ವಾಷಿಂಗ್ಟನ್, ನ. 4: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ (US midterms) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಭಾರಿ ಹಿನ್ನಡೆಯಾಗಿದೆ. ಅಮೆರಿಕದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿ ಸಭೆ) ಎರಡರಲ್ಲೂ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಸೋಲಿನತ್ತ ಮುಖ ಮಾಡಿದೆ. ವಿಪಕ್ಷ ಡೆಮಾಕ್ರಟಿಕ್ ಪಕ್ಷ ಮೇಲುಗೈ ಸಾಧಿಸಿದೆ. ಟ್ರಂಪ್ ಅವರ ಎರಡನೇ ಅವಧಿಯ ಕುರಿತಾದ ಜನಾಭಿಪ್ರಾಯ ಸಂಗ್ರಹ (Referendum) ಎಂದೇ ಪರಿಗಣಿಸಲ್ಪಟ್ಟ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಆಡಳಿತ ವೈಖರಿಯೇ ಅವರಿಗೆ ಹಿನ್ನಡೆ ತಂದಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್ ಅವರ ಈ ಕ್ರಮಗಳು ಅಮೆರಿಕದ ಮೇಲೆ ಮಾತ್ರವಲ್ಲದೆ, ಭಾರತ ಸೇರಿ ಇಡೀ ಪ್ರಪಂಚದ ಮೇಲೂ ಪರಿಣಾಮ ಬೀರಿದ್ದವು.
ಮತಗಳ ಎಣಿಕೆ ಇನ್ನೂ ನಡೆಯುತ್ತಿದ್ದು, ಅಂತಿಮ ಫಲಿತಾಂಶಗಳು ಅಧಿಕೃತಗೊಳ್ಳಲು ಇನ್ನೂ ಕೆಲವು ದಿನಗಳೇ ಬೇಕಾಗಬಹುದು. ಆದರೂ ಆರಂಭಿಕ ಹಂತದ ಫಲಿತಾಂಶ ಟ್ರಂಪ್ ಅವರ 2 ವರ್ಷಗಳ ಪೂರ್ಣ ಆಡಳಿತದ ನಂತರ ಅಮೆರಿಕ ಈಗ ತನ್ನ ಹಾದಿಯನ್ನು ಬದಲಾಯಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ಗೆ ಹಿನ್ನಡೆ:
ಚುನಾವಣಾ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ಟ್ರಂಪ್ 'ನ್ಯೂಯಾರ್ಕ್ ಟೈಮ್ಸ್'ಗೆ ನೀಡಿದ ಸಂದರ್ಶನವೊಂದರಲ್ಲಿ, "ಈ ಫಲಿತಾಂಶಗಳನ್ನು ಒಪ್ಪಿಕೊಳ್ಳಲು ನಾನು ಸಂಪೂರ್ಣವಾಗಿ ಸಿದ್ಧ" ಎಂದು ಹೇಳಿದ್ದಾರೆ.
ಟ್ರಂಪ್ಗೆ ಭಾರಿ ಹಿನ್ನಡೆ
2020ರ ನಂತರ ಟ್ರಂಪ್ ಅತ್ಯಂತ ದೊಡ್ಡ ಹಿನ್ನಡೆಯನ್ನು ಎದುರಿಸಿದ್ದಾರೆ. ಆ ವರ್ಷ ಅವರು ಚುನಾವಣೆಯಲ್ಲಿ ಸೋತಿದ್ದರೂ ಈ ಮಟ್ಟಿನ ಜನಾಕ್ರೋಶ ವ್ಯಕ್ತವಾಗಿರಲಿಲ್ಲ. ಆದರೆ ಈ ಬಾರಿ ಅವರು ಸಾಮಾನ್ಯವಾಗಿ ರೆಡ್ ಸ್ಟೇಟ್ಸ್ (ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ರಾಜ್ಯಗಳು) ಎಂದು ಕರೆಯಲ್ಪಡುವ ಕ್ಷೇತ್ರಗಳಲ್ಲೂ ಸೋಲು ಕಂಡಿದ್ದಾರೆ.
