ಲಂಡನ್, ಫೆ. 2: ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಇಂಧನ ಪೂರೈಕೆ ಸ್ಥಗಿತಗೊಂಡಿದ್ದು, ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿದೆ. ಲಂಡನ್-ಬೆಂಗಳೂರು ಮಾರ್ಗದಲ್ಲಿ ಹಾರಾಟ ನಡೆಸುವ ಬೋಯಿಂಗ್ 787-8 ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದು, ಟ್ರಿಪ್ ಕಡಿತಗೊಳಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ 260 ಮಂದಿ ಮೃತಪಟ್ಟ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಕಳೆದ ವರ್ಷ ಪತನವಾದ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ 171ರಲ್ಲಿ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ತನಿಖೆಯ ವರದಿ ತಿಳಿಸಿದ್ದು, ಆತಂಕಕ್ಕೆ ಕಾರಣವಾಗಿದೆ.
"ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಾಣಿಸಿಕೊಂಡಿದೆ ವರದಿ ಮಾಡಿದ್ದಾರೆ. ಈ ಆರಂಭಿಕ ಮಾಹಿತಿಯನ್ನು ಸ್ವೀಕರಿಸಿದ ನಂತರ, ನಾವು ಈ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದೇವೆ ಮತ್ತು ಸಮಸ್ಯೆ ಪರಿಶೀಲಿಸಲು ತಜ್ಞರನ್ನು ಕರೆಸಿದ್ದೇವೆʼʼ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏರ್ ಇಂಡಿಯಾ ವಿಮಾನದಲ್ಲಿ ದೋಷ ಕಂಡುಬಂದ ಬಗ್ಗೆ ಮಾಹಿತಿ:
ಈ ವಿಚಾರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA)ದ ಗಮನಕ್ಕೆ ತರಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮೊದಲ ಆದ್ಯತೆ ಎಂದು ಹೇಳಿದೆ.
ಏರ್ ಇಂಡಿಯಾ ವಿಮಾನ ದುರಂತ- ವರದಿಯಲ್ಲಿರುವ ಟಾಪ್ 10 ಅಂಶಗಳು ಇಲ್ಲಿವೆ
"ವಿಮಾನದಲ್ಲಿ ಕಂಡು ಬಂದ ದೋಷವನ್ನು ಡಿಜಿಸಿಎಗೆ ವರದಿ ಮಾಡಲಾಗಿದೆ. ಡಿಜಿಸಿಎ ನಿರ್ದೇಶನದ ನಂತರ ಏರ್ ಇಂಡಿಯಾ ಎಲ್ಲ ಬೋಯಿಂಗ್ 787 ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರಿಶೀಲಿಸಿದೆ ಮತ್ತು ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಏರ್ ಇಂಡಿಯಾ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ" ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಡಿಜಿಸಿಎ ನಿರ್ದೇಶನಗಳಿಗೆ ಅನುಗುಣವಾಗಿ, ತನ್ನ ಎಲ್ಲ ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳ ಪರಿಶೀಲನೆಯನ್ನು ಪೂರ್ಣಗೊಳಿಸಿರುವುದಾಗಿ ಏರ್ ಇಂಡಿಯಾ ಕಳೆದ ವರ್ಷ ಜುಲೈನಲ್ಲಿ ಘೋಷಿಸಿತ್ತು.
ಲಂಡನ್-ಬೆಂಗಳೂರು ವಿಮಾನಕ್ಕೆ ಏನಾಯ್ತು?
ಸೋಮವಾರ (ಫೆಬ್ರವರಿ 2) ಲಂಡನ್ ಹೀಥ್ರೂ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್‌ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಬೋಯಿಂಗ್ 787-8 ವಿಮಾನ, VT-ANXನ LEFT ಎಂಜಿನ್ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಂಡು ಬಂದಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
"ಎಂಜಿನ್ ಸ್ಟಾರ್ಟ್ ಆಗುವಾಗ ಸ್ವಿಚ್ ಎರಡು ಬಾರಿ RUN ಸ್ಥಾನದಲ್ಲಿ ಲಾಕ್ ಆಗಲು ವಿಫಲವಾಯಿತು ಮತ್ತು CUTOFF ಕಡೆಗೆ ಚಲಿಸಿತು. ಈ ಸ್ಥಿತಿ ವಿಮಾನ ಹಾರಾಟದಲ್ಲಿ ಆಕಸ್ಮಿಕವಾಗಿ ಎಂಜಿನ್ ಸ್ಥಗಿತಗೊಳ್ಳಲು ಕಾರಣವಾಗುತ್ತದೆʼʼ ಎಂದು ಪಕ್ರಟಣೆ ಹೇಳಿದೆ.
ತಪ್ಪಿದ ಭಾರೀ ದುರಂತ; ಏರ್ ಇಂಡಿಯಾ ವಿಮಾನದ ಬಳಿಯೇ ಸುಟ್ಟು ಕರಕಲಾದ ಬಸ್
ಅಹಮದಾಬಾದ್ ದುರಂತಕ್ಕೆ ಕಾರಣ
ಕಳೆದ ವರ್ಷ ಜುಲೈ 12ರಂದು ಏರ್ ಇಂಡಿಯಾ ಫ್ಲೈಟ್ 171 ದುರಂತಕ್ಕೆ ಇದೇ ರೀತಿಯ ಸಮಸ್ಯೆ ಕಾರಣ ಎಂದು ತನಿಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ಎರಡೂ ಎಂಜಿನ್ ಇಂಧನ ನಿಯಂತ್ರಣ ಸ್ವಿಚ್‌ಗಳು ಟೇಕ್ ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ RUNನಿಂದ CUTOFFಗೆ ಸ್ಥಳಾಂತರಗೊಂಡವು. ಇದರ ಪರಿಣಾಮ ಒತ್ತಡ ನಷ್ಟವಾಯಿತು ಎಂದು ಉಲ್ಲೇಖಿಸಲಾಗಿದೆ. ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ನಲ್ಲಿ ಓರ್ವ ಒಬ್ಬ ಪೈಲಟ್ ಇಂಧನ ಸ್ಥಗಿತಗೊಂಡಿರುವುದನ್ನು ಸೂಚಿಸುತ್ತಿರುವುದು ಕಂಡು ಬಂದಿದೆ.
ಬ್ಯಾಕಪ್ ಪವರ್ ಸಿಸ್ಟಮ್ ರಾಮ್ ಏರ್ ಟರ್ಬೈನ್ (RAT) ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಿತು. ಸ್ವಿಚ್‌ಗಳನ್ನು RUNಗೆ ತಂದ ನಂತರ ಒಂದು ಎಂಜಿನ್ ಚೇತರಿಸಿಕೊಳ್ಳಲು ಪ್ರಾರಂಭಿಸಿದರೂ ವಿಮಾನವು ಮಾಮೂಲಿ ಎತ್ತರಕ್ಕೆ ತಲುಪಲು ವಿಫಲವಾಯಿತು.