ಸ್ಟಾಕ್‌ಹೋಮ್, ಅ. 6: ಬೆಲ್ಜಿಯಂ ಮೂಲದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ (Francis Halzen) ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಸ್‌ಕ್ಯೂಬ್ ನ್ಯೂಟ್ರಿನೋ ವೀಕ್ಷಣಾಲಯಕ್ಕೆ ನೀಡಿದ ಮಹತ್ವದ ಕೊಡುಗೆಗಳು ಹಾಗೂ ಖಗೋಳ ಭೌತಿಕ ಮೂಲದ ಅತಿ ಹೆಚ್ಚಿನ ಶಕ್ತಿಯ ನ್ಯೂಟ್ರಿನೋ ಆವಿಷ್ಕಾರಕ್ಕಾಗಿ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (Nobel Prize) ಲಭಿಸಿದೆ. “ಫ್ರಾನ್ಸಿಸ್ ಹಾಲ್ಜೆನ್ ಅಂತಾರಾಷ್ಟ್ರೀಯ ಸಂಶೋಧಕರು ಮತ್ತು ಎಂಜಿನಿಯರ್‌ಗಳ ತಂಡವನ್ನು ಮುನ್ನಡೆಸಿ, ನಮಗೆ ಅದ್ಭುತವಾದ ಉಪಕರಣವನ್ನು ಒದಗಿಸಿದ್ದಾರೆ. ಅವರ ದೃಢಸಂಕಲ್ಪ ಮತ್ತು ವೈಜ್ಞಾನಿಕ ದೂರದೃಷ್ಟಿಯು ಹೊಸ ರೀತಿಯ ಖಗೋಳಶಾಸ್ತ್ರಕ್ಕೆ ದಾರಿ ಮಾಡಿಕೊಟ್ಟಿದೆ” ಎಂದು ಭೌತಶಾಸ್ತ್ರದ ನೊಬೆಲ್ ಸಮಿತಿಯ ಅಧ್ಯಕ್ಷ ಮಾರ್ಕ್ ಪಿಯರ್ಸ್ ತಿಳಿಸಿದ್ದಾರೆ.
ಬೆಲ್ಜಿಯಂನಲ್ಲಿ ಜನಿಸಿದ 82 ವರ್ಷದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ ಅಮೆರಿಕದಲ್ಲಿ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫ್ರಾನ್ಸಿಸ್ ಹಾಲ್ಜೆನ್ 1980ರ ದಶಕದಿಂದಲೇ ದಕ್ಷಿಣ ಧ್ರುವದಲ್ಲಿ ನ್ಯೂಟ್ರಿನೋ ಎಂಬ ಅತ್ಯಂತ ಸೂಕ್ಷ್ಮ ಕಣಗಳನ್ನು ಪತ್ತೆಹಚ್ಚುವ ಮತ್ತು ಅವುಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಬೆಲ್ಜಿಯಂ ಮೂಲದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ ಅವರಿಗೆ ಬೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ:
ಸ್ಟಾಕ್‌ಹೋಮ್‌ನಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಪ್ರಶಸ್ತಿಯನ್ನು ಘೋಷಿಸಿದೆ. ಈ ವರ್ಷದ ಪ್ರಶಸ್ತಿಯ ನಗದು ಬಹುಮಾನ 12 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 12 ಲಕ್ಷ ಅಮೆರಿಕನ್ ಡಾಲರ್) ಆಗಿದೆ.
ಕಳೆದ ವರ್ಷ, ಕ್ವಾಂಟಮ್ ಟನ್ನಲಿಂಗ್ ಎಂದು ಕರೆಯಲಾಗುವ ಉಪಪರಮಾಣು ಕಣಗಳ ವಿಚಿತ್ರ ವರ್ತನೆಯ ಕುರಿತು ಸಂಶೋಧನೆ ನಡೆಸಿದ ಮೂವರು ವಿಜ್ಞಾನಿಗಳಾದ ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಈ ಸಂಶೋಧನೆಯಿಂದ ಎಂಆರ್‌ಐ ಯಂತ್ರಗಳು ಅತ್ಯಂತ ಸೂಕ್ಷ್ಮ ಅಳತೆಗಳನ್ನು ಮಾಡಲು ಸಾಧ್ಯವಾಯಿತು. ಅಲ್ಲದೆ, ಉತ್ತಮ ಗುಣಮಟ್ಟದ ಮೊಬೈಲ್ ಫೋನ್‌ಗಳು ಮತ್ತು ಇನ್ನಷ್ಟು ವೇಗದ ಕಂಪ್ಯೂಟರ್‌ಗಳ ಅಭಿವೃದ್ಧಿಗೆ ಅಗತ್ಯವಾದ ವೈಜ್ಞಾನಿಕ ಅಡಿಪಾಯವನ್ನು ಈ ಸಂಶೋಧನೆ ಹಾಕಿಕೊಟ್ಟಿತು.
ಈ ವರ್ಷದ ನೊಬೆಲ್ ಪ್ರಶಸ್ತಿಗಳ ಘೋಷಣೆಗಳು ಅಕ್ಟೋಬರ್ 5ರಿಂದ ಆರಂಭವಾಗಿದ್ದು, ಮೊದಲಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಯಿತು. ಕಾರ್ಲ್ ಡಿಸೀರೋತ್ (ಅಮೆರಿಕ), ಪೀಟರ್ ಹೆಗೆಮನ್ (ಜರ್ಮನಿ), ಜಾರ್ಜ್ ನಾಗೆಲ್ (ಜರ್ಮನಿ) ಬೆಳಕನ್ನು ಬಳಸಿ ಮೆದುಳಿನೊಳಗಿನ ನರಕೋಶಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಗಮನಿಸಲು ಮತ್ತು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು.
ಬುಧವಾರವೂ (ಅಕ್ಟೋಬರ್ 7), ಗುರುವಾರ (ಅಕ್ಟೋಬರ್ 8) ಕ್ರಮವಾಗಿ ರಸಾಯನ ಶಾಸ್ತ್ರ ಮತ್ತು ಸಾಹಿತ್ಯ ಪ್ರಶಸ್ತಿ ಪ್ರಕಟಿಸಲಾಗುತ್ತದೆ. ಶುಕ್ರವಾರದ (ಅಕ್ಟೋಬರ್ 9) ಶಾಂತಿ ಪ್ರಶಸ್ತಿ ಘೋಷಿಸಿದ ನಂತರ, ಆರ್ಥಿಕ ವಿಜ್ಞಾನದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಸೋಮವಾರ (ಅಕ್ಟೋಬರ್ 12) ಘೋಷಿಸಲಾಗುತ್ತದೆ.