ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜರ್ಮನಿಯ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ: ಮೂವರು ಭಾರತೀಯರ ಸಾವು, ರೊಮೇನಿಯನ್ ಪ್ರಜೆ ಬಂಧನ!

ಜರ್ಮನಿಯ ಪಶ್ಚಿಮ ಭಾಗದ ಬೋಚುಮ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ 25 ಮತ್ತು 27 ವರ್ಷದ ಇಬ್ಬರು ಯುವತಿಯರು ಹಾಗೂ 26 ವರ್ಷದ ಯುವಕ ಸೇರಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ದಟ್ಟ ಹೊಗೆಯಿಂದ ಅಸ್ವಸ್ಥಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯನ್ ಪ್ರಜೆಯನ್ನು ಪೊಲೀಸರು ಕೊಲೆ ಮತ್ತು ಬೆಂಕಿ ಹಚ್ಚಿದ ಶಂಕೆಯಡಿ ಬಂಧಿಸಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ

ಬರ್ಲಿನ್ : ಪಶ್ಚಿಮ ಜರ್ಮನಿ (West Germany)ಯ ಬೋಚುಮ್ (Bochum) ನಗರದ ಬಹುಮಹಡಿ ವಸತಿ ಸಮುಚ್ಚಯವೊಂದರಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತ (fire tragedy)ದಲ್ಲಿ ಮೂವರು ಭಾರತೀಯ ಪ್ರಜೆಗಳು (Indian citizens) ಸಜೀವ ದಹನಗೊಂಡಿದ್ದಾರೆ. ಬೆಂಕಿಯಿಂದ ಉಂಟಾದ ದಟ್ಟ ಹೊಗೆಯನ್ನು ಉಸಿರಾಡಿ ತೀವ್ರ ಅಸ್ವಸ್ಥಗೊಂಡ ಇತರ ಐವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘೋರ ದುರಂತಕ್ಕೆ ಸಂಬಂಧಿಸಿದಂತೆ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯನ್ ಪ್ರಜೆ (Romanian citizen)ಯನ್ನು ಪೊಲೀಸರು ಕೊಲೆ ಹಾಗೂ ದುರುದ್ದೇಶಪೂರ್ವಕ ಬೆಂಕಿ ಹಚ್ಚಿದ ಶಂಕೆಯ ಮೇಲೆ ಬಂಧಿಸಿದ್ದಾರೆ.

ಮೃತರನ್ನು 25 ಮತ್ತು 27 ವರ್ಷ ವಯಸ್ಸಿನ ಇಬ್ಬರು ಯುವತಿಯರು ಹಾಗೂ 26 ವರ್ಷದ ಓರ್ವ ಯುವಕ ಎಂದು ಜರ್ಮನಿಯ ಸಾರ್ವಜನಿಕ ಪ್ರಸಾರ ಸಂಸ್ಥೆ 'ಡಬ್ಲ್ಯೂಡಿಆರ್' ವರದಿ ಮಾಡಿದೆ. ಮೃತ ಭಾರತೀಯರ ಹೆಸರು, ಗುರುತು ಹಾಗೂ ಅವರು ಭಾರತದ ಯಾವ ರಾಜ್ಯಗಳಿಗೆ ಸೇರಿದವರು ಎಂಬ ನಿಖರವಾದ ವಿವರಗಳನ್ನು ಪೊಲೀಸರು ಸದ್ಯಕ್ಕೆ ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೌರತ್ವದ ವಿವರಗಳೂ ಇನ್ನಷ್ಟೇ ಲಭ್ಯವಾಗಬೇಕಿದೆ.

ಮೋದಿ ವಿರುದ್ಧ ಅಮೆರಿಕದಿಂದ ಹಣಕಾಸು ನೆರವು: ಪ್ರಧಾನಿ ಬೆಂಬಲಕ್ಕೆ ನಿಲ್ಲುವಂತೆ ಭಾರತೀಯ ಯುವಕರಿಗೆ ಗಾಯಕಿ ಮೇರಿ ಮಿಲ್ಬೆನ್ ಕರೆ!

ಸ್ಥಳೀಯ ಕಾಲಮಾನ ಮಂಗಳವಾರ ಮುಂಜಾನೆ ಸುಮಾರು 4:15 ರ ಸುಮಾರಿಗೆ ಬೋಚುಮ್‌ನ ಹಾಫ್‌ಸ್ಟೆಡ್ ಜಿಲ್ಲೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಮೆಟ್ಟಿಲುಗಳ ಮಾರ್ಗದಲ್ಲೇ ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟ ಹೊಗೆ ವೇಗವಾಗಿ ಮೇಲ್ಮುಖವಾಗಿ ವ್ಯಾಪಿಸಿದ್ದರಿಂದ, ಮೇಲಿನ ಮಹಡಿಗಳಲ್ಲಿದ್ದ ನಿವಾಸಿಗಳನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳನ್ನು ಬಳಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆ ತೀವ್ರ ಸವಾಲಾಗಿ ಪರಿಣಮಿಸಿತು. ಅಂತಿಮವಾಗಿ ರಕ್ಷಣಾ ಸಿಬ್ಬಂದಿ ವಿಶೇಷ ಟರ್ನ್‌ಟೇಬಲ್ ಏಣಿಗಳು, ಪೋರ್ಟಬಲ್ ಲ್ಯಾಡರ್‌ಗಳು ಮತ್ತು ಸುರಕ್ಷತಾ ಜಂಪಿಂಗ್ ಕುಷನ್‌ಗಳನ್ನು ಬಳಸಿ ಸಿಲುಕಿಕೊಂಡಿದ್ದ ಹಲವರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಆದರೆ, ಎರಡನೇ ಮಹಡಿಯ ಅಪಾರ್ಟ್‌ಮೆಂಟ್ ಪ್ರವೇಶಿಸಿದಾಗ ಮೂವರು ಭಾರತೀಯರು ಅದಾಗಲೇ ಶವವಾಗಿ ಪತ್ತೆಯಾಗಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದ್ದು, ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿರುವ ಬಲವಾದ ಸಂಶಯ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲೇ ವಶಕ್ಕೆ ಪಡೆಯಲಾದ ರೊಮೇನಿಯನ್ ವ್ಯಕ್ತಿಯನ್ನು ಹೋಮಿಸೈಡ್ ಸ್ಕ್ವಾಡ್‌ನ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಚ್ಚಲಾಗಿದೆಯೇ ಅಥವಾ ನಿರ್ಲಕ್ಷ್ಯದಿಂದ ಸಂಭವಿಸಿದೆಯೇ ಎಂಬುದರ ಕುರಿತು ಜರ್ಮನ್ ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳು ಸಮಗ್ರ ತನಿಖೆ ಮುಂದುವರಿಸಿದ್ದಾರೆ. ವಿದೇಶಾಂಗ ಇಲಾಖೆಯು ಮೃತರ ಕುಟುಂಬಗಳನ್ನು ಸಂಪರ್ಕಿಸಲು ಜರ್ಮನ್ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಮಾಹಿತಿ ಕಲೆಹಾಕುತ್ತಿದೆ.