ಕಠ್ಮಂಡು: ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದಿಂದ ಈಗಾಗಲೇ ಕಂಗೆಟ್ಟಿದ್ದ ಟಿಬೆಟ್ ಹಾಗೂ ನೇಪಾಳ ಗಡಿ ಪ್ರದೇಶಗಳಲ್ಲಿ ಇದೀಗ (Nepal- Tibet Earthquake) ಪ್ರಕೃತಿಯು ಮತ್ತೊಂದು ಆಘಾತ ಸೃಷ್ಟಿಸಿದೆ. ಟಿಬೆಟ್‌ನ ದಕ್ಷಿಣ ಭಾಗದಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಹಿಮನದಿ ಕುಸಿತದಿಂದ ಉಂಟಾದ ಪ್ರವಾದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, ಈಗ ಭೂಕಂಪದಿಂದ ಮತ್ತಷ್ಟು ಪ್ರವಾಹ ಅಪಾಯ ಹೆಚ್ಚಾಗುವ ಸಾಧ್ಯತೆಯಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ರಾಷ್ಟ್ರೀಯ ಭೂಕಂಪನ ಕೇಂದ್ರದ ಮಾಹಿತಿಯಂತೆ, ಟಿಬೆಟ್‌ನ ಶಿಚಾಂಗ್ ಪ್ರಾಂತ್ಯದ ಗಡಿ ಭಾಗದಲ್ಲಿ ಭೂಮಿಯ ಆಳದಲ್ಲಿ ಈ ಕಂಪನ ಸಂಭವಿಸಿದೆ. ಟಿಬೆಟ್‌ಗೆ ಹೊಂದಿಕೊಂಡಿರುವ ನೇಪಾಳದ ಸಿಂಧುಪಾಲ್ಚೋಕ್, ಡೋಲಾಖಾ ಮತ್ತು ಹಿಮಾಲಯದ ಗಡಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ರಭಸಕ್ಕೆ ಮನೆಗಳಲ್ಲಿದ್ದ ವಸ್ತಗಳು ಅಲ್ಲಾಡಿವೆ. ಪ್ರವಾಹದ ಭೀತಿಯಲ್ಲಿದ್ದ ಜನರು ಭೂಕಂಪನವಾಗುತ್ತಿದ್ದಂತೆ ಮನೆಗಳಿಂದ ಹೊರಗೆ ಓಡಿಬಂದು ಬಯಲು ಪ್ರದೇಶಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಭೂಕಂಪದಿಂದ ಯಾವುದೇ ರೀತಿ ಸಾವು ನೋವು ಸಂಭವಿಸಿಲ್ಲ ಎಂದು ವರದಿಗಳು ಹೇಳಿವೆ.
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 1200 ಕ್ಕೆ ಏರಿಕೆ
ಆಗಸ್ಟ್ 26 ರಂದು ಟಿಬೆಟ್-ನೇಪಾಳ ಗಡಿಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 1252ಕ್ಕೆ ಏರಿಕೆಯಾಗಿದೆ. ಚಿತ್ವಾನ್‌ನಲ್ಲಿ ಅತಿ ಹೆಚ್ಚು 355 ಮೃತದೇಹಗಳು ಸಿಕ್ಕಿದ್ದು, ನವಲ್ಪರಾಸಿ ಪೂರ್ವದಲ್ಲಿ 218, ವಲ್ಪರಾಸಿ ಪಶ್ಚಿಮದಲ್ಲಿ 208, ನುವಾಕೋಟ್‌ನಲ್ಲಿ 117, ರುಸುವಾದಲ್ಲಿ 127, ಗೂಖಾದಲ್ಲಿ 69, ಧಾಡಿಂಗ್‌ನಲ್ಲಿ 60, ಮತ್ತು ತನುಹಾದಲ್ಲಿ 38 ಶವಗಳನ್ನು ರಕ್ಷಣಾ ಪಡೆಗಳು ಹೊರತಗೆದಿವೆ. ನವಲ್ಪರಾಸಿ ಪಶ್ಚಿಮ ಭಾಗದ ನದಿಗಳಲ್ಲಿ ಕೊಚ್ಚಿಬಂದಿದ್ದ 18 ಮೃತದೇಹಗಳನ್ನು ಭಾರತದ ಗಡಿ ಭದ್ರತಾ ಪಡೆಗಳು ಪತ್ತೆಹಚ್ಚಿ ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿವೆ.
