ವಾಷಿಂಗ್ಟನ್: ಖ್ಯಾತ ಗಾಯಕಿ ಬಿಲ್ಲಿ ಎಲಿಷ್ (Billie Eilish) ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಉಂಟಾದ ಘಟನೆ ನಡೆದಿದೆ. ಅಕ್ಟೋಬರ್ 9ರಂದು ಅಮೆರಿಕದ ಮಿಯಾಮಿ (Miami) ನಗರದ ಕಸೆಯಾ ಸೆಂಟರ್ (Kaseya Centre)ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಗಾಯಕಿಯನ್ನು ಎಳೆದಿದ್ದು, ಅದರ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಬಿಲ್ಲಿ ಎಲಿಷ್ ವೇದಿಕೆಯಿಂದ ಕೆಳಕ್ಕೆ ಇಳಿದು ಅಭಿಮಾನಿಗಳಿಗೆ ಹೈ-ಫೈ ನೀಡುತ್ತಿದ್ದ ವೇಳೆ ನೆರೆದಿದ್ದ ಅಭಿಮಾನಿಯೊಬ್ಬ ಆಕೆಯ ಕೈ ಹಿಡಿದು ಜೋರಾಗಿ ತನ್ನೆಡೆಗೆ ಎಳೆದ್ದಾನೆ. ಎಳೆತದ ರಭಸಕ್ಕೆ ಬ್ಯಾಲೆನ್ಸ್ ಕಳೆದುಕೊಂಡ ಗಾಯಕಿ, ಕಬ್ಬಿಣದ ಗ್ರಿಲ್ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಧಾವಿಸಿ ಆ ವ್ಯಕ್ತಿಯನ್ನು ತಳ್ಳಿ ಎಲಿಷ್ ಅವರನ್ನು ರಕ್ಷಿಸಿದ್ದಾರೆ. ನಂತರ ಗಾಯಕಿ ಅಭಿಮಾನಿಗಳ ಜತೆ ಯಾವುದೇ ಸಂವಹನ ನಡೆಸದೇ ಮುಂದಕ್ಕೆ ಸಾಗಿರುವುದು ವೈರಲ್ ಆದ ವಿಡಿಯೊ(viral video)ದಲ್ಲಿ ಕಂಡುಬಂದಿದೆ.
ಈ ಸುದ್ದಿಯನ್ನು ಓದಿ: Kichcha Sudeepa: 'ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ ಏನಾದ್ರೂ ಇದ್ಯಾ? ಸೈಮಾ ವಿರುದ್ಧ ಕಿಚ್ಚ ಗರಂ ಆಗಿದ್ದೇಕೆ?
ವೈರಲ್ ವಿಡಿಯೊ ಇಲ್ಲಿದೆ:
ಇನ್ನೂ ಎಲಿಷ್ ಅವರನ್ನು ಎಳೆದಿದ್ದ ಆ ವ್ಯಕ್ತಿಯನ್ನು ಕೂಡಲೇ ಕಸೆಯಾ ಸೆಂಟರ್‌ನಿಂದ ಹೊರಹಾಕಲಾಗಿದೆ ಮತ್ತು ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಮಿಯಾಮಿ ಪೊಲೀಸರು (Miami Police) ತಿಳಿಸಿದ್ದಾರೆ. ಆದರೆ ಈ ಘಟನೆಯ ಕುರಿತು ಬಿಲ್ಲಿ ಎಲಿಷ್ ಅವರ ಪ್ರತಿನಿಧಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಬಿಲ್ಲಿ ಎಲಿಷ್ ಈ ಹಿಂದೆಯೂ ಕಾರ್ಯಕ್ರಮಗಳಲ್ಲಿ ಈ ತರಹದ ವರ್ತನೆಗಳನ್ನು ಎದುರಿಸಿದ್ದಾರೆ. 2023ರಲ್ಲಿ The Hollywood Reporterಗೆ ನೀಡಿದ ಸಂದರ್ಶನದಲ್ಲಿ, ಅಭಿಮಾನಿಗಳ ಅನುಚಿತ ವರ್ತನೆಯ ಬಗ್ಗೆ ಹೇಳಿಕೊಂಡಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ಕಂಡಾಗ ಉತ್ಸುಕರಾಗುತ್ತಾರೆ. ಅದು ಕೆಲವೊಮ್ಮೆ ಅಪಾಯಕಾರಿಯೂ ಆಗಿರುತ್ತದೆ. ಏಕೆಂದರೆ, ನೆಚ್ಚಿನ ವ್ಯಕ್ತಿ ಕಂಡಾಗ ಅವರಲ್ಲಿನ ಅಭಿಮಾನ ಸ್ಫೋಟಗೊಳ್ಳುತ್ತದೆ. ನಾನು ವೇದಿಕೆಯಲ್ಲಿದ್ದಾಗ ಅಭಿಮಾನಿಗಳು ಎಸೆದ ವಸ್ತುಗಳಿಂದ ಗಾಯಗೊಂಡಿದ್ದೆ ಎಂದು ಅತಿರೇಕದ ಅಭಿಮಾನದ ಬಗ್ಗೆ ಅವರು ಹೇಳಿಕೊಂಡಿದ್ದರು.
2024ರ ಡಿಸೆಂಬರ್‌ನಲ್ಲಿ ಅರಿಜೋನಾ (Arizona)ದ ಒಂದು ಕನ್ಸರ್ಟ್‌ನಲ್ಲಿ, ಬಿಲ್ಲಿ ಅವರ ಮೇಲೆ ನೀಲಿ ಬಣ್ಣದ ಬ್ರೇಸ್‌ಲೆಟ್ ಎಸೆಯಲಾಗಿತ್ತು. ಇನ್ನು ಮಿಯಾಮಿ ಕನ್ಸರ್ಟ್ ಬಿಲ್ಲಿ ಐಲಿಷ್ ಅವರ "Hit Me Hard and Soft"ನ ಉತ್ತರ ಅಮೆರಿಕ (North American) ಪ್ರವಾಸದ ಪ್ರಾರಂಭದ ದಿನವಾಗಿತ್ತು. ಇದೇ ದಿನ ಈ ಘಟನೆ ಸಂಭವಿಸಿದ್ದು, ಭದ್ರತಾ ಕ್ರಮಗಳ ಕುರಿತು ಕಳವಳ ಹುಟ್ಟಿಸಿದೆ.