ಬೀಜಿಂಗ್: ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದ ಚಾಂಗ್ಜಿ (China coal mine blast) ನಗರದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 90 ಜನರು ಸಾವನ್ನಪ್ಪಿದ್ದು, ಹಲವರು ಇನ್ನೂ ಒಳಗೆ ಸಿಲುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಸ್ಫೋಟ ಸಂಭವಿಸಿದಾಗ 247 ಕಾರ್ಮಿಕರು ನೆಲದಡಿಯಿದ್ದರು. ಶನಿವಾರ ಮುಂಜಾನೆಯ ಹೊತ್ತಿಗೆ, 201 ಜನರನ್ನು ರಕ್ಷಿಸಿ ಮೇಲ್ಮೈಗೆ ತರಲಾಗಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ.
ಶಾಂಕ್ಸಿ ಪ್ರಾಂತ್ಯವು ಚೀನಾದ ಪ್ರಮುಖ ಕಲ್ಲಿದ್ದಲು ಗಣಿಗಾರಿಕೆ ಪ್ರಾಂತ್ಯ ಎಂದು ಕರೆಯಲ್ಪಡುತ್ತದೆ. ಗ್ರೀಸ್‌ಗಿಂತ ದೊಡ್ಡ ಗಾತ್ರ ಮತ್ತು ಸುಮಾರು 34 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಈ ಪ್ರಾಂತ್ಯದ ಲಕ್ಷಾಂತರ ಗಣಿಗಾರರು ಕಳೆದ ವರ್ಷ 1.3 ಬಿಲಿಯನ್ ಟನ್ (1.17 ಬಿಲಿಯನ್ ಮೆಟ್ರಿಕ್ ಟನ್) ಕಲ್ಲಿದ್ದಲನ್ನು ಅಗೆದರು, ಇದು ಚೀನಾದ ಒಟ್ಟು ಕಲ್ಲಿದ್ದಲಿನ ಮೂರನೇ ಒಂದು ಭಾಗದಷ್ಟಿದೆ.
ಘಟನೆಗೆ ನಿಖರ ಕಾರಣವನ್ನು ತನಿಖೆ ನಡೆಸುವಂತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಎಲ್ಲಾ ಇಲಾಖೆಗಳು ಈ ಅವಘಡದಿಂದ ಪಾಠ ಕಲಿಯಬೇಕು. ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು. ದುರಂತಗಳು ಸಂಭವಿಸದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿನ್‌ಪಿಂಗ್ ಸಲಹೆ ನೀಡಿದ್ದಾರೆ. ಚೀನಾದ ಸರ್ಕಾರಿ ವಾಹಿನಿ CCTV ಪ್ರಸಾರ ಮಾಡಿದ ದೃಶ್ಯಗಳಲ್ಲಿ, ರಕ್ಷಣಾ ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಗಾಯಾಳುಗಳನ್ನು ಹೊರತೆಗೆದುಕೊಳ್ಳುತ್ತಿರುವುದು ಮತ್ತು ಸ್ಥಳದಲ್ಲಿ ಆಂಬುಲೆನ್ಸ್‌ಗಳು ನಿಂತಿರುವುದು ಕಂಡುಬಂದಿದೆ.
ಋಷಿಕೇಶದಲ್ಲಿ ಉಜ್ಜೈನಿ ಎಕ್ಸ್ಪ್ರೆಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ; ತಪ್ಪಿದ ಭಾರೀ ರೈಲು ದುರಂತ
ಚೀನಾದ ಶಾಂಕ್ಸಿ ಪ್ರಾಂತ್ಯವು ದೇಶದ ಪ್ರಮುಖ ಕಲ್ಲಿದ್ದಲು ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದೆ. ಕಳೆದ ಕೆಲವು ದಶಕಗಳಲ್ಲಿ ಗಣಿಗಳ ಸುರಕ್ಷತೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯ ಹಾಗೂ ಸ್ಪಷ್ಟ ನಿಯಂತ್ರಣದ ಕೊರತೆಯಿಂದ ಇಂತಹ ಅಪಘಾತಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.