ಜೆರುಸಲೆಂ, ಜೂ. 27: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ (Israel-Lebanon) ನಡುವೆ ಮಹತ್ವದ ಭದ್ರತಾ ಒಪ್ಪಂದ ಏರ್ಪಟ್ಟ ಮರುದಿನವೇ, ದಕ್ಷಿಣ ಲೆಬನಾನ್‌ನ ನಬತಿಯೆಹ್ ಪ್ರದೇಶದ ಮೇಲೆ ಇಸ್ರೇಲ್ ಭೀಕರ ಡ್ರೋನ್ ದಾಳಿ (Drone Strike) ನಡೆಸಿದೆ. ಈ ಹಠಾತ್ ದಾಳಿಯು ಇತ್ತೀಚೆಗಷ್ಟೇ ರೂಪಿಸಲಾದ ಶಾಂತಿ ಒಪ್ಪಂದದ ಸ್ಥಿರತೆ ಮತ್ತು ಯಶಸ್ಸಿನ ಬಗ್ಗೆ ಅಂತಾರಾಷ್ಟ್ರೀಯ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಸುದೀರ್ಘ ರಾಜತಾಂತ್ರಿಕ ಮಾತುಕತೆಗಳ ನಂತರ ಈ ಭದ್ರತಾ ವ್ಯವಸ್ಥೆಯನ್ನು ಅಧಿಕೃತಗೊಳಿಸಲಾಗಿತ್ತು. ಗಡಿ ಭಾಗದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು. ಈ ಒಪ್ಪಂದದ ಕುರಿತು ಮಾತನಾಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಇದನ್ನು ಪ್ರಾದೇಶಿಕ ಸ್ಥಿರತೆಯತ್ತ ಇಟ್ಟ ಮೊದಲ ಹೆಜ್ಜೆ ಎಂದು ಬಣ್ಣಿಸಿದ್ದರು. ಆದರೆ, ಈ ಮಾತುಕತೆಯಲ್ಲಿ ಪ್ರಮುಖ ಸಶಸ್ತ್ರ ಗುಂಪಾದ ಹಿಜ್ಬುಲ್ಲಾ ಭಾಗವಹಿಸಿರಲಿಲ್ಲ.
ಪ್ರಸ್ತುತ ನಡೆದಿರುವ ಡ್ರೋನ್ ದಾಳಿಯಿಂದ ಸಂಭವಿಸಿದ ಸಾವು-ನೋವುಗಳು ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಇಸ್ರೇಲ್ ಮಿಲಿಟರಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಜೂನ್ 17ರಂದು ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾದ ತಿಳುವಳಿಕಾ ಒಪ್ಪಂದದ ಅಡಿಯಲ್ಲಿ ಜಾರಿಗೆ ತರಲಾದ ಕದನ ವಿರಾಮದ ಪ್ರಯತ್ನಗಳಿಗೆ ಈ ಹೊಸ ಸಂಘರ್ಷವು ದೊಡ್ಡ ಹಿನ್ನಡೆಯನ್ನು ಉಂಟುಮಾಡಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇಸ್ರೇಲ್ ಕಾರಾಗೃಹಗಳಲ್ಲಿ ಪ್ಯಾಲೆಸ್ತೀನಿಯರ ಮೇಲೆ ಅತ್ಯಾಚಾರ ಎಸಗಲು ಶ್ವಾನಗಳ ಬಳಕೆ
ಗಡಿಯಲ್ಲಿ ಮರುಕಳಿಸುತ್ತಿರುವ ಇಂತಹ ದಾಳಿಗಳು ಇಡೀ ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅಮೆರಿಕ-ಇರಾನ್ ಒಪ್ಪಂದಕ್ಕೆ ಇಸ್ರೇಲ್‌ನಲ್ಲಿ ಭಾರಿ ವಿರೋಧ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನೊಂದಿಗೆ ಒಪ್ಪಂದ ಪೂರ್ಣಗೊಂಡಿದೆ ಎಂದು ಘೋಷಿಸಿದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ತೀವ್ರ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್, ಟ್ರಂಪ್ ಅವರ ಒಪ್ಪಂದ ನಮಗೆ ಅನ್ವಯವಾಗುವುದಿಲ್ಲ. ಇಸ್ರೇಲ್ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, "ನಾವು ಅಮೆರಿಕವನ್ನು ಗೌರವಿಸುತ್ತೇವೆ ಮತ್ತು ಟ್ರಂಪ್ ಅವರಿಗೆ ಕೃತಜ್ಞರಾಗಿದ್ದೇವೆ. ಆದರೆ ಇಸ್ರೇಲ್ ಯಾವ ಷರತ್ತನ್ನೂ ಒಪ್ಪಿಕೊಳ್ಳುವುದಿಲ್ಲ" ಎಂದು ತಿಳಿಸಿದ್ದರು.
ಇಸ್ರೇಲ್‌ನ ನಾಗರಿಕರು, ಸೈನಿಕರು ಮತ್ತು ದೇಶದ ಭದ್ರತೆಯೇ ತಮ್ಮ ಮೊದಲ ಕರ್ತವ್ಯ ಎಂದು ಬೆನ್-ಗ್ವಿರ್ ಒತ್ತಿ ಹೇಳಿದ್ದರು. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಾಗಲೆಲ್ಲ ಇಸ್ರೇಲ್ ಭಾರಿ ಬೆಲೆ ತೆತ್ತಿದೆ ಎಂದು ಅವರು ಆರೋಪಿಸಿದ್ದರು.