ಅಮೆರಿಕದ ವಿರುದ್ಧ ಕಿಡಿ ಕಾರಿದ ಇರಾನ್: ಡೊನಾಲ್ಡ್ ಟ್ರಂಪ್ ಕುಟುಂಬದ ಶವಪೆಟ್ಟಿಗೆ ಚಿತ್ರವಿರುವ ಬ್ಯಾನರ್ ಪ್ರದರ್ಶನ
"Blood For Blood": ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬವನ್ನು ಶವಪೆಟ್ಟಿಗೆಯಲ್ಲಿರುವಂತೆ ಚಿತ್ರಿಸಿರುವ ಹೊಸ ಪ್ರಚೋದನಾತ್ಮಕ ಬ್ಯಾನರ್ ಅಳವಡಿಸಲಾಗಿದೆ. ʼರಕ್ತಕ್ಕೆ ರಕ್ತʼ ಎಂಬ ಘೋಷಣೆಯೊಂದಿಗೆ ಪ್ರದರ್ಶಿಸಲಾದ ಈ ಬ್ಯಾನರ್ ಅಮೆರಿಕ ವಿರುದ್ಧದ ಪ್ರತೀಕಾರದ ಸಂದೇಶವೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಜಾಗತಿಕ ಗಮನ ಸೆಳೆದಿದೆ. ಮತ್ತೊಂದೆಡೆ, ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದ್ದರೆ, ಟ್ರಂಪ್ ಕೂಡ ಇರಾನ್ ವಿರುದ್ಧ ಕಠಿಣ ಸೇನಾ ಕ್ರಮದ ಸಾಧ್ಯತೆ ಬಗ್ಗೆ ಚಿಂತನಬೆ ನಡೆಸುತ್ತಿದ್ದಾರೆ.
ಟ್ರಂಪ್ ಕುಟುಂಬ ಗುರಿಯಾಗಿಸಿ ಇರಾನ್‌ನ ಹೊಸ ಬ್ಯಾನರ್ -
ಟೆಹ್ರಾನ್, ಜು. 18: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಹೊಸ ಪ್ರಚೋದನಾತ್ಮಕ ಬ್ಯಾನರ್ ಅಳವಡಿಸಲಾಗಿದೆ. ಬ್ಯಾನರ್‌ನಲ್ಲಿ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಹಾಗೂ ಅವರ ಐವರು ಮಕ್ಕಳಾದ ಇವಾಂಕಾ, ಡೊನಾಲ್ಡ್ ಜೂನಿಯರ್, ಎರಿಕ್, ಟಿಫನಿ ಮತ್ತು ಬ್ಯಾರನ್ ಟ್ರಂಪ್ ಅವರ ಭಾವಚಿತ್ರಗಳನ್ನು ಅಮೆರಿಕದ ಧ್ವಜದಿಂದ ಹೊದಿಸಲಾದ ಶವಪೆಟ್ಟಿಗೆಗಳ ಮೇಲಿರುವಂತೆ ಚಿತ್ರಿಸಲಾಗಿದೆ. ಹಿನ್ನೆಲೆಯಲ್ಲಿ ಬೆಂಕಿಗಾಹುತಿಯಾಗುತ್ತಿರುವ ಶ್ವೇತಭವನದ ಚಿತ್ರವಿದ್ದು, ಪರ್ಷಿಯನ್ ಭಾಷೆಯಲ್ಲಿ ʼರಕ್ತಕ್ಕೆ ರಕ್ತʼ ಎಂಬ ಘೋಷಣೆ ಬರೆಯಲಾಗಿದೆ.
