Britain Billava Group: ಬ್ರಿಟನ್ ಕೊವೆಂಟ್ರಿಯಲ್ಲಿ ಬಿಲ್ಲವ ಬಳಗದ ಐತಿಹಾಸಿಕ ಸಮಾವೇಶ
ಯುನೈಟೆಡ್ ಕಿಂಗ್ಡಮ್ ನಲ್ಲಿ ಇದೇ ಮೊದಲ ಬಾರಿಗೆ ದೇಶಾದ್ಯಂತ ಇರುವ 150ಕ್ಕೂ ಹೆಚ್ಚು ಬಿಲ್ಲವ ಕುಟುಂಬಗಳು ಒಗ್ಗೂಡಿ ಬ್ರಿಟನ್ ಬಿಲ್ಲವ ಬಳಗದ ವಾರ್ಷಿಕ ಸಭೆಯನ್ನು ಕೊವೆಂಟ್ರಿಯಲ್ಲಿ ನಡೆಸಿದ್ದು, ಈ ಮೂಲಕ ಬಿಲ್ಲವ ಕುಟುಂಬಗಳು ಸಂಸ್ಕೃತಿ, ಏಕತೆ ಮತ್ತು ಸಮುದಾಯದ ಶಕ್ತಿಯನ್ನು ಪ್ರದರ್ಶಿಸಿತ್ತು.

-

ವರದಿ: ವಿನೋದ್ ಪಾದೆಮಾರ್, ಕೇಂಬ್ರಿಡ್ಜ್
ಕೊವೆಂಟ್ರಿ: ಇದೇ ಮೊದಲ ಬಾರಿಗೆ ಯುನೈಟೆಡ್ ಕಿಂಗ್ಡಮ್ (United Kingdom) ನಾದ್ಯಂತ ಇರುವ ಸುಮಾರು 150ಕ್ಕೂ ಹೆಚ್ಚು ಬಿಲ್ಲವ ಕುಟುಂಬಗಳು ಒಗ್ಗೂಡಿ ಮೊದಲ ಬ್ರಿಟನ್ ಬಿಲ್ಲವ ಬಳಗ (Britain Billawa Balaga) ವಾರ್ಷಿಕ ಸಭೆಯನ್ನು ಕೊವೆಂಟ್ರಿಯ ಹೊಟೇಲ್‌ನಲ್ಲಿ ಆಯೋಜಿಸಿತ್ತು. ಇದೊಂದು ಮೈಲಿಗಲ್ಲು. ಯಾಕೆಂದರೆ ಇದರಲ್ಲಿ ಭಾಗವಹಿಸಿದ್ದ ಬಿಲ್ಲವ ಕುಟುಂಬಗಳು ಸಂಸ್ಕೃತಿ, ಏಕತೆ ಮತ್ತು ಸಮುದಾಯದ ಶಕ್ತಿಯನ್ನು ಹಬ್ಬದಂತೆ ಆಚರಿಸಿಕೊಂಡಿತು. 2016ರಲ್ಲಿ ಕೆಲವೊಂದು ಬಿಲ್ಲವ ಕುಟುಂಬಗಳನ್ನು ಸಂಪರ್ಕಿಸಲು ರಚಿಸಿದ ಸರಳ ವಾಟ್ಸಾಪ್ ಗುಂಪಿನಿಂದಾಗಿ ಇಂದು ಇದು ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದುಬಂದಿದೆ.
2019ರಲ್ಲಿ ಸ್ಕಿಪ್ಟನ್‌ನಲ್ಲಿ ಸಂಘಟನೆಯ ಮೊತ್ತ ಮೊದಲ ಅನೌಪಚಾರಿಕ ಸಂಗಮ ನಡೆಸಲಾಗಿದ್ದು, ಇದು ಬಳಗ ಅಧಿಕೃತವಾಗಿ ರೂಪುಗೊಳ್ಳಲು ದಾರಿ ಮಾಡಿ ಕೊಟ್ಟಿತು. ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನಾಯಕತ್ವದಲ್ಲಿ ರಚಿಸಿರುವ ಸಮಿತಿ ಒಂದು ಬಳಗದ ಸಂವಿಧಾನವನ್ನು ಅಂಗೀಕರಿಸಿದ್ದು, ಇದರ ಪ್ರಕಾರ ಡಾ. ಮನೋಜ್ ಅವರನ್ನು ಬಳಗದ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಮನೋಜ್, ನಾವು ಕೇವಲ ಸಂಪರ್ಕಕ್ಕಾಗಿ ವೇದಿಕೆಯನ್ನು ಕಟ್ಟಬೇಕೆಂದಿಲ್ಲ. ನಮ್ಮ ಮಕ್ಕಳು ತಮ್ಮ ಮೂಲಗಳನ್ನು ಮರೆಯಬಾರದು. ಅವರು ನಮ್ಮ ಸಂಸ್ಕೃತಿಯ ಅರಿವು ಹೊಂದಿ, ಅದರೊಂದಿಗೆ ಬೆಳೆಯಬೇಕು. ಇವತ್ತು ನಾವು ಕೇವಲ ಬಳಗದ ವಾರ್ಷಿಕೋತ್ಸವನ್ನಷ್ಟೇ ಆಚರಿಸುತ್ತಿಲ್ಲ. ನಾವು ಒಂದು ಪರಂಪರೆಯನ್ನು ಇಲ್ಲಿ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು. ಶ್ರೀ ಗುರು ಚಾರಿಟಿ ಟ್ರಸ್ಟ್ ಮತ್ತು ಮಂಗಳೂರು ಮಾಲಾವಿ ಅಸೋಸಿಯೇಷನ್ ನ ಸಂದೇಶ್ ವಿವೇಕಾನಂದ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಬಿಲ್ಲವರ ಸ್ಪಂದನದ “ಕೆಮ್ಮಲೇತ ಬ್ರಹ್ಮ” ಭಕ್ತಿ ಗೀತೆ ಗಾಯನದೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸ್ಸನ್ನು ಸೆಳೆದವು. ಇದರಲ್ಲಿ ಭಕ್ತಿಪೂರ್ಣ ತುಳುನಾಡಿನ ವರಾಹರೂಪ ನೃತ್ಯ, ತಂದೆ- ಮಕ್ಕಳ ಸಂಗೀತ ವಾದ್ಯವೃಂದ, ತಾಯಿ– ಮಕ್ಕಳ ಮೂಲಕ ಕೋಟಿ ಚೆನ್ನಯ್ಯ ಚಲನಚಿತ್ರದ ಜನಪ್ರಿಯ ಎಕ್ಕ–ಸಕ್ಕ ಹಾಡಿನ ನೃತ್ಯ, ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠತೆ, ವೈಭವವನ್ನೂ ಪ್ರತಿಬಿಂಬಿಸುವ ಸಂಭ್ರಮದ ತುಳು ನೃತ್ಯ ಡೆನ್ನ ಡೆನ್ನ ನಾ.. ಮಗಳು, ತಂದೆಯಿಂದ ಯಕ್ಷಗಾನ ವೈಭವ, ತುಳು ಸಂಸ್ಕೃತಿ ಯ ಕುರಿತು ಕ್ವಿಜ್ ಸೇರಿದಂತೆ ಮಕ್ಕಳಿಗೆ ಮತ್ತು ದೊಡ್ಡವರಿಗೂ ಮನರಂಜನೆಯನ್ನು ನೀಡಿತು.
ಸಂಜೆ ತುಳು, ಕನ್ನಡ ಮತ್ತು ಹಿಂದಿ ಹಾಡುಗಳ ಚುಟುಕು ಮಿಶ್ರಣದ ಲೈವ್ ಮ್ಯೂಸಿಕ್, ಕೊನೆಯಲ್ಲಿ ಸಮುದಾಯದ ಜನರು ತುಳುನಾಡಿನ ಪ್ರಸಿದ್ಧ ಪಿಲಿ ನೃತ್ಯಕ್ಕೆ ಕುಣಿದು ಕುಪ್ಪಳಿಸಿದರು.

