ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ (Pakistan) ಮೇಲೆ ಭಾರತ ನಡೆಸಿದ್ದ (Operation Sindoor) ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಪಾಕಿಸ್ತಾನ ಸಾಕಷ್ಟು ಹಾನಿ ಉಂಟಾಗಿದೆ. ಪಾಕಿಸ್ತಾನದ ಹಲವಾರು ವಾಯುನೆಲೆಗಳಿಗೆ ಹಾನಿಯಾಗಿದ್ದ ಸ್ಯಾಟ್‌ಲೈಟ್ ಚಿತ್ರಗಳನ್ನು ಭಾರತ ಬಹಿರಂಗ ಪಡಿಸಿತ್ತು. ಆದರೆ ಪಾಕಿಸ್ತಾನ ಮಾತ್ರ ಅದನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಪಾಕ್ ವಿದೇಶಾಂಗ ಸಚಿವರೇ ಹಾನಿಯನ್ನು ಧೃಡಪಡಿಸಿದ್ದಾರೆ.
ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಅವರು ಅಂತಿಮವಾಗಿ ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತವು ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ನಡೆಸಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿ ಇಶಾಕ್ ದಾರ್, ರಾವಲ್ಪಿಂಡಿಯ ಚಕಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತೀಯ ಕ್ಷಿಪಣಿಗಳು ದಾಳಿ ಮಾಡಿವೆ ಎಂದು ದೃಢಪಡಿಸಿದರು. ದಾಳಿಯಿಂದ ಮಿಲಿಟರಿ ನೆಲೆಗೆ ಹಾನಿಯಾಗಿದೆ ಮತ್ತು ನೆಲೆಯಲ್ಲಿದ್ದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಒಪ್ಪಿಕೊಂಡರು.
ಭಾರತ ಪಾಕಿಸ್ತಾನದ ಮೇಲೆ 36 ಗಂಟೆಗಳಲ್ಲಿ, ಕನಿಷ್ಠ 80 ಡ್ರೋನ್‌ಗಳನ್ನು ಕಳುಹಿಸಿತ್ತು. 79 ಡ್ರೋನ್‌ಗಳನ್ನು ತಡೆಹಿಡಿಯಲು ಸಾಧ್ಯವಾಯಿತು, ಮತ್ತು ಕೇವಲ ಒಂದು ಡ್ರೋನ್ ಮಾತ್ರ ಮಿಲಿಟರಿ ನೆಲೆಯನ್ನು ಹಾನಿಗೊಳಿಸಿತು ಮತ್ತು ದಾಳಿಯಲ್ಲಿ ಸಿಬ್ಬಂದಿ ಕೂಡ ಗಾಯಗೊಂಡರು ಎಂದು ಅವರು ಹೇಳಿದರು. 10 ರಂದು ನೂರ್ ಖಾನ್ ವಾಯುನೆಲೆಯ ಮೇಲೆ ಬೆಳಗಿನ ಜಾವ ದಾಳಿ ನಡೆಸುವ ಮೂಲಕ ಭಾರತ "ತಪ್ಪು ಮಾಡಿದೆ" ಎಂದು ಹೇಳಿದ ಪಾಕಿಸ್ತಾನದ ವಿದೇಶಾಂಗ ಸಚಿವರು, ದಾಳಿಯಿಂದ ಹಾನಿಯಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ನೂರ್ ಖಾನ್ ವಾಯುನೆಲೆಯು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ವಾಯುಪಡೆಯ ಪ್ರಮುಖ ಸೌಲಭ್ಯವಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ದಾಳಿಗೆ ಗುರಿಯಾದ 11 ವಾಯುನೆಲೆಗಳಲ್ಲಿ ಇದು ಸೇರಿತ್ತು. ಸರ್ಗೋಧಾ, ರಫೀಕಿ, ಜಾಕೋಬಾಬಾದ್ ಮತ್ತು ಮುರಿಡ್ಕೆಯಲ್ಲಿನ ವಾಯುನೆಲೆಗಳು ಸಹ ದಾಳಿಗೆ ಒಳಗಾಗಿದ್ದವು.
ದಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್, "ಸಣ್ಣ ಹಾನಿ ಎಂಬುದನ್ನು ತಳ್ಳಿ ಹಾಕಿದ್ದಾರೆ. ದಾರ್ ಸುಳ್ಳು ಹೇಳುತ್ತಿದ್ದಾರೆ. ನೂರ್ ಖಾನ್ ಸಂಪೂರ್ಣವಾಗಿ ನಾಶವಾಗಿದ್ದು, ಪಾಕಿಸ್ತಾನಕ್ಕೆ ಇನ್ನೂ ಚೇತರಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದಾರೆ.