ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sushila Karki: ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಸುಶೀಲಾ ಕರ್ಕಿ ಇಂದು ಪ್ರಮಾಣ ವಚನ ಸ್ವೀಕಾರ

ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಶುಕ್ರವಾರ (ಸೆಪ್ಟೆಂಬರ್‌ 12) ರಾತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ನಿವಾಸದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆ.ಪಿ. ಶರ್ಮಾ ಒಲಿ ರಾಜೀನಾಮೆ ಸಲ್ಲಿಸಿದ 4 ದಿನಗಳ ಬಳಿಕ ಸುಶೀಲಾ ಕರ್ಕಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಸುಶೀಲಾ ಕರ್ಕಿ ಇಂದು ಪ್ರಮಾಣ ವಚನ ಸ್ವೀಕಾರ

ಸುಶೀಲಾ ಕರ್ಕಿ -

Ramesh B Ramesh B Sep 12, 2025 8:15 PM

ಕಠ್ಮಂಡು: ನೇಪಾಳದಲ್ಲಿ ಬಹುದೊಡ್ಡ ರಾಜಕೀಯ ಕ್ರಾಂತಿ ನಡೆದಿದ್ದು, ಜೆನ್‌ ಝೀ ತಲೆಮಾರಿನ ಆಕ್ರೋಶಕ್ಕೆ ತುತ್ತಾಗಿ ಸರ್ಕಾರ ಉರುಳಿದೆ. ಪ್ರಧಾನಿ ಕೆ.ಪಿ. ಶರ್ಮಾ ಒಲಿ (KP Sharma Oli) ರಾಜೀನಾಮೆ ನೀಡಿದ್ದು, ಇದೀಗ ಮಧ್ಯಂತರ ಅಸ್ತಿತ್ವಕ್ಕೆ ಬಂದಿದೆ. ಈ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಶುಕ್ರವಾರ (ಸೆಪ್ಟೆಂಬರ್‌ 12) ರಾತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ನಿವಾಸದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆ.ಪಿ. ಶರ್ಮಾ ಒಲಿ ರಾಜೀನಾಮೆ ಸಲ್ಲಿಸಿದ 4 ದಿನಗಳ ಬಳಿಕ ಸುಶೀಲಾ ಕರ್ಕಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಸಂಸತ್ತನ್ನು ವಿಸರ್ಜಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ಮುಂದಿಟ್ಟು ಜೆನ್‌ ಝೀ ಹೋರಾಟಗಾರರು ಸುಶೀಲಾ ಕರ್ಕಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆನ್‌ ಝೀ ಗುಂಪಿನ ಅಧ್ಯಕ್ಷ ಸುಡಾನ್ ಗುರುಂಗ್, ʼʼಸಂಸತ್ತನ್ನು ವಿಸರ್ಜಿಸುವುದು ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದು. ಅದರ ನಂತರವೇ ಅವರು ಇತರ ಕ್ರಮ ಕೈಗೊಳ್ಳಬಹುದುʼʼ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ನೇಪಾಳದ ಸಂಸತ್ತು ವಿಸರ್ಜನೆಯಾಗಲಿದೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.



ʼʼಜೆನ್‌ ಝೀ ತಲೆಮಾರಿನ ನಿರೀಕ್ಷೆಗಳಿಗೆ ಅನುಗುಣವಾಗಿ ಸಂಪುಟ ರಚನೆಯಾಗಬೇಕು. ನಮ್ಮ ಗುಂಪು ಅದರ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತದೆʼʼ ಎಂದು ಗುರುಂಗ್ ಹೇಳಿದ್ದಾರೆ. ಸಂಪುಟ ರಚನೆ ಮತ್ತು ಸಂಬಂಧಿತ ಪ್ರಕ್ರಿಯೆಗಳ ಕುರಿತು ಇನ್ನೂ ಚರ್ಚೆ ನಡೆಯುತ್ತಿವೆ ಎಂದೂ ಅವರು ವಿವರಿಸಿದ್ದಾರೆ. ವಿಶೇಷ ಎಂದರೆ ಸುಶೀಲಾ ನೇಪಾಳದ ಮೊದಲ ಪ್ರಧಾನಿಯಾಗಲಿದ್ದಾರೆ.

ಈ ಸುದ್ದಿಯನ್ನೂ ಓದಿ: Sushila Karki: ನೇಪಾಳದಲ್ಲಿ ರಾಜಕೀಯ ಕ್ರಾಂತಿ; ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಆಯ್ಕೆ; ಏನಿವರ ಹಿನ್ನೆಲೆ?

ಸಂವಿಧಾನಕ್ಕೆ ತಿದ್ದುಪಡಿ ತರಲು ಆಗ್ರಹ

ನೇಪಾಳದ ಹಾಲಿ ಸಂಸತ್ತನ್ನು ವಿಸರ್ಜಿಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಿ ಎಂದು ಪಟ್ಟು ಹಿಡಿದಿರುವ ಹೋರಾಟಗಾರರು ಜನರ ಆಶೋತ್ತರ ಸರಿಯಾಗಿ ಬಿಂಬಿಸುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತನ್ನಿ ಎಂದಿದ್ದಾರೆ. ಈ ಬಗ್ಗೆ ಜೆನ್‌ ಝೀ ನಾಯಕರಾದ ದಿವಾಕರ್‌ ದಂಲ್‌, ಅಮಿತ್‌ ಬನಿಯಾ, ಜುನಲ್‌ ದಂಗಲ್‌ ಧ್ವನಿ ಎತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಮೇಲಿನ ನಿರ್ಬಂಧ ಮತ್ತು ಮಿತಿ ಮೀರಿದ ಭ್ರಷ್ಟಾಚಾರವನ್ನು ವಿರೋಧಿಸಿ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆ ಬೀದಿಗಿಳಿಯುವ ಮೂಲಕ ಹೋರಾಟ ಆರಂಭವಾಯಿತು. ಸೆಪ್ಟೆಂಬರ್‌ 8ರಂದು ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ, ಸಂಸತ್ತು ಭವನ, ಅಧ್ಯಕ್ಷರ ಕಚೇರಿ, ಪ್ರಧಾನ ಮಂತ್ರಿ ನಿವಾಸ ಮತ್ತು ಹಿರಿಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಪರಿಸ್ಥಿತಿ ತಿಳಿಯಾಗಿದೆ.

ಯಾರು ಈ ಸುಶೀಲಾ ಕರ್ಕಿ?

72 ವರ್ಷ ವಯಸ್ಸಿನ ಸುಶೀಲಾ ಕರ್ಕಿ ನೇಪಾಳದ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ಆಗಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸಾಂವಿಧಾನಿಕ ಮಂಡಳಿಯ ಶಿಫಾರಸಿನ ಮೇರೆಗೆ ಅಂದಿನ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಕರ್ಕಿ ಅವರನ್ನು ಈ ಉನ್ನತ ಹುದ್ದೆಗೆ ನೇಮಿಸಿದ್ದರು. ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕರ್ಕಿ ಯಾವುದೇ ರಾಜಕೀಯ ಪಕ್ಷದ ಹಿನ್ನೆಲೆ ಹೊಂದಿಲ್ಲ.