ಇಸ್ಲಾಮಾಬಾದ್: ಲೆಬನಾನ್‌ನಲ್ಲಿ ಕದನ ವಿರಾಮ ಆಗುವವರೆಗೆ ಅಮೆರಿಕದ ಜೊತೆ ಮಾತನಾಡುವುದಿಲ್ಲ ಎಂದು ಇರಾನ್ ಹೇಳಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ಪ್ರಾರಂಭಿಸಿದ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಇದೀಗ ಎರಡೂ ಪಕ್ಷಗಳು ಕದನ ವಿರಾಮ ಮಾತುಕತೆಗೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧಿಕಾರಿಗಳೊಂದಿಗೆ ಮಾತನಾಡಲು ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ಆಗಮಿಸಿದೆ ಎನ್ನಲಾಗಿದೆ. ಆದರೆ ಇದೊಂದು ಸುಳ್ಳು ಸುದ್ದಿ ಎಂದು ಇರಾನ್ ಹೇಳಿದೆ.
ಅಮೆರಿಕದ ಅಧಿಕಾರಿಗಳೊಂದಿಗೆ ಕದನ ವಿರಾಮದ ಒಪ್ಪಂದಗಳ ಕುರಿತು ಮಾತನಾಡಲು ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ತಲುಪಿದೆ ಎನ್ನುವ ಮಾಧ್ಯಮಗಳ ವರದಿಯನ್ನು ಇರಾನ್ ತಳ್ಳಿ ಹಾಕಿದೆ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ಸದ್ಯ ಪಾಕಿಸ್ತಾನದಲ್ಲಿ ಕುರಿತು ವಾಷಿಂಗ್ಟನ್‌ನೊಂದಿಗೆ ಮಾತುಕತೆ ನಡೆಸುವ ಯಾವುದೇ ಯೋಜನೆ ಇಲ್ಲ ಎಂದು ಟೆಹರಾನ್ ಸ್ಥಳೀಯ ಮಾಧ್ಯಮದ ಮೂಲಕ ಸ್ಪಷ್ಟಪಡಿಸಿದೆ.
ಹಿಜ್ಬುಲ್ಲಾ ಮುಖ್ಯಸ್ಥನ ಆಪ್ತ ಸಹಾಯಕನನ್ನೇ ಹೊಡೆದುರುಳಿಸಿದ ಇಸ್ರೇಲ್; ಮತ್ತೆ ಯುದ್ಧ ಶುರುವಾಗುತ್ತಾ?
ಅಮೆರಿಕದೊಂದಿಗೆ ಮಾತುಕತೆ ನಡೆಸಲು ಇಸ್ಲಾಮಾಬಾದ್‌ನಲ್ಲಿ ಆಯೋಜಿಸುವ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸಲು ಸದ್ಯ ಇರಾನ್ ಯಾವುದೇ ಯೋಜನೆಯನ್ನು ಹೊಂದಿಲ್ಲ. ಲೆಬನಾನ್‌ನಲ್ಲಿ ಕದನ ವಿರಾಮವಾಗುವವರೆಗೂ ಇದು ಸಾಧ್ಯವಿಲ್ಲ ಎಂದು ಇರಾನ್ ತಿಳಿಸಿದೆ.
ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಅಮೆರಿಕ ಮುಂದಾಗುತ್ತಿಲ್ಲ. ಅದು ತನ್ನ ನಿಲುವನ್ನು ಬದಲಿಸುವವರೆಗೆ ಇರಾನ್ ಮಾತುಕತೆಗೆ ಬರುವುದಿಲ್ಲ. ಅಲ್ಲಿವರೆಗೆ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅಥವಾ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲಿಬಾಫ್ ಅವರು ಹೇಳಿದ್ದು, ಇಸ್ಲಾಮಿಕ್ ಗಣರಾಜ್ಯದಿಂದ ಮಾತುಕತೆಗಾಗಿ ಯಾರೂ ಕೂಡ ಇಸ್ಲಾಮಾಬಾದ್ ಗೆ ಹೊರಟಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆಯೇ ಕೆಲವು ಮಾಧ್ಯಮಗಳು ಕದನ ವಿರಾಮ ಮಾತುಕತೆಗಾಗಿ ಇರಾನ್‌ನ ತಂಡವು ಇಸ್ಲಾಮಾಬಾದ್ ಗೆ ಆಗಮಿಸಿದೆ ಎಂದು ತಿಳಿಸಿವೆ. ಪಾಕಿಸ್ತಾನದಲ್ಲಿ ಆಯೋಜಿಸಲಾಗಿರುವ ಮಾತುಕತೆಗೂ ಮುನ್ನವೇ ಅಮೆರಿಕ ಮತ್ತು ಇರಾನ್ ಕದನ ವಿರಾಮಕ್ಕೆ ಮುಂದಾಗಿದ್ದವು. ಈ ನಡುವೆ ಹೊರ್ಮುಜ್ ಜಲಸಂಧಿಯ ನಿರ್ಣಯಗಳನ್ನು ಒಪ್ಪಿಕೊಳ್ಳುವಲ್ಲಿ ಟೆಹರಾನ್ ವಿಫಲವಾಗಿದೆ ಎಂದು ವಾಷಿಂಗ್ಟನ್ ಆರೋಪಿಸಿದ್ದು, ಲೆಬನಾನ್ ನಲ್ಲಿ ನಡೆಯುತ್ತಿರುವ ದಾಳಿಯನ್ನು ನಿಯಂತ್ರಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಟೆಹರಾನ್ ಒಪಿಸಿದೆ. ಇದರ ಮಧ್ಯೆಯೇ ಲೆಬನಾನ್‌ನಲ್ಲಿ ಇಸ್ರೇಲ್ ಹೊಸ ದಾಳಿಗಳನ್ನು ನಡೆಸಿದೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜಲಸಂಧಿಯ ಮೂಲಕ ತೈಲ ಸಾಗಣೆಗೆ ಅವಕಾಶ ನೀಡುವಲ್ಲಿ ಅತ್ಯಂತ ಕಳಪೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದು ನಮ್ಮ ಒಪ್ಪಂದವಲ್ಲ. ಶೀಘ್ರದಲ್ಲೇ ಇಲ್ಲಿ ತೈಲ ಹರಿವು ಪುನರಾರಂಭಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಲೆಬನಾನ್‌ನಲ್ಲಿ ಶುಕ್ರವಾರ ಮುಂಜಾನೆ 10 ಲಾಂಚರ್‌ಗಳನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಇದಕ್ಕೂ ಮೊದಲು ಉತ್ತರ ನಗರ ಹೈಫಾದಲ್ಲಿರುವ ಇಸ್ರೇಲಿ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ಹೆಜ್ಬೊಲ್ಲಾ ತಿಳಿಸಿದೆ.
ಅಮೆರಿಕದಿಂದ ಮೂರು ನಿಯಮಗಳ ಉಲ್ಲಂಘನೆ: ಕದನ ವಿರಾಮ ಮಾತುಕತೆ ಅಸಮಂಜಸ ಎಂದ ಇರಾನ್
ಇರಾನ್ ನೊಂದಿಗಿನ ಕದನ ವಿರಾಮವು ಲೆಬನಾನ್‌ಗೆ ವಿಸ್ತರಿಸುವುದಿಲ್ಲ ಎಂದು ಅಮೆರಿಕ ಮತ್ತು ಇಸ್ರೇಲ್ ಹೇಳಿಕೊಂಡಿದ್ದರೂ ಇರಾನ್ ಮತ್ತು ಪಾಕಿಸ್ತಾನವು ಲೆಬನಾನ್ ಇರಾನ್ ಕದನ ವಿರಾಮ ಒಪ್ಪಂದದ ಭಾಗವಾಗಿದೆ ಎಂದು ತಿಳಿಸಿವೆ.