ಈ ಬ್ಯಾನರ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಟೆಹರಾನ್‌ನಲ್ಲಿ ಪ್ರದರ್ಶಿಸಲಾದ ಎರಡನೇ ದೊಡ್ಡ ಸಾರ್ವಜನಿಕ ಸಂದೇಶ ಎನಿಸಿಕೊಂಡಿದೆ. ಇದಕ್ಕೂ ಮೊದಲು ಎಂಗೆಲಾಬ್ ಚೌಕದಲ್ಲಿ ಟ್ರಂಪ್ ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಚಿತ್ರಿಸಿದ ಮತ್ತೊಂದು ಬ್ಯಾನರ್ ಅಳವಡಿಸಲಾಗಿತ್ತು. ಟೆಹರಾನ್‌ನ ಪ್ರಮುಖ ವಲಿಯಾಸರ್ ಚೌಕ ಸೇರಿನಗರದ ವಿವಿಧ ಭಾಗಗಳಲ್ಲಿ ಇಂತಹ ಬೃಹತ್ ಭಿತ್ತಿ ಚಿತ್ರಗಳು ಮತ್ತು ಬ್ಯಾನರ್‌ಗಳನ್ನು ಇರಾನ್‌ನ ರಾಜಕೀಯ, ಕ್ರಾಂತಿಕಾರಿ ಹಾಗೂ ಸೈದ್ಧಾಂತಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅಳವಡಿಸಲಾಗುತ್ತದೆ. ಈ ಕಲಾಕೃತಿಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜತೆ ಸಂಬಂಧ ಹೊಂದಿರುವ 'ಒವ್ಜ್ ಆರ್ಟ್ಸ್ ಅಂಡ್ ಮೀಡಿಯಾ ಆರ್ಗನೈಸೇಶನ್' ರೂಪಿಸುತ್ತದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕ-ಇರಾನ್ ಸಂಬಂಧಗಳು ಮತ್ತಷ್ಟು ಹದಗೆಟ್ಟಿದ್ದು, ಇರಾನ್‌ನ ಪರಮೋಚ್ಚ ನಾಯಕನ ಹತ್ಯೆಯ ಬಳಿಕ ಸರ್ಕಾರದ ಉನ್ನತ ನಾಯಕರು ಮತ್ತು ಸರ್ಕಾರಿ ಬೆಂಬಲಿತ ಮಾಧ್ಯಮಗಳು ಅಮೆರಿಕ ವಿರುದ್ಧ ಪ್ರತೀಕಾರದ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿವೆ. ಪರಮೋಚ್ಚ ನಾಯಕನ ಉತ್ತರಾಧಿಕಾರಿ ಮೊಜ್ತಬಾ ಖಮೇನಿ, "ನಮ್ಮ ರಾಷ್ಟ್ರ ಪ್ರತೀಕಾರವನ್ನು ಖಂಡಿತವಾಗಿ ತೀರಿಸಿಕೊಳ್ಳಲಿದೆ. ಈ ಕೃತ್ಯದ ಹೊಣೆಗಾರರು ನೆಮ್ಮದಿಯಿಂದ ಸಾಯುವ ಅವಕಾಶ ಪಡೆಯುವುದಿಲ್ಲ" ಎಂದು ತಮ್ಮ ಟೆಲಿಗ್ರಾಂ ಸಂದೇಶದಲ್ಲಿ ಎಚ್ಚರಿಕೆ ನೀಡಿದ್ದರು.
ಟೆಹರಾನ್‌ನಲ್ಲಿ ಡೊನಾಲ್ಡ್ ಟ್ರಂಪ್ ಶವಪೆಟ್ಟಿಗೆಯ ಬೃಹತ್ ಹೋರ್ಡಿಂಗ್: ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ ಇರಾನ್
ಇನ್ನೊಂದೆಡೆ, ತಮ್ಮ ವಿರುದ್ಧ ಹತ್ಯಾ ಯತ್ನ ನಡೆದರೆ ಇರಾನ್ ಮೇಲೆ "ಇದುವರೆಗೆ ಕಂಡಿರದ ಮಟ್ಟದಲ್ಲಿ ಬಾಂಬ್ ದಾಳಿ ನಡೆಸುವಂತೆ" ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದಾರೆ. ಇರಾನ್ ತನ್ನನ್ನು ಹಲವು ವರ್ಷಗಳಿಂದ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದು, ಯಾವುದೇ ದಾಳಿಗೆ ಅಮೆರಿಕ ಕಠಿಣ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
ಇದರ ನಡುವೆಯೇ, ಅಮೆರಿಕವು ಇಸ್ರೇಲ್‌ಗೆ ಹೆಚ್ಚುವರಿ ವೈಮಾನಿಕ ಇಂಧನ ತುಂಬುವ ವಿಮಾನಗಳನ್ನು ಕಳುಹಿಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಇಸ್ರೇಲ್-ಇರಾನ್ ಸಂಘರ್ಷ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಮೆರಿಕ ಸೇನಾ ಸಿದ್ಧತೆಗಳನ್ನು ಬಲಪಡಿಸುತ್ತಿದೆ ಎನ್ನಲಾಗಿದ್ದು, ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಯುದ್ಧದ ಆತಂಕವನ್ನು ಹೆಚ್ಚಿಸಿವೆ. ಜಾಗತಿಕ ಸಮುದಾಯ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಉದ್ವಿಗ್ನತೆ ಶಮನಕ್ಕೆ ರಾಜತಾಂತ್ರಿಕ ಪ್ರಯತ್ನಗಳು ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.