ರಸುವಾ ಮತ್ತು ನುವಾಕೋಟ್ ಜಿಲ್ಲೆಗಳ ಮೂಲಕ ಹರಿಯುವ ಭೋಟೆಕೋಶಿ ಹಾಗೂ ತ್ರಿಶೂಲಿ ನದಿಗಳು, ಜೊತೆಗೆ ಸಣ್ಣ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತಾಪ್ಲೇಜಂಗ್, ಪಂಚಥಾರ್, ತೇರಹಥುಮ್, ಧನಕುಟ, ಸಂಖುವಾಸಭಾ, ಓಖಲ್ಡುಂಗಾ, ಉದಯಪುರ, ಚಿತ್ವಾನ್, ಗರ‍್ಖಾ, ತನಹು, ಲಮ್ಜುಂಗ್, ಮನಾಂಗ್, ಮುಸ್ತಾಂಗ್, ಮಯಾಗ್ಡಿ, ಕಸ್ಕಿ, ಸ್ಯಾಂಗ್ಜಾ, ಕಠ್ಮಂಡು, ಲಲಿತ್ಪುರ ಮತ್ತು ಭಕ್ತಪುರ ಸೇರಿದಂತೆ ಹಲವಾರು ಗುಡ್ಡಗಾಡು ಜಿಲ್ಲೆಗಳಲ್ಲಿ ಅಕಾಲಿಕ ಪ್ರವಾಹದ ಸಾಧಾರಣ ಅಪಾಯವನ್ನು ಗುರುತಿಸಲಾಗಿದೆ. ಕಾಳಿಕೋಟ್, ಹುಮ್ಲಾ, ಜುಮ್ಲಾ, ದೈಲೇಖ್, ದರ‍್ಚುಲಾ ಮತ್ತು ಬೈತಾಡಿ ಸೇರಿದಂತೆ ಹಲವಾರು ಜಿಲ್ಲೆಗಳ ನದಿಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಅಕಾಲಿಕ ಪ್ರವಾಹದ ಭೀತಿಯನ್ನು ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ನೇಪಾಳ ಸೇನೆಯ ನೇತೃತ್ವದಲ್ಲಿ ಜಂಟಿ ರಕ್ಷಣಾಪಡೆಗಳು ಗುರುವಾರ 9ನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾದವರ ಸಂಖ್ಯೆ 4875ಕ್ಕೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಚೀನಾದ ಗಡಿ ಭಾಗದಲ್ಲಿ, ಟಿಬೆಟ್‌ನ ಗಿರೋಂಗ್ ಕೌಂಟಿಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಬುಧವಾರದ ವೇಳೆಗೆ 541 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹವು ರಸುವಾ ಮತ್ತು ನುವಾಕೋಟ್ ಕಣಿವೆಗಳ ಭೂದೃಶ್ಯವನ್ನೇ ಸಂಪೂರ್ಣವಾಗಿ ಬದಲಾಯಿಸಿ ಹಾಕಿದ್ದು, ನದಿಯ ದಂಡೆಗಳು ಹಾಗೂ ಚಿರಪರಿಚಿತ ಗುರುತುಗಳಿದ್ದ ಸ್ಥಳಗಳು ಕೊಚ್ಚಿಹೋಗಿವೆ.
ನೇಪಾಳ ಪ್ರವಾಹದಲ್ಲಿ ಧ್ವಂಸಗೊಂಡ ಮನೆಯ ಬಳಿ ಕುಳಿತು ಮಾಲಕರಿಗಾಗಿ ಕಾಯುತ್ತಿರುವ ಶ್ವಾನಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್
ಸತತ ಪ್ರವಾಹ ಮತ್ತು ಮಳೆಯಿಂದಾಗಿ ಹಿಮಾಲಯದ ಸೂಕ್ಷ್ಮ ಪರ್ವತ ಶ್ರೇಣಿಗಳ ಮಣ್ಣು ಈಗಾಗಲೇ ಸಡಿಲಗೊಂಡಿದೆ. ಈಗ ಸಂಭವಿಸಿದ ಭೂಕಂಪನದಿಂದಾಗಿ ಮತ್ತಷ್ಟು ದೊಡ್ಡ ಮಟ್ಟದ ಭೂಕುಸಿತಗಳು ಉಂಟಾಗುವ ಅಪಾಯ ಹೆಚ್ಚಾಗಿದೆ. ಪ್ರಮುಖ ಹೆದ್ದಾರಿಗಳು ಬಂದ್ ಆಗುವ ಭೀತಿಯಿದ್ದು, ಗಡಿ ಭಾಗದ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ನೀಡಿದೆ.