ನವದೆಹಲಿ, ಜೂ. 18: ಭಾರತದ ಗಡಿಯಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿರುವ ಟಿಬೆಟ್‌ನ ಯಾರ್ಲುಂಗ್ ತ್ಸಾಂಗ್ಪೋ (Yarlung Tsangpo) (ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಚೀನಾ ಜಗತ್ತಿನ ಅತಿ ದೊಡ್ಡ ಜಲವಿದ್ಯುತ್ ಅಣೆಕಟ್ಟು (world's largest hydroelectric dam) ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಇದು ಭಾರತದಲ್ಲಿ ತೀವ್ರ ಆತಂಕ ಮೂಡಿಸಿದೆ. ಉಪಗ್ರಹ ಚಿತ್ರಗಳು ಮತ್ತು ಗುಪ್ತಚರ ಮಾಹಿತಿ ಪ್ರಕಾರ ಈ ಬೃಹತ್ ಯೋಜನೆಯ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿರುವುದು ದೃಢಪಟ್ಟಿದೆ.
ಟಿಬೆಟ್‌ನಲ್ಲಿ ಉಗಮವಾಗುವ ಯಾರ್ಲುಂಗ್ ತ್ಸಾಂಗ್ಪೋ ನದಿಯು ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸಿ ಸಿಯಾಂಗ್ ನದಿಯಾಗಿ ಹರಿಯುತ್ತದೆ. ನಂತರ ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯಾಗಿ ಮಾರ್ಪಾಡಾಗುವ ಈ ಜಲರಾಶಿಯು ಲಕ್ಷಾಂತರ ಭಾರತೀಯರ ಜೀವನಾಡಿ. ಮೇಲ್ಭಾಗದಲ್ಲಿ ಚೀನಾ ಇಷ್ಟು ದೊಡ್ಡ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ನದಿಯ ನೈಸರ್ಗಿಕ ಹರಿವು ಏರುಪೇರಾಗಬಹುದು, ಹೂಳು ಸಾಗಣೆ ಪ್ರಕ್ರಿಯೆ ಕುಂಠಿತಗೊಳ್ಳಬಹುದು ಮತ್ತು ಕೆಳಭಾಗದ ರಾಜ್ಯಗಳಲ್ಲಿ ಪರಿಸರ ಹಾನಿ ಹಾಗೂ ಹಠಾತ್ ಪ್ರವಾಹದ ಭೀತಿ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಚೀನಾದಿಂದ ಮೆಗಾ ಡ್ಯಾಂ ನಿರ್ಮಾಣ:
ಪರಿಸರ ಹಾನಿಯ ಜತೆಗೆ, ಈ ಯೋಜನೆಗೆ ಗಂಭೀರ ವ್ಯೂಹಾತ್ಮಕ ಆಯಾಮವೂ ಇದೆ. ಗಡಿ ವಿವಾದಗಳ ಸಂದರ್ಭದಲ್ಲಿ ನದಿಯ ನೀರನ್ನು ನಿಯಂತ್ರಿಸುವ ಮೂಲಕ ಚೀನಾ ಭಾರತದ ಮೇಲೆ ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡ ಹೇರಲು ಈ ಅಣೆಕಟ್ಟನ್ನು ಆಯುಧವಾಗಿ ಬಳಸಿಕೊಳ್ಳಬಹುದು ಎಂದು ಭಾರತೀಯ ಏಜೆನ್ಸಿಗಳು ಆತಂಕ ವ್ಯಕ್ತಪಡಿಸಿವೆ. ಆದರೆ ಚೀನಾ ಮಾತ್ರ ಇದು ಕೇವಲ ವಿದ್ಯುತ್ ಉತ್ಪಾದನೆಗಾಗಿ ಕೈಗೊಂಡಿರುವ ಯೋಜನೆ ಎಂದು ಸಮರ್ಥಿಸಿಕೊಂಡಿದೆ.
ಶೀಘ್ರದಲ್ಲೇ EPFO 3.0 ಲಾಂಚ್; PF ಹಣ ಪಡೆಯುವ ನಿಯಮಗಳಲ್ಲಿ ದೊಡ್ಡ ಬದಲಾವಣೆ
ಕೇಂದ್ರ ಹೇಳಿದ್ದೇನು?
ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಸಂಸತ್ತಿನಲ್ಲಿ ಉತ್ತರಿಸುತ್ತಾ, ಭಾರತ ಸರ್ಕಾರವು 1986ರಿಂದಲೂ ಚೀನಾದ ಈ ಪ್ರಸ್ತಾವಿತ ಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ. 2006ರಲ್ಲಿ ರಚಿಸಲಾದ ತಜ್ಞರ ಕಾರ್ಯವಿಧಾನದ ಮೂಲಕ ಮತ್ತು ಅಧಿಕೃತ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾಗೆ ಭಾರತ ತನ್ನ ಕಳವಳವನ್ನು ನಿರಂತರವಾಗಿ ತಿಳಿಸುತ್ತ ಬಂದಿದೆ. 2025ರ ಜುಲೈ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಯ ಸಂದರ್ಭದಲ್ಲೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯವನ್ನು ಚೀನಾ ಸರ್ಕಾರದ ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಿದ್ದರು.
ಈ ಸೂಕ್ಷ್ಮ ಪರಿಸ್ಥಿತಿಯು ಕರಾವಳಿ ಮತ್ತು ಈಶಾನ್ಯ ಭಾರತದ ಭದ್ರತೆಗೆ ನೇರ ಸವಾಲೊಡ್ಡಿದೆ. ಹೀಗಾಗಿ, ರಾಜತಾಂತ್ರಿಕ ಪ್ರಯತ್ನಗಳ ಜತೆಗೆ, ಭಾರತವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹಾಗೂ ಕೆಳಭಾಗದ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಕ್ಷಣಾ ಮತ್ತು ನೈಸರ್ಗಿಕ ನಿರ್ವಹಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.