ಸೋಲಿಗೆ ಕಾರಣ
ಈ ಸೋಲಿಗೆ ಪ್ರಮುಖ ಕಾರಣ ಹೆಚ್ಚುತ್ತಿರುವ ಜೀವನ ವೆಚ್ಚ. ಜನ ಸಾಮಾನ್ಯರು ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಗಳ ಏರಿಕೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ವಿಶೇಷವಾಗಿ ಮಧ್ಯಪಶ್ಚಿಮ ರಾಜ್ಯಗಳಲ್ಲಿ ತೀವ್ರವಾಗಿದೆ. ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್-ಇರಾನ್ ಯುದ್ಧ ಆರಂಭವಾದ ಬಳಿಕ ಇಂಧನ ಬೆಲೆ ಏರಿಕೆಯಾಗಿದೆ. ಅಲ್ಲದೆ ಅಧ್ಯಕ್ಷರಾದ ಬಳಿಕ ಟ್ರಂಪ್ ಅವರ ಸಂಪತ್ತು ಗಣನೀಯವಾಗಿ ಏರಿಕೆಯಾಗಿದ್ದು ಜನ ಅಸಮಾಧಾನಕ್ಕೆ ಕಾರಣವಾಯ್ತು.
ನ್ಯಾಯಾಂಗದಿಂದ ಹಿಡಿದು ಅಮೆರಿಕದ ಕಾಂಗ್ರೆಸ್ವರೆಗಿನ ಸಂಸ್ಥೆಗಳ ಮೇಲೆ ಪ್ರಭುತ್ವ ಸಾಧಿಸಲು ಟ್ರಂಪ್ ನಡೆಸಿದ ಪ್ರಯತ್ನಗಳನ್ನು ಅಮೆರಿಕನ್ನರು ಇಷ್ಟಪಡಲಿಲ್ಲ. ಅಮೆರಿಕದ ವ್ಯವಸ್ಥೆಯು ದೀರ್ಘಕಾಲದಿಂದ ಕಾರ್ಯಾಂಗದ ಅಧಿಕಾರದ ಮೇಲೆ ನಿಯಂತ್ರಣ ಮತ್ತು ಸಮತೋಲನಗಳನ್ನು ಅವಲಂಬಿಸಿದೆ. ಇಂತಹ ರಕ್ಷಣಾತ್ಮಕ ವ್ಯವಸ್ಥೆಗಳು ದುರ್ಬಲಗೊಳ್ಳುತ್ತಿರುವುದನ್ನು ಅಮೆರಿಕದಾದ್ಯಂತ ಜನರು ಗ್ರಹಿಸಿದ್ದರಿಂದ ಈ ಹಿನ್ನಡೆಯಾಗಿದೆ ಎಂದು ವಿವರಿಸಲಾಗಿದೆ.
ಅಮೆರಿಕದ ವಿರುದ್ಧ ಕಿಡಿ ಕಾರಿದ ಇರಾನ್: ಡೊನಾಲ್ಡ್ ಟ್ರಂಪ್ ಕುಟುಂಬದ ಶವಪೆಟ್ಟಿಗೆ ಚಿತ್ರವಿರುವ ಬ್ಯಾನರ್ ಪ್ರದರ್ಶನ
ಈ ಮಧ್ಯಂತರ ಚುನಾವಣೆಯೊಂದಿಗೆ 2028ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗುವ ಸ್ಪರ್ಧೆ ಅಧಿಕೃತವಾಗಿ ಆರಂಭಗೊಂಡಿದೆ. ಮಧ್ಯಂತರ ಚುನಾವಣೆಗಳು ಮುಗಿದಿರುವ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರತ್ತ ಎಲ್ಲರ ಗಮನ ಹರಿಯಲಿದೆ.
ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.