ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾಲದಲ್ಲೂ ಅಮರಿಕ ದೊಡ್ಡಣ್ಣ

ಅಮೆರಿಕ ಅಂದರೆ ದೊಡ್ಡಣ್ಣ, ಇಡೀ ವಿಶ್ವಕ್ಕೇ ಸಾಲ ಕೊಡುವ ದೇಶ ಅನ್ಕೊಂಡಿರುವ ನಮಗೆಲ್ಲ ಅಮೆರಿಕದ ಖಜಾನೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಅಚ್ಚರಿ ಮೂಡಿಸಿವೆ. ಹೌದು, ಇಡೀ ವಿಶ್ವದ ಅತಿ ಹೆಚ್ಚು ಸಾಲ ಮಾಡಿರುವ ದೇಶ ಅಂದರೆ ಅದು ಅಮೆರಿಕ. ಅಮೆರಿಕದ ಒಟ್ಟು ರಾಷ್ಟ್ರೀಯ ಸಾಲವು ಪ್ರಸ್ತುತ 40,000,000,000,000 (40) ಟ್ರಿಲಿಯನ್ ಡಾಲರ್) ಅಂದರೆ ಭಾರತೀಯ ರುಪಾಯಿಯಲ್ಲಿ 3,828.71 ಲಕ್ಷ ಕೋಟಿ.

ಅಮೆರಿಕದ ಒಟ್ಟು ಸಾಲ 40 ಟ್ರಿಲಿಯನ್ ಡಾಲರ್ 10 ವರ್ಷಗಳಲ್ಲಿ ಬರೋಬ್ಬರಿ 2 ಪಟ್ಟು ಸಾಲ ಹೆಚ್ಚು

ವಾಷಿಂಗ್ಟನ್ ಡಿ.ಸಿ: ಅಮೆರಿಕ ಅಂದರೆ ದೊಡ್ಡಣ್ಣ, ಇಡೀ ವಿಶ್ವಕ್ಕೇ ಸಾಲ ಕೊಡುವ ದೇಶ ಅನ್ಕೊಂಡಿರುವ ನಮಗೆಲ್ಲ ಅಮೆರಿಕದ ಖಜಾನೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಅಚ್ಚರಿ ಮೂಡಿಸಿವೆ. ಹೌದು, ಇಡೀ ವಿಶ್ವದ ಅತಿ ಹೆಚ್ಚು ಸಾಲ ಮಾಡಿರುವ ದೇಶ ಅಂದರೆ ಅದು ಅಮೆರಿಕ. ಅಮೆರಿಕದ ಒಟ್ಟು ರಾಷ್ಟ್ರೀಯ ಸಾಲವು ಪ್ರಸ್ತುತ 40,000,000,000,000 (40) ಟ್ರಿಲಿಯನ್ ಡಾಲರ್) ಅಂದರೆ ಭಾರತೀಯ ರುಪಾಯಿಯಲ್ಲಿ 3,828.71 ಲಕ್ಷ ಕೋಟಿ. ಈ ಮೂಲಕ ಹೊಸದೊಂದು ಆತಂಕಕಾರಿ ಮೈಲಿಗಲ್ಲನ್ನು ಅಮೆರಿಕ ಮುಟ್ಟಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ಅದರಲ್ಲೂ, ಕಳೆದ ಕೇವಲ 10 ವರ್ಷಗಳಲ್ಲಿ (2016 ರಿಂದ 2026) ಸಾಲದ ಹೊರೆ ಬರೋಬ್ಬರಿ ಎರಡು ಪಟ್ಟು ಹೆಚ್ಚಾಗಿದೆ. ಅಂದರೆ, 2017ರ ಆರಂಭದಲ್ಲಿ ಅಮೆರಿಕದ ಒಟ್ಟು ಸಾಲ ಕೇವಲ 19.9 ಟ್ರಿಲಿಯನ್ ಡಾಲರ್ ಇತ್ತು ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಳೆದ ಹತ್ತು ವರ್ಷ ಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಇಬ್ಬರ ಆಡಳಿತಾವಧಿಯಲ್ಲೂ ಸಾಲ ನಿರಂತರ‌ ವಾಗಿ ಏರುತ್ತಲೇ ಸಾಗಿದೆ.

