ನವದೆಹಲಿ, ಸೆ. 14: ಭಾರತದ ಉತ್ತರ ಗಡಿಯಲ್ಲಿ ಚೀನಾದ ಸೇನಾ ನಿಯೋಜನೆ (Military Deployment) ಗಣನೀಯವಾಗಿ ಕಡಿಮೆಯಾಗಿದೆ ಎಂದು ಭಾರತೀಯ ಸೇನೆಯ ವಾರ್ಷಿಕ ವರದಿ ತಿಳಿಸಿದೆ. ವಾಸ್ತವಿಕ ನಿಯಂತ್ರಣ ರೇಖೆಯ (Line of Actual Control – LAC) ಎದುರು ಹಾಗೂ ತರಬೇತಿ ಪ್ರದೇಶಗಳಲ್ಲಿ ಸುಮಾರು ಹತ್ತು ಬ್ರಿಗೇಡ್‌ಗಳಷ್ಟು (Brigade-sized) ಚೀನೀ ಸೇನಾ ಪಡೆಗಳು (Chinese Troops) ಈಗ ನಿಯೋಜನೆಯಲ್ಲಿವೆ. ಚೀನಾದ ಸೇನಾ ನಿಯೋಜನೆ ಕಡಿಮೆಯಾಗಿದ್ದರೂ, ಗಡಿಯ ಎಲ್ಲ ವಲಯಗಳಲ್ಲೂ ಭಾರತೀಯ ಸೇನೆ ಬಲಿಷ್ಠವಾಗಿ ನಿಯೋಜನೆಗೊಂಡಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಸೇನೆ ತಿಳಿಸಿದೆ.
ಭಾರತ ಮತ್ತು ಚೀನಾ ನಡುವಿನ ರಾಜಕೀಯ, ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಗಳಿಂದ ಉತ್ತರ ಗಡಿಯಲ್ಲಿ ಸ್ಥಿರತೆ ಹೆಚ್ಚಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಹಿರಿಯ ಸೇನಾ ಅಧಿಕಾರಿಗಳ ಸಭೆಯೂ ನಡೆದಿತ್ತು.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಳಿಕ ಭಾರತೀಯ ಸೇನೆ ತನ್ನ ಸಾಮರ್ಥ್ಯಗಳನ್ನು ಪರಿಶೀಲಿಸಿದ್ದು, ಸೇನಾ ಪುನರ್‌ರಚನೆ, ಮೂರು ಪಡೆಗಳ ನಡುವಿನ ಸಮನ್ವಯ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದ್ದರು. ಅದಕ್ಕೂ ಸೇನಾ ನಿಯೋಜನೆ ಕಡಿತಕ್ಕೂ ನೇರ ಸಂಬಂಧವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಇಂಗ್ಲೆಂಡ್‌ನ ಥೇಮ್ಸ್ ನದಿ ತೀರದಲ್ಲಿ ಗಂಗಾ ಆರತಿಗೆ ಸಾವಿರಾರು ಭಕ್ತರು ಸಾಕ್ಷಿ
ಜಮ್ಮು ಮತ್ತು ಕಾಶ್ಮೀರದಲ್ಲೂ ಭದ್ರತಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನೆ ಹೇಳಿದೆ. 2025ರಲ್ಲಿ ಗಡಿಯ ಮೂಲಕ ಒಳನುಸುಳಲು ನಡೆದ ಆರು ಪ್ರಯತ್ನಗಳಲ್ಲಿ 12 ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಆದರೆ ಕದನ ವಿರಾಮ ಉಲ್ಲಂಘನೆಗಳು ಗಣನೀಯವಾಗಿ ಹೆಚ್ಚಿವೆ ಎಂದು ತಿಳಿಸಿದೆ.
2024ರಲ್ಲಿ ಕೇವಲ ಎರಡು ಉಲ್ಲಂಘನೆಗಳು ನಡೆದಿದ್ದರೆ, 2025ರಲ್ಲಿ ಈ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. ಈ ಪೈಕಿ 124 ಉಲ್ಲಂಘನೆಗಳು ಆಪರೇಷನ್ ಸಿಂದೂರ್ ಅವಧಿಯಲ್ಲಿ ನಡೆದಿವೆ.
ಇದೇ ವೇಳೆ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳ ಆತಂಕ ಹೆಚ್ಚಾಗಿದೆ. 2025ರಲ್ಲಿ ಒಟ್ಟು 863 ಡ್ರೋನ್ ಒಳನುಗ್ಗುವಿಕೆ ಪ್ರಕರಣಗಳು ವರದಿಯಾಗಿವೆ. ಭಾರತೀಯ ಪಡೆಗಳು 237 ಡ್ರೋನ್‌ಗಳನ್ನು ಹೊಡೆದುರುಳಿಸಿವೆ.
ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಗಡಿ ಭದ್ರತಾ ಪಡೆಗಳು ಜಾಮರ್‌ಗಳು ಮತ್ತು ಇತರ ಪ್ರತಿರೋಧಕ ತಂತ್ರಜ್ಞಾನಗಳನ್ನು ಬಳಸುತ್ತಿವೆ ಎಂದು ವರದಿ ತಿಳಿಸಿದೆ.