ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ 1200 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, 4 ಸಾವಿರಕ್ಕೂ ಅಧಿಕ (Nepal Floods) ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಬಳಿಕ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿಕೊಂಡಿದ್ದ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬರೋಬ್ಬರಿ ಒಂಬತ್ತು ದಿನಗಳ (Viral News) ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾರೆ. ಪವಾಡವೆಂಬತೆ ಶ್ರೀಕೃಷ್ಣನ ನಾಮ ಜಪಿಸುತ್ತಿದ್ದ ಅವರನ್ನು ಕೃಷ್ಣ ಜನ್ಮಾಷ್ಟಮಿಯಂದೇ ರಕ್ಷಣೆ ಮಾಡಲಾಗಿದೆ.
ನೇಪಾಳದ ರಸುವಾ ಜಿಲ್ಲೆಯಲ್ಲಿರುವ ತ್ರಿಶೂಲಿ 3A ಜಲವಿದ್ಯುತ್ ಯೋಜನೆಯ 4.5 ಕಿಲೋಮೀಟರ್ ಉದ್ದದ ಸುರಂಗದಲ್ಲಿ ಆಗಸ್ಟ್ 26 ರಂದು ಭೀಕರ ಭೂಕುಸಿತ ಹಾಗೂ ಪ್ರವಾಹದ ನೀರು ನುಗ್ಗಿತ್ತು. ಈ ವೇಳೆ ಮೆಕ್ಯಾನಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಸಂಜಯ್ ಸಾಹ್, ನಿಯಂತ್ರಣ ಕೊಠಡಿಯಲ್ಲಿದ್ದರು. ಸುರಂಗದೊಳಗೆ ನೀರು ನುಗ್ಗುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಸಾಹ್, ತಮ್ಮ ಸಹೋದ್ಯೋಗಿಗಳಿಗೆ ತಕ್ಷಣವೇ ಹೊರಗೆ ಓಡಿಹೋಗುವಂತೆ ಕೂಗಿ ಹೇಳಿದರು. ಆದರೆ, ಎಲ್ಲರೂ ಸುರಕ್ಷಿತವಾಗಿ ಹೊರಬರುವಷ್ಟರಲ್ಲಿ ಸುರಂಗದ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡವು. ಪರಿಣಾಮ ಸಾಹ್ ಹಾಗೂ ಮೆಕ್ಯಾನಿಕಲ್ ಸೂಪರ್‌ವೈಸರ್ ಕಬೀರ್ ಮಹರ್ಜನ್ (45) ಇಬ್ಬರೂ ಒಳಗೇ ಸಿಲುಕಿಕೊಂಡಿದ್ದರು.
ಒಂಬತ್ತು ದಿನಗಳ ನಂತರ ಅಧಿಕಾರಿಗಳು ಅವರನ್ನು ರಕ್ಷಿಸಿದ್ದಾರೆ. ಬದುಕುಳಿದವರು ಈ ಕುರಿತು ಮಾತನಾಡಿದ್ದು, ದುರಂತದ ನಂತರ ಇತರರು ಓಡಿಹೋದ ನಂತರ ಸುರಂಗದೊಳಗೆ ಒಂಬತ್ತು ದಿನಗಳ ಕಾಲ 'ಹರೇ ಕೃಷ್ಣ' ಮಂತ್ರವನ್ನು ಜಪಿಸುತ್ತಲೇ ಇದ್ದೆ ಎಂದು ಹೇಳಿದ್ದಾರೆ. ನಿರಂತರವಾಗಿ 'ಹರೇ ಕೃಷ್ಣ' ಮಹಾಮಂತ್ರವನ್ನು ಜಪಿಸುತ್ತಾ, ನಮ್ಮನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಆಹಾರ ಮತ್ತು ನೀರಿಲ್ಲದೆ ಒಂಬತ್ತು ದಿನ ಕಳೆಯುವುದು ನರಕಸದೃಶವಾಗಿತ್ತು. ಆದರೆ ಕೊನೆಗೂ ಕೃಷ್ಣ ಜನ್ಮಾಷ್ಟಮಿಯ ದಿನವೇ ನಾನು ಹೊರಬಂದಾಗ ನನಗೆ ಮರುಜನ್ಮ ಸಿಕ್ಕಂತಾಯಿತು" ಎಂದು ಹೇಳಿದ್ದಾರೆ.
ಭದ್ರತಾ ಅಧಿಕಾರಿಗಳ ಪ್ರಕಾರ, ಸಾಹ್ ಅವರ ಆರೋಗ್ಯ ಸ್ಥಿರವಾಗಿದ್ದು, ತಕ್ಷಣಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ತ್ರಿಶೂಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ರಕ್ಷಿಸಲ್ಪಟ್ಟ ಮತ್ತೊಬ್ಬ ಕಾರ್ಮಿಕ 45 ವರ್ಷದ ಕಬೀರ್ ಮಹರ್ಜನ್ ಅವರನ್ನು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಕಠ್ಮಂಡುವಿನ ಛೌನಿ ಪ್ರದೇಶದಲ್ಲಿರುವ ನೇಪಾಳ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