ಕೇವಲ 5 ತಿಂಗಳ ಮತ್ತೊಂದು ಟ್ರಿಲಿಯನ್ ಹೆಚ್ಚಳ: ಅಮೆರಿಕವು ಸಾಲ ಮಾಡುವ ವೇಗವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಭಯಾನಕ ಮಟ್ಟಕ್ಕೆ ತಲುಪಿದೆ. ಅದರಂತೆ, ಕಳೆದ ಮಾರ್ಚ್‌ನಲ್ಲಿ 39 ಟ್ರಿಲಿಯನ್ ಡಾಲರ್ ಇದ್ದ ಅಮೆರಿಕದ ಸಾಲದ ಪ್ರಮಾಣ ಆಗನಲ್ಲಿ ಅಂದರೆ ಕೇವಲ 5 ತಿಂಗಳ ಅವಧಿಯಲ್ಲಿ 1 ಟ್ರಿಲಿಯನ್ ಡಾಲರ್ (ಅಂದರೆ ಸುಮಾರು 84 ಲಕ್ಷ ಕೋಟಿ ರು.) ಹೆಚ್ಚಳವಾಗಿ 40 ಟ್ರಿಲಿಯನ್ ದಾಟಿದೆ. ಅದರಂತೆ, ಪ್ರಸ್ತುತ ಅಮೆರಿಕ ಸರಕಾರವು ಪ್ರತಿ 5 ತಿಂಗಳಿಗೊಮ್ಮೆ 1 ಟ್ರಿಲಿಯನ್ ಡಾಲರ್ ಸಾಲವನ್ನು ತನ್ನ ಖಾತೆಗೆ ಸೇರಿಸಿಕೊಳ್ಳುತ್ತಿದೆ.

ಇದನ್ನೂ ಓದಿ: 250th Independence of USA: ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ

ಕಾದಿದೆ ಗಂಡಾಂತರ?

ಅಮೆರಿಕದ ಕಾಂಗ್ರೆಸ್ ನಿಗದಿಪಡಿಸಿರುವ ಗರಿಷ್ಠ ಸಾಲದ ಮಿತಿ 41.1 ಟ್ರಿಲಿಯನ್ ಡಾಲರ್ ಆಗಿದೆ. ಪ್ರಸ್ತುತ ವೇಗವನ್ನು ನೋಡಿದರೆ 2027ರ ಮಧ್ಯಭಾಗದ ವೇಳೆಗೆ ಅಮೆರಿಕವು ಈ ಸಾಲದ ಗಡಿಯನ್ನು ಮುಟ್ಟಲಿದ್ದು, ಸಂಸತ್ತು ಮತ್ತೆ ಸಾಲದ ಮಿತಿಯನ್ನು ಹೆಚ್ಚಿಸದಿದ್ದರೆ ಅಮೆರಿಕ ಸರಕಾರಿ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಲಿದೆ.

ಅಮೆರಿಕ ಸಾಲದ ಹೊರೆ ದುಪ್ಪಟ್ಟಾಗಲು ಪ್ರಮುಖ ಕಾರಣಗಳೇನು?

ಕೋವಿಡ್-19 ಸಾಂಕ್ರಾಮಿಕ: ಕರೊನಾ ಸಮಯದಲ್ಲಿ ಜಾರಿಗೆ ತಂದ ಭಾರಿ ಆರ್ಥಿಕ ಪ್ಯಾಕೇಜ್‌ ಗಳು ಮತ್ತು ಉಚಿತ ಸೌಲಭ್ಯಗಳಿಂದಾಗಿ ಸಾಲದ ಪ್ರಮಾಣ ದಿಢೀರ್ ಏರಿಕೆ ಕಂಡಿತು.