ಬಳಗದ ಕಾರ್ಯದರ್ಶಿ ಲೀನಾ ಕೋಟ್ಯಾನ್ ಅವರು ಯುವ ಶಕ್ತಿ ಮತ್ತು ಸಾಂಸ್ಕೃತಿಕ ತಲೆಮಾರಿಗೆ ಸಂಬಂಧಿಸಿದ ಮುಂದಿನ ಯೋಜನೆಗಳನ್ನು ಹಂಚಿಕೊಂಡರು. ಖಜಾಂಚಿ ಧೀರಜ್ ಅಂಚನ್ ದಾನಧರ್ಮ ಮತ್ತು ಸಾಮಾಜಿಕ ಕಾರ್ಯಗಳ ಬಗ್ಗೆ ಮಾತನಾಡಿದರು. ಮಂಜುನಾಥ್ ಪೂಜಾರಿ ಅವರ ಐಟಿ ಬೆಂಬಲಕ್ಕೆ ಮತ್ತು ಬಳಗದ ರಚನೆಯ ನೈತಿಕ ಬೆಂಬಲಕ್ಕೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ: Hayavadana: ಅಮೆರಿಕೆಯಲ್ಲೊಂದು ಅದ್ಭುತ ನಾಟಕ ‘ಹಯವದನ’
ವಿನೋದ್ ಪಾದೆಮಾರ್ ಅವರು ಸಂಪೂರ್ಣ ಬಳಗದ ಕಾರ್ಯಕ್ರಮವನ್ನು ಸಂಯೋಜಿಸಿ, ನಿರ್ವಹಿಸಿದರು. ಪ್ರಸನ್ನ ಸುವರ್ಣ ಅವರು ಧನ್ಯವಾದ ಸಮರ್ಪಿಸಿ ಮುಂದಿನ ವಾರ್ಷಿಕ ಸಭೆಯನ್ನು ಸೆ. 12ರಂದು ನಡೆಸುವುದಾಗಿ ಘೋಷಿಸಿದರು.