ಕಾಠ್ಮಂಡು, ಜು. 14: ಕಳೆದ ವಾರ ನೇಪಾಳದ ರಾಜಧಾನಿ ಕಾಠ್ಮಂಡು (Kathmandu) ಪೊಲೀಸರು ಬೈಕ್‌ನ ಟೈರ್ ಲಾಕ್ ಮಾಡಿದ ನಂತರ 25 ವರ್ಷದ ರೈಡ್-ಶೇರಿಂಗ್ ಚಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಪ್ರಧಾನಿ ಬಾಲೇಂದ್ರ (ಬಾಲೆನ್) ಶಾ ನೇತೃತ್ವದ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಮತ್ತೆ ಕಾರಣವಾಗಿದೆ. ಘಟನೆಯನ್ನು ವಿರೋಧಿಸಿ ದೇಶದ ಬಹುಪಾಲು ಜೆನ್ ಝೀ ಪ್ರತಿಭಟನಾಕಾರರು ಮತ್ತೆ ಕಾಠ್ಮಂಡು ಬೀದಿಗಳಿದಿದ್ದಾರೆ (Gen Z Protest in Nepal). ಈ ಘಟನೆಯ ಬಗ್ಗೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ಪ್ರಶ್ನಿಸುತ್ತಿದ್ದಾರೆ. ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಇನ್ನೂ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಅಸಮಾಧಾನ ಹೆಚ್ಚುತ್ತಿದೆ.
ಕಾಠ್ಮಂಡು ಬೀದಿಯಲ್ಲಿ ರೈಡ್-ಶೇರಿಂಗ್ ಚಾಲಕ ಗಣೇಶ್ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಪೊಲೀಸರು ಹಠಾತ್ತನೆ ಆಗಮಿಸಿ ಆತನ ಬೈಕ್‌ನ ಟೈರ್‌ಗೆ ಬೀಗ ಹಾಕಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಗಣೇಶ್ ತನ್ನ ದೇಹದ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ಸುಟ್ಟ ಗಾಯಗಳಿಂದ ಬಳಲಿದ್ದ ಅವರು ಮೃತಪಟ್ಟರು. ಈ ಘಟನೆ ಸರ್ಕಾರ ಮತ್ತು ಆಡಳಿತದ ವಿರುದ್ಧ ಬಹುಕಾಲದಿಂದ ಕುದಿಯುತ್ತಿದ್ದ ಜನರ ಆಕ್ರೋಶವನ್ನು ಮತ್ತೆ ತಾರಕಕ್ಕೇರಿಸಿದೆ.
ವೈರಲ್ ವಿಡಿಯೊ ಇಲ್ಲಿದೆ:
ಕಾಠ್ಮಂಡು ಸರ್ಕಾರಿ ಕಚೇರಿ ಸಿಂಗ್‌ದರ್ಬಾರ್ ಸಚಿವಾಲಯದ ಹೊರಗೆ ನೂರಾರು ಜನರು ಬೀದಿಗಿಳಿದರು. 'ಬಡವರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಿ', 'ಮಾನವ ಹಕ್ಕುಗಳನ್ನು ಗೌರವಿಸಿ' ಮುಂತಾದ ಘೋಷಣೆ ಮೊಳಗಿದವು. ಪ್ರತಿಭಟನಾಕಾರರ ಅಕ್ರಮ ಬಂಧನ ನಿಲ್ಲಿಸುವಂತೆ ಮತ್ತು ಬಾಲೆನ್ ಶಾ ವಲಸಿಗರಿಗೆ ಆಶ್ರಯ ನೀಡಬೇಕೆಂದು ಆಡಳಿತವನ್ನು ಪ್ರತಿಭಟನಾಕಾರರು ಆಗ್ರಹಿಸಿದವು.
ಭಾರತದೊಂದಿಗಿನ ಗಡಿ ಸಮಸ್ಯೆ ರಾಜತಾಂತ್ರಿಕತೆಯ ಮೂಲಕ ಪರಿಹರಿಸಲಾಗುವುದು: ನೇಪಾಳ ಪ್ರಧಾನಿ
2022ರಲ್ಲಿ ಬಾಲೇಂದ್ರ ಶಾ ಮೇಯರ್ ಆಗಿ ಆಯ್ಕೆಯಾದಾಗಿನಿಂದ ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಪೊಲೀಸರ ಆಕ್ರಮಣಕಾರಿ ನಿಲುವು ತೀವ್ರಗೊಂಡಿದೆ. ಮೇಯರ್ ಆಗಿ ಶಾ ನಗರ ನಿರ್ವಹಣೆಗೆ, ವಿಶೇಷವಾಗಿ ಪಾದಚಾರಿ ಮಾರ್ಗಗಳು ಮತ್ತು ಅನೌಪಚಾರಿಕ ಬೀದಿ ಮಾರುಕಟ್ಟೆಗಳ ತೆರವು ಸೇರಿ ನಗರ ನಿರ್ವಹಣೆಯಲ್ಲಿ ಕಠಿಣ ನಿಲುವು ಅನುಸರಿಸಿದ್ದಾರೆ. ಜತೆಗೆ ನದಿತೀರದಲ್ಲಿರುವ ಅತಿಕ್ರಮಣದ ಗುಡಿಸಲು ತೆರವುಗೊಳಿಸುವುದು ಕೂಡ ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು.
ಈ ಅತಿಕ್ರಮಣ ವಿರೋಧಿ ಅಭಿಯಾನಗಳು ಹಲವರು ಅಸಮಾಧಾ ಮೂಡಿಸಿದ್ದವು. ಹೀಗೆ ವರ್ಷಗಳಿಂದ ಮಡುಗಟ್ಟಿದ್ದ ರೋಷ ಇದೀಗ ಪ್ರತಿಭಟನೆಯ ರೂಪದಲ್ಲಿ ಸಿಡಿದಿದೆ.