಗೌರವ ಮತ್ತು ವ್ಯಕ್ತಿತ್ವವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ.

ಸಾರ್ವಜನಿಕ ವ್ಯವಹಾರಗಳು, ದಾಖಲೆಗಳು ಮತ್ತು ದೈನಂದಿನ ಬದುಕಿನಲ್ಲಿ ಮಹಿಳೆಯರ ಸ್ವಂತ ಗುರುತು ಮರೆಯಾಗುತ್ತಿರುವುದು ಇದೀಗ ಮತ್ತೆ ಮಹಿಳೆಯರ ಹೆಸರನ್ನು ಅಧಿಕೃತ ದಾಖಲೆಗಳಲ್ಲಿ ಮತ್ತು ಆಸ್ಪತ್ರೆಗಳ ದಾಖಲೆಗಳಲ್ಲಿ ಬಳಸದಂತೆ ಕಡಿವಾಣ ಹಾಕಿರುವುದು ಆಫ್ಘನ್ ಮಹಿಳೆಯರ ಸಾಮಾಜಿಕ ಸ್ಥಾನಮಾನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

Child Marriage: 6 ವರ್ಷದ ಬಾಲಕಿ ಜೊತೆ 45 ವರ್ಷದ ವ್ಯಕ್ತಿಯ ವಿವಾಹ-ಇದು ತಾಲಿಬಾನ್‌ ವಿಕೃತಿ!

ಬೀಬಿ ಅಥವಾ ಪ್ರಾಣಿಗಳ ಹೆಸರಿನಿಂದ ಕರೆಯಲು ಆದೇಶ

ಅಫ್ಘಾನ್‌ ಮಾಧ್ಯಮ ಸಂಸ್ಥೆ ಜಾನ್‌ ಟೈಮ್ಸ್‌, ದಿ ಗಾರ್ಡಿಯನ್‌ ಮತ್ತು ಸ್ಪ್ಯಾನಿಷ್‌ ಪತ್ರಿಕೆ ಎಲ್‌ ಪೈಸ್‌ ನಡೆಸಿದ ತನಿಖೆಯ ಪ್ರಕಾರ, ಮೇ ತಿಂಗಳಲ್ಲಿ ಈ ಆದೇಶ ನೀಡಲಾಗಿತ್ತು. ಅಧಿಕೃತ ದಾಖಲೆಗಳಲ್ಲಿ ಮಹಿಳೆಯರ ಹೆಸರನ್ನು ಬಳಸದಂತೆ ಸಾರ್ವಜನಿಕ ನೌಕರರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು. ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರನ್ನು ಗೌರವದಿಂದ ಸಂಬೋಧಿಸಲು ಅವರಿಗೆ ಬೀಬಿ ಎಂದು ಕರೆಯಲಾಗುತ್ತಿತ್ತು, ಆದರೆ ಇದೀಗ ಮಹಿಳೆಯರನ್ನು ಪ್ರಾಣಿಗಳಿಗೆ ಸಂಬಂಧಿಸಿದ ಪದಗಳನ್ನು ಬಳಸಿ ಕರೆಯಲು ಆದೇಶ ನೀಡಿರುವುದು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಅವರ ಗೌರವದ ಕುರಿತು ಆತಂಕ ಮೂಡಿಸಿದೆ.

ಅಫ್ಘನ್ ಮಹಿಳೆಯರ ಮೇಲಿನ ನಿರಂತರ ಒತ್ತಡ

ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ನಿರ್ಬಂಧದ ಜೊತೆಗೆ ಗುರುತಿನ ಮಟ್ಟದಲ್ಲೂ ಉಂಟಾಗುತ್ತಿರುವ ಬದಲಾವಣೆಗಳು ಆಫ್ಘನ್ ಮಹಿಳೆಯರ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿಸಿವೆ. ಸಮಾಜದ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಧ್ವನಿ ಮತ್ತು ಗುರುತನ್ನು ಮಸುಕಾಗಿಸುವ ಈ ನಡೆ ಜಾಗತಿಕ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಕೆಲವು ಆಫ್ಘನ್ ಪ್ರಾಂತ್ಯಗಳಲ್ಲಿ ಪುರುಷ ವೈದ್ಯರು ಮತ್ತು ದಂತವೈದ್ಯರಿಗೆ ಮಹಿಳಾ ರೋಗಿಗಳನ್ನು ತಪಾಸಣೆ ಮಾಡದಂತೆ ಅಥವಾ ಸಹಾಯ ಮಾಡದಂತೆ ಸೂಚಿಸಲಾಗಿದೆ ಎಂದು ದಿ ಗಾರ್ಡಿಯನ್‌ ಮತ್ತೊಂದು ವರದಿಯಲ್ಲಿ ತಿಳಿಸಿದೆ. ತಾಲಿಬಾನ್‌ ಭದ್ರತಾ ಪಡೆಗಳು ಆಸ್ಪತ್ರೆಗಳ ಮೇಲೆ ದಾಳಿ ಮಾಡಿ, ಮಹಿಳೆಯರಿಗೆ ಚಿಕಿತ್ಸೆ ನೀಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಪುರುಷ ವೈದ್ಯರಿಗೆ ಎಚ್ಚರಿಕೆ ನೀಡಿವೆ ಎಂದು ಪತ್ರಿಕೆ ವರದಿ ಮಾಡಿದೆ.