Child Marriage: 6 ವರ್ಷದ ಬಾಲಕಿ ಜೊತೆ 45 ವರ್ಷದ ವ್ಯಕ್ತಿಯ ವಿವಾಹ-ಇದು ತಾಲಿಬಾನ್ ವಿಕೃತಿ!
Child Marriage: ಆಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿಯನ್ನು ವಿವಾಹವಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ತಾಲಿಬಾನ್ ಬಾಲಕಿಯನ್ನು ಮನೆಗೆ ಕರೆದೊಯ್ಯದಂತೆ ಆ ವ್ಯಕ್ತಿಗೆ ಸೂಚನೆ ನಡೆದಿದ್ದು, ಆಕೆಗೆ ಒಂಬತ್ತು ವರ್ಷ ವಯಸ್ಸಾದ ನಂತರ ಗಂಡನ ಬಳಿಗೆ ಕಳುಹಿಸಬಹುದು ಎಂದಿದೆ.


ಕಾಬೂಲ್: ಆಫ್ಘಾನಿಸ್ತಾನದ (Afghanistan) ಹೆಲ್ಮಂಡ್ ಪ್ರಾಂತ್ಯದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿಯನ್ನು ವಿವಾಹವಾಗಿದ್ದು (Child Marriage) ಆಕ್ರೋಶಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ತಾಲಿಬಾನ್ (Taliban) ಬಾಲಕಿಯನ್ನು ಮನೆಗೆ ಕರೆದೊಯ್ಯದಂತೆ ಆ ವ್ಯಕ್ತಿಗೆ ಸೂಚನೆ ನಡೆದಿದ್ದು, ಆಕೆಗೆ ಒಂಬತ್ತು ವರ್ಷ ವಯಸ್ಸಾದ ನಂತರ ಗಂಡನ ಬಳಿಗೆ ಕಳುಹಿಸಬಹುದು ಎಂದಿದೆ.
ಮಾರ್ಜಾ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಬಾಲಕಿಯ ತಂದೆ ಮತ್ತು ವರನನ್ನು ಬಂಧಿಸಲಾಗಿದೆಯಾದರೂ ಯಾವುದೇ ಆರೋಪಗಳನ್ನು ದಾಖಲಿಸಲಾಗಿಲ್ಲ. ವರನಿಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದು, ಬಾಲಕಿಯ ಕುಟುಂಬಕ್ಕೆ ಹಣ ನೀಡಿ ಆಕೆಯನ್ನು ಪಡೆದಿದ್ದಾನೆ ಎಂದು ತಿಳಿದುಬಂದಿದೆ. ಪ್ರಸ್ತುತ ಬಾಲಕಿ ತನ್ನ ಪೋಷಕರೊಂದಿಗಿದ್ದಾಳೆ ಎಂದು ವರದಿಗಳು ತಿಳಿಸಿವೆ. ವರದಿ ಪ್ರಕಾರ, ಈ ವಹಿವಾಟು ‘ವಾಲ್ವಾರ್’ ಎಂಬ ಸಾಮಾನ್ಯ ಪದ್ಧತಿಯ ಮೂಲಕ ನಡೆದಿದ್ದು, ಬಾಲಕಿಯ ರೂಪ, ಶಿಕ್ಷಣ ಮತ್ತು ಮೌಲ್ಯದ ಆಧಾರದ ಮೇಲೆ ವಧುವಿನ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.
ಆಫ್ಘಾನಿಸ್ತಾನದಲ್ಲಿ ಬಾಲ್ಯವಿವಾಹ
2021ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ, ಆಫ್ಘಾನಿಸ್ತಾನದಲ್ಲಿ ಈಗಾಗಲೇ ವ್ಯಾಪಕವಾಗಿದ್ದ ಬಾಲ್ಯವಿವಾಹ 25% ಹೆಚ್ಚಳವಾಗಿದೆ ಎಂದು ಯುಎನ್ ವಿಮೆನ್ ವರದಿಮಾಡಿದೆ. ತಾಲಿಬಾನ್‌ನಿಂದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಮೇಲಿನ ನಿಷೇಧದಿಂದ ಬಾಲಕಿಯರಲ್ಲಿ ಗರ್ಭಧಾರಣೆ 45% ಏರಿಕೆಯಾಗಿದೆ. ಯುನಿಸೆಫ್ ಪ್ರಕಾರ, ಆಫ್ಘಾನಿಸ್ತಾನವು ಬಾಲವಧುಗಳ ಸಂಖ್ಯೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.
ಈ ಸುದ್ದಿಯನ್ನು ಓದಿ: Viral news: ಬೆಂಗಳೂರಿನ ಬೀದಿಯಲ್ಲಿ ಮಹಿಳೆಯರ ಒಪ್ಪಿಗೆಯಿಲ್ಲದೆ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್: ಯುವತಿಯ ದೂರು
ತಾಲಿಬಾನ್ ಆಡಳಿತದಲ್ಲಿ ವಿವಾಹಕ್ಕೆ ಕನಿಷ್ಠ ವಯಸ್ಸಿನ ಕಾನೂನು ಇಲ್ಲ. ಹಿಂದಿನ ನಾಗರಿಕ ಕಾನೂನು 16 ವರ್ಷವನ್ನು ಕನಿಷ್ಠ ವಯಸ್ಸಾಗಿ ನಿಗದಿಪಡಿಸಿತ್ತು, ಆದರೆ ಇದನ್ನು ಪುನಃಸ್ಥಾಪಿಸಲಾಗಿಲ್ಲ. ಬದಲಿಗೆ, ಇಸ್ಲಾಮಿಕ್ ಕಾನೂನಿನ ವ್ಯಾಖ್ಯಾನದ ಆಧಾರದಲ್ಲಿ ವಿವಾಹಗಳು ನಡೆಯುತ್ತವೆ.
ಆಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಕ್ರಮಗಳು ಮುಂದುವರಿದಿದ್ದು, ಬಾಲಕಿಯರಿಗೆ ಮಾಧ್ಯಮಿಕ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಮಹಿಳೆಯರಿಗೆ ಹೆಚ್ಚಿನ ಉದ್ಯೋಗಗಳು, ಸಾರ್ವಜನಿಕ ಉದ್ಯಾನವನಗಳು, ಜಿಮ್‌ಗಳಿಗೆ ನಿಷೇಧವಿದೆ. ಪ್ರಯಾಣಕ್ಕೆ ಪುರುಷ ರಕ್ಷಕನ ಅಗತ್ಯವಿದ್ದು, ಎಲ್ಲ ಮಹಿಳೆಯರು ಸಾರ್ವಜನಿಕವಾಗಿ ಮುಖವನ್ನು ಮುಚ್ಚಿಕೊಳ್ಳಬೇಕು.