ತೆರಿಗೆ ಕಡಿತಗಳು: ಸರಕಾರಗಳು ಜಾರಿಗೆ ತಂದ ಭಾರಿ ಪ್ರಮಾಣದ ಕಾರ್ಪೊರೇಟ್ ಮತ್ತು ವೈಯಕ್ತಿಕ ತೆರಿಗೆ ಕಡಿತಗಳಿಂದಾಗಿ ಸರಕಾರದ ಆದಾಯ ಭಾರಿ ಪ್ರಮಾಣದಲ್ಲಿ ಕುಸಿಯಿತು ಯುದ್ಧ ಮತ್ತು ಮಿಲಿಟರಿ ವೆಚ್ಚಗಳು: ಇತ್ತೀಚಿನ ಇರಾನ್ ಸಂಘರ್ಷ ಸೇರಿದಂತೆ ರಕ್ಷಣಾ ವಲಯಕ್ಕೆ ಅಮೆರಿಕ ನಿರಂತರವಾಗಿ ಮಾಡುತ್ತಿರುವ ಭಾರಿ ವೆಚ್ಚಗಳು.

ಸುಪ್ರೀಂಕೋರ್ಟ್ ತೀರ್ಪು ಮತ್ತು ಮರುಪಾವತಿ: ಸುಪ್ರೀಂಕೋರ್ಟ್ ಇತ್ತೀಚೆಗೆ ಅಧ್ಯಕ್ಷ ಟ್ರಂಪ್ ಅವರ ಕೆಲವು ಸುಂಕಗಳನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಿದ್ದರಿಂದ, ಸರಕಾರವು ಅನಿವಾರ್ಯವಾಗಿ ಸುಮಾರು 100 ಬಿಲಿಯನ್ ಡಾಲರ್ ಆಮದು ತೆರಿಗೆಯನ್ನು ಮರುಪಾವತಿ ಮಾಡಬೇಕಾಗಿ ಬಂದಿತು.

ಟಾಪ್ ಐದು ದೇಶಗಳು

ಅಮೆರಿಕ: ಬರೋಬ್ಬರಿ 40 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ಮೊದಲ ಸ್ಥಾನದಲ್ಲಿದೆ. ಇದರ ಸಾಲವು ದೇಶದ ಒಟ್ಟು ಜಿಡಿಪಿಯ ಶೇ.120ಕ್ಕಿಂತ ಹೆಚ್ಚಾಗಿದೆ.

ಚೀನಾ: ಸುಮಾರು 15 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ೨ನೇ ಸ್ಥಾನದಲ್ಲಿದೆ.

ಜಪಾನ್: ಸುಮಾರು 13 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ೩ನೇ ಸ್ಥಾನದಲ್ಲಿದೆ.

ಯುನೈಟೆಡ್ ಕಿಂಗ್ಡಮ್: ಸುಮಾರು 3.4 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ‌

ಫ್ರಾನ್ಸ್: ಸುಮಾರು 3.3 ಟ್ರಿಲಿಯನ್ ಡಾಲರ್ ಸಾಲದೊಂದಿಗೆ ೫ನೇ ಸ್ಥಾನದಲ್ಲಿದೆ

ಭಾರತದ ಪರಿಸ್ಥಿತಿ ಹೇಗಿದೆ?

ಭಾರತದ ಒಟ್ಟು ರಾಷ್ಟ್ರೀಯ ಸಾಲವು ಸುಮಾರು 3 ಟ್ರಿಲಿಯನ್ ಡಾಲರ್ (ಅಂದಾಜು 250 ಲಕ್ಷ ಕೋಟಿ ರು.) ಹತ್ತಿರ ಇದೆ. ಭಾರತದ ಸಾಲ ಮತ್ತು ಜಿಡಿಪಿ ಅನುಪಾತವು ಪ್ರಸ್ತುತ ಶೇ.81ರಿಂದ 83ರ ಆಸುಪಾಸಿನಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಭಾರತದ ಸಾಲದ ಪರಿಸ್ಥಿತಿಯು ಸಾಕಷ್ಟು ಸುರಕ್ಷಿತ ಮತ್ತು ನಿಯಂತ್ರಣದಲ್ಲಿದೆ.