ದೋಹಾ: ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ, ಇರಾನ್ ಗಲ್ಫ್ ರಾಷ್ಟ್ರಗಳಿಗೆ ದ್ರೋಹ ಬಗೆದಿದೆ (Iran Israel War) ಎಂದು ಆರೋಪಿಸಿದ್ದಾರೆ. ಈ ದಾಳಿಯು ಮಧ್ಯಪ್ರಾಚ್ಯವನ್ನು ಅಸ್ಥಿರಗೊಳಿಸುವ ಮತ್ತು ಜಾಗತಿಕ ಆರ್ಥಿಕ ಆಘಾತಗಳಿಗೆ ಕಾರಣವಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಕತಾರ್ ಮೇಲೆ ಪದೇ ಪದೇ ದಾಳಿ ನಡೆದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಲ್ ಥಾನಿ, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ಅಪಾಯಕಾರಿ ತಪ್ಪು ಲೆಕ್ಕಾಚಾರ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಯುದ್ಧ ಆರಂಭವಾದ ಒಂದು ಗಂಟೆಯೊಳಗೆ ಕತಾರ್ ಸೇರಿ ಹಲವು ಗಲ್ಫ್ ರಾಷ್ಟ್ರಗಳು ದಾಳಿಗೆ ಗುರಿಯಾಗಿವೆ ಎಂದು ಅವರು ತಿಳಿಸಿದ್ದಾರೆ. ಇದು ನಮಗೆ ದೊಡ್ಡ ದ್ರೋಹದ ಭಾವನೆ. ನಾವು ಯಾವ ಯುದ್ಧದಲ್ಲೂ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಆದರೂ ನಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ ಥಾನಿ, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು "ಅಪಾಯಕಾರಿ ತಪ್ಪು ಲೆಕ್ಕಾಚಾರ" ಎಂದು ಬಣ್ಣಿಸಿದರು ಮತ್ತು ಎಲ್ಲಾ ಕಡೆಯವರು ಮತ್ತಷ್ಟು ಮಿಲಿಟರಿ ಏರಿಕೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದರು.
ದೇಶದ ವಾಯು ರಕ್ಷಣಾ ಪಡೆಗಳು ಒಂದು ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ತಡೆದಿವೆ. ಈ ನಡುವೆ ಗಲ್ಫ್ ಪ್ರದೇಶದ ಇತರೆ ದೇಶಗಳೂ ಇರಾನ್‌ನ ದಾಳಿಗಳಿಗೆ ಗುರಿಯಾಗಿವೆ. ಸೌದಿ ಅರೇಬಿಯಾದ ಶೈಬಾ ತೈಲ ಕ್ಷೇತ್ರದತ್ತ ಬರುತ್ತಿದ್ದ ಎರಡು ಡ್ರೋನ್‌ಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ತನ್ನ ದಾಳಿಗಳು ಕೇವಲ ಮಿಲಿಟರಿ ಗುರಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂದು ಹೇಳುತ್ತಿರುವುದು ಸರಿಯಲ್ಲ. ವಾಸ್ತವದಲ್ಲಿ ಸುಮಾರು 25 ಶೇಕಡಾ ದಾಳಿಗಳು ನಾಗರಿಕ ಸೌಲಭ್ಯಗಳನ್ನೂ ಗುರಿಯಾಗಿಸಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೂ ಯುದ್ಧಕ್ಕೂ ಏನು ಸಂಬಂಧ? ಅವರು ಏನು ಸಾಧಿಸಲು ಬಯಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಇದರ ನಡುವೆಯೇ ಕತಾರ್ ದೇಶವು “ಬಹಳ ಕಠಿಣ ಅವಧಿಯನ್ನು ಎದುರಿಸುತ್ತಿದೆ” ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ದೇಶದ ರಕ್ಷಣಾ ಪಡೆಗಳು ಮತ್ತು ಭದ್ರತಾ ವ್ಯವಸ್ಥೆಗಳು ಅತ್ಯಂತ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ.
ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ, ದೋಹಾದಲ್ಲಿ ಸ್ಫೋಟ
ಏತನ್ಮಧ್ಯೆ, ಇರಾನ್ ಗಲ್ಫ್ ಪ್ರದೇಶದಾದ್ಯಂತ ಪ್ರತೀಕಾರದ ದಾಳಿಗಳನ್ನು ವಿಸ್ತರಿಸುತ್ತಿದ್ದಂತೆ ಸೋಮವಾರ ಕತಾರ್ ರಾಜಧಾನಿ ದೋಹಾದಲ್ಲಿ ಹಲವಾರು ಸ್ಫೋಟಗಳ ಶಬ್ದಗಳು ಕೇಳಿಬಂದವು. ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ ಮತ್ತು ಇಸ್ರೇಲ್ ವಾಯುದಾಳಿಗಳ ನಂತರ ಟೆಹ್ರಾನ್ ವ್ಯಾಪಕ ಪ್ರತೀಕಾರದ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಕತಾರ್ ಇರಾನಿನ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಅಲೆಗಳಿಗೆ ಗುರಿಯಾಗುತ್ತಿದೆ.