ವಾಗಡೂಗೂ: ಆಫ್ರಿಕಾದ ಪ್ರಮುಖ ರಾಷ್ಟ್ರಗಳಲ್ಲೊಂದಾದ ಬುರ್ಕಿನಾ ಫಾಸೊದಲ್ಲಿ (Burkina Faso) ಮಿಲಿಟರಿ ಸರ್ಕಾರವು ಆಡಳಿತ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಆಮೂಲಾಗ್ರ ಬದಲಾವಣೆಗಳಿಗೆ ನಾಂದಿ ಹಾಡಿದೆ. ದೇಶದ ರಾಷ್ಟ್ರೀಯ ಭದ್ರತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುವ ಕಠಿಣ ನಿರ್ಧಾರದ ಭಾಗವಾಗಿ, ಆರು ವರ್ಷಗಳ ಹಿಂದೆ ರದ್ದುಗೊಳಿಸಲಾಗಿದ್ದ ‘ಮರಣದಂಡನೆ ಶಿಕ್ಷೆ’ಯನ್ನು ಅಧಿಕೃತವಾಗಿ ಮರುಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ನಡೆಯುವ ಸಾಂಪ್ರದಾಯಿಕ ಸೌಂದರ್ಯ ಸ್ಪರ್ಧೆಗಳನ್ನು (Beauty Pageants) ಸರ್ಕಾರ ಸಂಪೂರ್ಣವಾಗಿ ಅಮಾನತುಗೊಳಿಸಿದೆ. ಕ್ಯಾಪ್ಟನ್ ಇಬ್ರಾಹಿಂ ತ್ರಾವೋರೆ ನೇತೃತ್ವದ ಮಧ್ಯಂತರ ಸರ್ಕಾರವು ಈ ಕಠಿಣ ಕ್ರಮವನ್ನು ಜಾರಿಗೆ ತಂದಿದೆ.
ಪಾಶ್ಚಾತ್ಯ ಶೈಲಿಯ ಸೌಂದರ್ಯ ಸ್ಪರ್ಧೆಗಳು ಆಫ್ರಿಕನ್ ಸಂಸ್ಕೃತಿ, ನೈತಿಕತೆ ಮತ್ತು ಮಾನವ ಗೌರವಕ್ಕೆ ಧಕ್ಕೆ ತರುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಸರ್ಕಾರ, ಇಂತಹ ಎಲ್ಲಾ ಸ್ಪರ್ಧೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಕೇವಲ ದೈಹಿಕ ಸೌಂದರ್ಯದ ಪ್ರದರ್ಶನಕ್ಕೆ ಆದ್ಯತೆ ನೀಡುವ ಸ್ಪರ್ಧೆಗಳ ಬದಲಾಗಿ, ಯುವತಿಯರ ಬೌದ್ಧಿಕ ಮತ್ತು ಶೈಕ್ಷಣಿಕ ವಿಕಾಸವನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ.
ಇದರ ಭಾಗವಾಗಿ 'ಹಕಿಲಿ ಮೂಸೊ' ಎಂಬ ಹೊಸ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ನಡೆದ ಈ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ದೇಶದಾದ್ಯಂತದ 84 ಪ್ರತಿಭಾವಂತ ಯುವತಿಯರು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸಿದ್ದರು. ಈ ಸ್ಪರ್ಧೆಯ ವಿಜೇತರಿಗೆ ಸರ್ಕಾರವು ಬೃಹತ್ ಮೊತ್ತದ ನಗದು ಬಹುಮಾನ, ಲ್ಯಾಪ್‌ಟಾಪ್ ಹಾಗೂ ಉನ್ನತ ವ್ಯಾಸಂಗಕ್ಕಾಗಿ ಸಂಪೂರ್ಣ ವಿದ್ಯಾರ್ಥಿವೇತನವನ್ನು ಘೋಷಿಸಿದೆ.
ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ ಗಲ್ಲು ಶಿಕ್ಷೆ ಪ್ರಕಟ
ಬುರ್ಕಿನಾ ಫಾಸೊ ಸರ್ಕಾರದ ಈ ಕಠಿಣ ನಿಲುವುಗಳಿಗೆ ದೇಶದ ಒಳಗಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಬಿಂಬಿಸುವ ಸೌಂದರ್ಯ ಸ್ಪರ್ಧೆಗಳಿಗಿಂತ ಜ್ಞಾನಾಧಾರಿತ ಸ್ಪರ್ಧೆಗಳು ಉತ್ತಮ ಹಾಗೂ ಅಪರಾಧ ಮುಕ್ತ ಸಮಾಜಕ್ಕೆ ಮರಣದಂಡನೆ ಅಗತ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.